"ಹಾಯ್ ಅಂಕಲ್, ನಾನು ಬರ್ತೆನೆ ನಿಮ್ಮ ಜೊತೆ ನಿಲ್ಲಿ."
ತಿರುಗಿ ನೋಡದೆ ನಾನು ದಿನಾಲು ವಾಕಿಂಗ್ ಹೋಗುವ ಉದ್ಯಾನವನದ ಹತ್ತಿರ ಇರೊ ಮನೆಯ ಹುಡುಗ ರಾಜೇಶ.
"ಬನ್ನಿ ಬನ್ನಿ ಯಂಗ್ ಮ್ಯಾನ್."
"ಅಂಕಲ್ ನಿಮಗೆಷ್ಟು ಎಜ್."
ಒಂದು ಕ್ಷಣ ನನಗೆ ಎದೆಯಾಳದಲ್ಲಿ ಏನೊ ಚುಚ್ಚಿದಂಗಾಯ್ತು. ವಯಸ್ಸು ಎಷ್ಟೆಂದು ಕೆಳಿದ್ದಕ್ಕಲ್ಲಾ. ಯಾಕಿವನು ನನ್ನ ಕೆಳ್ತಿದಾನೆ ಅಂತಾ.
"ಈಗ ಜಸ್ಟ್ 55 ವರ್ಷ ಇನ್ನೂ 45 ವರ್ಷ ಬಾಕಿ ಇದೆ. ಹಿರಿಯರು ಆಶಿರ್ವಾದ ಮಾಡಿದ ಆ "ನೂರು ವರ್ಷ ಆಯಸ್ಸಿಗೆ" ಎಂದೆ. ಇಬ್ಬರೂ ವಯಸ್ಸಿನ ಮೀತಿ ನೋಡದೆ, ಜನರನ್ನು ಕಡೆಗಣಿಸಿ ಜೋರಾಗಿ ನಕ್ಕೆವು.....
"ಅಂಕಲ್ ಒಂದ್ ವಿಷಯ ಕೇಳಲಾ"
"ಯಂಗ್ ಮ್ಯಾನ ಸಾವಿರಾರು ಕೇಳಿ, ಸುಸ್ತಾಗುವರೆಗೂ ನೀವು ಕೇಳಿ ನಾನು ಹೇಳ್ತೆನೆ."
"ಅಂಕಲ್ ನಿಮಗೆ ಮದುವೆ ಆಗಿಲ್ವಂತೆ" ತುಂಬಾ ಗುಟ್ಟನ್ನು ಹೆಳುವವನಂತೆ ಕೇಳಿದ.
"ಅದನ್ಯಾಕ್ರಿ ಇಷ್ಟು ಗುಟ್ಟಾಗಿ ಹೇಳ್ತಿದಿರಿ. ಅದೆನೂ ಅಪರಾಧವಾ ? ಹೌದು ಮದುವೆ ಆಗಿಲ್ಲಾ ಅದಕ್ಕೆ ಇಷ್ಟೊಂದು ರಫ್ & ಟಫ್ ಇದೆನೆ....."
"ನಿಜ ನಿಜ ಅಂಕಲ್, ಮದುವೆ ಆಗದೆ ಇರೋರೆ ಹೀಗೆ ಯಾವಾಗಲೂ ಖುಷಿಯಾಗಿ ಇರ್ತಾರೆ. ನಾವು ಮದುವೆ ಆಗಿ ಭಜಿ ಆಸೆಗೆ ಬೊನಿನಲ್ಲಿ ಸಿಲುಕಿಕೊಂಡಿರುವ ಇಲಿಯಂತಾಗಿ ಹೊರಗೆ ಬರೋಕೆ ಆಗ್ತಿಲ್ಲಾ. ನೀವು ಮದುವೆ ಆಗದೆ ಇರೊ ನಿರ್ಧಾರ ಮಾಡಿದ್ದೆ ಒಳ್ಳೆದಾಯ್ತು." ಅರ್ಧ ಹೆಮ್ಮೆ, ಇನ್ನರ್ಧ ಸಪ್ಪೆಯಿಂದ ಹೇಳಿದ.
"ಯಾರೀ... ನಿಮಗೆ ಹಾಗೆ ಅಂದಿದ್ದು. ನಾನು ಮದುವೆ ಆಗಿಲ್ಲಾ, ಆದರೆ ಆಗೋಕೆ ನಿರ್ಧಾರ ಮಾಡಿದ್ದೆ ಕಣ್ರಿ"
"ಇದೇನ ಅಂಕಲ್ ಇಷ್ಟೊಂದು ವಿಚಿತ್ರವಾಗಿ ಹೇಳ್ತಿದಿರಿ. ಸ್ವಲ್ಪ ಬಿಡಿಸಿ ಹೇಳಬಾರದೆ."
"ಯಂಗ್ ಮ್ಯಾನ್ ನಾನು ಮದುವೆ ಆಗಲು ನಿರ್ಧರಿಸಿದ್ದೆ ಆದರೆ ಹೆಣ್ಣು ಕೊಡಲಿಲ್ಲಾ ಅಷ್ಟೆ....."
"ನಿಮಗೆ ಹೆಣ್ಣು ಕೊಡಲಿಲ್ವಾ ? ಯಾಕೆ ಅಂಕಲ್ ಏನಾಗಿದೆ ನಿಮಗೆ ? ಇಂತಹ ಡೈನಾಮಿಕ ಮನುಷ್ಯನಿಗೆ ಹೆಣ್ಣು ಕೊಡದವರು ಎಂತಹ ನತದೃಷ್ಟರು ಅಂತಿನಿ".
"ನತದೃಷ್ಟ ಅವರಲ್ಲ ಕಣೊ ನನ್ನ ಹುಟ್ಟಿದ ಜಾತಿ."
"ಯಾವ ಜಾತಿ ಅಂಕಲ್ ನಿಮ್ದು ಅವರದು ಯಾವದು ?"
"ನಾವು ಬಣಜಿಗರು, ಅವರು ಬಣಜಿಗರು ಇಬ್ಬರೂ ಲಿಂಗಾಯತರೆ.."
"ಹೋಗಿ ಅಂಕಲ್ ಪದೆ ಪದೆ ನಿಘಂಟಿನಲ್ಲೆ ಮಾತಾಡ್ತಿರಾ ಸ್ವಲ್ಪ ಬಿಡಿಸಿ ಹೇಳಬಾರದೆ."
"ಮರಿ ನಾನು ಹೇಳಿದ್ದು ಅವರು ಆದಿ ಬಣಜಿಗರು, ನಾನು ಶೀಲವಂತ ಬಣಜಿಗ."
"ಲಿಂಗಾಯತರು ಅಂದರೆ ಒಂದೆ ಅಲ್ಲವೆ....! ಅಷ್ಟ ಸಣ್ಣ ವಿಷಯಕ್ಕೆ ಬಿಟ್ಟರಾ ಇದೆಲ್ಲಾ ಗೊತ್ತಿದ್ದು ನೀವು ಹೆಣ್ಣು ಕೇಳೊಕೆ ಹೊಗಿದ್ರಾ?"
"ಇಲ್ಲಾ ಕಣೊ ಮೊದಲೆ ಗೊತ್ತಾಗಿದ್ದರೆ ಹೊಗ್ತಿರಲಿಲ್ಲಾ. ನಮ್ಮ ಬ್ರೋಕರ್ ಬಣಜಿಗ ಅಂತಾ ಕೇಳಿ ಕರೆದುಕೊಂಡ ಹೋದ. ಅಲ್ಲಿ ಹೊಟ್ಟೆಗಿಷ್ಟು ಸರಿಯಾಗಿ ತಿಂದು, ಹೆಣ್ಣು ನನ್ನ ನೋಡಿ, ನಾನು ಹೆಣ್ಣನ್ನು ನೋಡಿ ಕಣ್ಣಲ್ಲೆ ಮಾತಾಡಿ, ಒಪ್ಪಿಗೆಯೂ ಆಗಿ ಎಲೆ ಅಡಿಕೆ ತಿಂದು ಹೊರಡಬೇಕು. ಅಷ್ಟರಲ್ಲಿ ನಮ್ಮ ತಂದೆ ಅದೆ ಊರಿಗೆ ಕೊಟ್ಟಿದ್ದ ಸತ್ತ ನಮ್ಮತ್ತೆಯ ಹೆಸರು ಹೇಳಿದ ಆಗ ಪ್ರಾರಂಭವಾಯ್ತು ಮಹಾಭಾರತ."
"ಇವನಾರವ ಇವನಾರವ ಅನ್ನಬೇಡಯ್ಯ, ಇವ ನಮ್ಮವ ಇವ ನಮ್ಮವ ಎನ್ನಯ್ಯ ಎಂದ ಬಸವಣ್ಣನವರ ಲಿಂಗಾಯತದಲ್ಲಿ ಹೀಗಾ? ಪಾಪ ಬಸವಣ್ಣನವರು ಆತ್ಮ ಎಷ್ಟು ನೊಂದಿರಬೇಡಾ..... ."
"ಲಿಂಗಾಯತರೆಲ್ಲಾ ಒಂದೆ, ಆದರೆ ಅದರಲ್ಲಿ ಮಾಡಿರೊ ಜಾತಿಗಳು ಬಹಳಿಷ್ಟಿದಾವೆ ಮಾರಾಯ. ನಿಮ್ಮ ಮನೆ ದೇವರಿಗೆ ನಮ್ಮ ಮನೆ ದೇವರು ಆಗಲ್ಲ. ನೀರ ಬಳಕೆ ನಡೆಯೊಲ್ಲಾ, ಬಿಗಸ್ತನ ನಡೆಯೊಲ್ಲಾ ಅಂತಾ ಶಕುನಿ ಕಾಲದಲ್ಲಿ ಯಾವ ಶಕುನಿ ಮಾಡಿಟ್ಟಿದ್ದನೊ ಆ ನೀತಿಯನ್ನು. ಅಂತೂ ನಾನು ನೋಡಿ ಇಷ್ಟಾಪಟ್ಟಿದ್ದ ಮೊಟ್ಟ ಮೊದಲ ಹೆಣ್ಣಿನ ವಿಷಯದಲ್ಲಿ ಅಡ್ಡ ಬಂದು ರಾಮಾಯಣ ನಡೆದು ಮಧ್ಯ ಬಂದಿದ್ದ ಬ್ರೋಕರ್ ಗೆ ಇಬ್ಬರ ಕಡೆಯಿಂದಲೂ ಇಷ್ಟಿಷ್ಟು ಉಗಿದು ಮನೆಗೆ ಬಂದ್ವಿ. ಅವತ್ತೆ ನಿರ್ಧಾರ ಮಾಡಿದೆ ಕಣೊ.. ಮದುವೆ ಆದರೆ ಅವಳನ್ನೆ ಇಲ್ಲಂದರೆ ಬ್ರಹ್ಮಚಾರಿಯಾಗಿ ಇರ್ತಿನಿ ಅಂತಾ."
"ಹಾಗಾದರೆ ಲವ್ ಮ್ಯಾರೆಜ್ ಆಗಬಹುದಿತ್ತು ಅಲ್ವಾ"
"ಅಯ್ಯೋ ಮಾರಾಯ ನಮ್ಮ ಕಾಲದಲ್ಲಿ ಪ್ರೇಮ ಎಂಬುದು ರೊಡ ರೋಡಲ್ಲಿ ಸುಲಭವಾಗಿ ಸಿಗೊ ವಸ್ತು ಆಗಿರಲಿಲ್ಲಾ, ನಾನು ನಿರ್ಧಾರ ತೆಗೆದುಕೊಳ್ಳುವಷ್ಟರಲ್ಲಿ ಆಕೆಯ ಮದುವೆಯಾಗಿತ್ತು. ಹಾಗಾಗಿ ನಾನು ಸನ್ಯಾಸಿಯಾಗದೆ ಬ್ರಹ್ಮಚಾರಿಯಾಗಿ ಉಳಿದೆ."
"ಅಂತೂ ನಿಮ್ಮದು ಭೀಷ್ಮ ಪ್ರತಿಜ್ಞೆ ಅಂತಾಯ್ತು."
"ಒಂದ ರೀತಿ ಹಾಗೆ ಕಣಪ್ಪ, ಆದರೆ ಆತ ಯಾರನ್ನೂ ಮೊಹಿಸಲಿಲ್ಲಾ ನಾನು ಮೊಹಿಸಿ-ನೊಯಿಸಿಕೊಂಡೆ."
"ಯಾರೂ ಅಂಕಲ್ ಆ ಹೆಣ್ಣು ಈಗ ಹೇಗಿದ್ದಾರೆ ? ಎಲ್ಲಿದ್ದಾರೆ.?"
"ಬೇಡ ಮಗು ಈಗ್ಯಾಕೆ ಆ ವಿಚಾರ."
"ಹೇಳದಿದ್ದರೆ ನನ್ಮೆಲೆ ಆಣೆ"
ಎಲ್ಲಾ ತಿಳಿದುಕೊಂಡ ಹುಡುಗ ಬಸವಣ್ಣನವರ ಬಗ್ಗೆ ಓದಿಕೊಂಡಾತ ಹೇಳಿದರೆ ಅರ್ಥ ಆಗಬಹುದು ಅಂದುಕೊಂಡು.
"ಇದೇ ಊರು ಕಣಪ್ಪ ಆಕೆಯದು. ಎರಡು ಮಕ್ಕಳಿದ್ದಾವೆ ಗಂಡ ತೀರಿಕೊಂಡಿದ್ದಾನೆ."
"ಇದೆ ಊರಾ..? ಯಾರು ಅಂಕಲ್ ?"
ನಾನು ಕೊಂಚ ಆತನ ಕಣ್ಣನ್ನು ನೋಡಿ ಸ್ವಲ್ಪ ಸಂಕೋಚದಿಂದ
"ಆಕೆಯ ಎರಡನೇಯ ಮಗ ನೀನೆ ಕಣಪ್ಪ. ನಿನ್ನಮ್ಮನನ್ನೆ ನಾನು ಇಷ್ಟಪಟ್ಟಿದ್ದು."
ಇಷ್ಟೊತ್ತು ಸಮಾಧಾನವಾಗಿ ನಗುಮುಖದಿಂದ ಉಲ್ಲಾಸಭರಿತನಾಗಿದ್ದ, ಜಾತಿಯ ಮೌಢ್ಯತೆಯನ್ನು ವಿರೊಧಿಸಿದಾತ, ನನಗಾದ ಅನ್ಯಾಯ, ಲಿಂಗಾಯತದಲ್ಲಿ ಭೇದಭಾವ ಇಲ್ಲಾ ಅಂತಾ ನಂಬಿದ್ದ ಆ ಯಂಗ್ಮ್ಯಾನ್ ರಾಜೇಶನ ಉಸಿರು ವೇಗವಾಗ ತೊಡಗಿತು, ಕಣ್ಣು ಕೆಂಪಾಗತೊಡಗಿತು, ಹಲ್ಲುಗಳು ಗಟ್ಟಿಯಾಗಿ
"ಎನೋ ಮುದುಕ. ನನ್ನಮ್ಮನ ಮೇಲೆ ಕಣ್ಣ ಹಾಕಿದ್ದಾ ಬೊಳಿಮಗನೆ. ಈ ಕ್ಷಣ ಇಲ್ಲಿಂದ ಎದ್ದು ಹೋಗು"ಅಂದಾ.
ಇಷ್ಟೊತ್ತು ನನ್ನನ್ನ ಡೈನಾಮಿಕ್ ಅಂತಿದ್ದವನು ಈಗ ಮುದುಕ ಅಂದ, ಲಿಂಗಾಯತರ ಕುರಿತಂತೆ ಸಜ್ಜನ ನುಡಿಗಳನ್ನಾಡುತ್ತಿದ್ದವನು ಬೊಳಿಮಗನೆ ಅಂದಾ. ಇಂತಹ ಸಾಕಷ್ಟನ್ನು ಜೀವಮಾನದಲ್ಲಿ ಕಂಡಿದ್ದ ನನಗೆ ಹೆಚ್ಚಿಗೆ ಏನು ನೋವಾಗಲಿಲ್ಲಾ. ಆದರೆ ನೋವಂತು ಆಯ್ತು ನನ್ನ ಕಥೆ ಕೇಳಿದ ಮೇಲೆ ನಾನು ಇವನಿಂದ ಎರಡ ಬಗೆಯ ಭಾವನೆಯನ್ನು ನೀರಿಕ್ಷಿಸಿದ್ದೆ. ಕೊನೆಗೆ ಎರಡನೇಯ ಬಗೆಯ ಭಾವನೆನೆ ವ್ಯಕ್ತವಾಯ್ತು. ಮೊದಲನೆಯ ಭಾವನೆ ವ್ಯಕ್ತವಾಗಬೇಕಾದರೆ ಬಹುಶಃ ಮುಂದಿನ ಜನರೆಷನ್ ಬರಬೇಕು ಅನಿಸುತ್ತೆ ಅಥವಾ ಬಸವಣ್ಣನವರೆ ಮರುಜನ್ಮ ಪಡಿಬೇಕು.........
ರಾಜು ಪಾಟೀಲ(ಸಿಂದಗಿ)
9611042409
#ಮದುವೆ #ಲಿಂಗಾಯತರು #ಬಣಜೀಗರು #ಉತ್ತರಕರ್ನಾಟಕ #ಸಿಂದಗಿ #ಲವ್ #ರಾಜುಪಾಟೀಲ #ಭೀಷ್ಮ #ಮಹಾಭಾರತ #ರಾಜಕುಮಾರ #ವಿಷ್ಣುವರ್ದನ *ಕನ್ನಡಕುವರ *ಬೇಂದ್ರೆ



4 ಕಾಮೆಂಟ್ಗಳು
ಸೂಪರ್
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಜಾತಿಯ ಸಮಸ್ಯೆ ಶತಶತಮಾನಗಳಿಂದ ನಮ್ಮ ಸಮಾಜದಲ್ಲಿರುವ ಒಂದು ಮಾನವವಿರೋಧೀ ಪಿಡುಗಾಗಿದೆ. ಲಿಂಗಾಯತ ಒಳಪಂಗಡಗಳಲ್ಲಿ ಮೇಲು ಕೀಳು ಬೇರುಬಿಟ್ಟದ್ದು ಶರಣಸಮಾಜದ ದುರಾದೃಷ್ಟವೇ ಸರಿ.
ಪ್ರತ್ಯುತ್ತರಅಳಿಸಿನಿಮ್ಮ ಬರಹ ನಿಜವನ್ನೇ ಹೊರಹಾಕಿದೆ
ನಿಜಾ ಸರ್. ಲಿಙಗಾಯತರೆಂಬ ಶ್ರೇಷ್ಠ ಪಂಗಡದಲ್ಲಿ ಸಣ್ಣ ಸಣ್ಣ ವಿಷಯ ದೊಡ್ಡ ಪಿಡುಗುಗಳಾಗಿವೆ.
ಅಳಿಸಿ