Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಮಳೆಯಲಿ ನೆನೆಯುತಾ

 


           "ಮಳೆಯಲ್ಲಿ ನೆನೆದರೆ ಜ್ವರಾ, ನೆಗಡಿ ಬರುತ್ತೆ ಕಣೆ. ನಿನಗೆ ಜ್ವರದಲ್ಲಿ ನೋಡೊಕೆ ನನ್ನ ಕಡೆಯಿಂದ ಆಗಲ್ಲ‌ ಕಣೆ. ಸಾಕು ನೆನೆದಿದ್ದು, ನಡಿ ಎಲ್ಲಾದರೂ ಮಳೆಯಿಂದ ತಪ್ಪಿಸೊ ಜಾಗ ಹುಡುಕಿ ಅಲ್ಲಿ ನಿಲ್ಲೊಣ."

          "ರಾಜಿ ಬೇಡಾ ಕಣೊ ಇವತ್ತು ಮಳೆ ನಿಲ್ಲೊತನ ನೆನೆಯೊಣ, ಕುಣಿಯೋಣ, ಹಾಡೊಣ ಬಾ ಕಣೊ ಲೆಟ್ಸ್ ಎಂಜಾಯ್."

       ಶ್ವೇತಾಳದ್ದು ಯಾವಾಗಲೂ ಮಗುವಿನ ಹಠ. ಹೇಳಿದರೆ ಕೇಳಲ್ಲ. ತನಗೆ ಇಷ್ಟವಾದದ್ದನ್ನು ಬಿಡಲ್ಲ. ಅದೆ ರೀತಿ ಇವತ್ತು ಕೂಡಾ ಮಳೆಯಲ್ಲಿ ಖುಷಿ ಪಡ್ತಿದಾಳೆ. ಅದು ಖುಷಿನಾ ? ಇಲ್ಲಾ ದುಖಃನಾ ? ಒಂದು ಅರ್ಥ ಆಗುತ್ತಿಲ್ಲ. ಆಕೆ ರಾಜೇಶನನ್ನ ಕರೆಯುತಿದ್ದಿದ್ದೆ ರಾಜಿ ಅಂತಾ. ಆಕೆಯ ಮೊಬೈಲ್‌ನಲ್ಲಿ ಅವನು ರಿಂಗಣಿಸಿದರು ಅದು ರಾಜಿ ಅಂತಲೆ ಹೆಸರು ಬಂದು ಕುಣಿತಿತ್ತು. ಎಷ್ಟೊ ಸಲ ಆಕೆಯ ಮನೆಯವರು ಅದನ್ನ ನೊಡಿ "ಚಿನ್ನಿ ಯಾರೋ ನಿನ್ನ ಗೆಳತಿ ರಾಜೀ ಪೋನ ಮಾಡಿದಾಳೆ ನೋಡು" ಅಂದಿದ್ದು ಇದೆ. ಅದರಿಂದ ತಪ್ಪಿಸಿಕೊಂಡಿದ್ದು ಇದೆ. ಹಾಗಾಗಿ ಆಕೆ ಯಾವಾಗಲೂ ರಾಜೇಶನನ್ನ ರಾಜೀ ಅಂತಲೆ‌ ಕರೆಯುತಿದ್ದಳು.

       ಇವತ್ತು ಬೆಳ್ಳ ಬೆಳಗ್ಗೆನೆ ಫೋನ ಮಾಡಿ ಕರೆದಿದ್ದಳು. ಈ ದಿನ ಮುಖ್ಯವಾದ ದಿನ ಆಗಿತ್ತು, ಆಕೆಯ ಬದುಕಲ್ಲಿ ಮತ್ತು ಇವನ ಬಾಳಲ್ಲಿ. "ಈ ಪ್ರೀತಿ ಅನ್ನೊದು ಒಂಥರ" ಅಂತ ಹಿರಿಯ ಪ್ರೇಮಿಗಳು ಅಂದಿದ್ದು ಸುಳ್ಳಲ್ಲ. ಹುಟ್ಟಿದ್ದು ಕಣ್ಣಿಂದ ಆದರೂ ಅದು ದೇಹವೆಲ್ಲಾ ಸೇರಿ‌ ಹೃದಯದಲ್ಲಿ ಒಂದು ಪುಟ್ಟ ಮನೆ ಮಾಡಿ, ಅದರ ಆಯಸ್ಸು ಮುಗಿಯುವ ಹಂತ ಬಂದಾಗ ಮತ್ತೆ ದುಃಖಿಸೋದು ಪುನಃ ಅದೆ ಕಣ್ಣು, ನೀರು ಹಾಕೋದು ಕೂಡಾ ಅದೆ ಕಣ್ಣು. ಆದರೆ ರಾಜೇಶ ಮತ್ತು ಶ್ವೇತಾಳದ್ದು ಅಂತಹ ಪ್ರೇಮ್ ಕಹಾನಿ ಅಲ್ಲಾ. ಇಬ್ಬರೂ ಕಾಠಿಣ್ಯತೆ ಉಳ್ಳವರು, ನೋವು ಪಡುವವರಲ್ಲ ಪ್ರಾಕ್ಟಿಕಲ್ ಜೋಡಿ. ಕಳೆದ ಮೂರು ವರ್ಷದಿಂದ ಪ್ರೇಮಿಸುತ್ತಿದ್ದರು. ಒಂದಿನವೂ ಇಬ್ಬರೂ ಬೇರೆಯಾಗಿಲ್ಲಾ, ದುಃಖಿಸಲಿಲ್ಲಾ‌ ಕಣ್ಣೀರು ಹಾಕಲಿಲ್ಲ.

            ಆಕೆಗೆ ಮಳೆ ಎಂದರೆ ಇಷ್ಟಾ ಇವನಿಗೆ ಚಹಾ ಅಂದರೆ ಪಂಚ ಪ್ರಾಣ. ಆತ ಕವಿ, ಈಕೆ ಫಿಲ್ಮಿ. ಆಕೆ ತುಂಬಾ ಮಾತಿನ ಮಲ್ಲಿ, ಇವನು ಆಕೆಯ ಮಾತಿಗೆ ಕಿವಿಯಾಗೂವ ಹುಂಬ. ಗಣಿತದ ಮೇಸ್ಟ್ರು ಕಲಿಸಿದಂತೆ ಪ್ಲಸ್ + ಪ್ಲಸ್ = + ಎಂಬಂತೆ ಇವರು ಕೂಡಾ ಜೋಡಿಯಾಗಿದ್ದರು ಮತ್ತು ಅದನ್ನ ನೆನಸಿ ಖುಷಿ ಪಡುತ್ತಿದ್ದರು. 

           ಯಾರ ಕೆಟ್ಟ ದೃಷ್ಟಿ ಕೂಡಾ ಬಿಳದಂತೆ ಇದ್ದರು. ಅವನಿಗೆ ಅವಳು, ಅವಳಿಗೆ ಅವನು ಬೆಸ್ಟ ಪ್ರೇಂಡ್ಕಿಂತ ಜಾಸ್ತಿಯಾಗಿದ್ದರು. ಆತ ಬಡವ ಈಕೆ ಮಧ್ಯಮ ವರ್ಗ. ಆದರೆ ಇವರಿಬ್ಬರಲ್ಲಿ ಒಮ್ಮೆಯೂ ವರ್ಗದ ಮಾತುಗಳು ಬರಲಿಲ್ಲ. ಯಾವ ಲೈಲಾ ಮಜ್ನುಗಿಂತಲು ಒಂದಿಂಚು ಹೆಚ್ಚೆ ಎನ್ನಬಹುದು ಇವರ ಪ್ರೀತಿ, ಪ್ರೇಮ.

       ಆ ಪಾರ್ಕನಲ್ಲಿ ಯಾರೂ ಇರಲಿಲ್ಲ. ಅಫಕೊರ್ಸ ಮಳೆಯಲ್ಲಿ ಯಾವನು ಆ ಪಾರ್ಕ ಸವಿ ಸವಿಯಬಲ್ಲ. ಸವಿಯೋರು ಮಾತ್ರ ನಿಸರ್ಗ ಪ್ರೇಮಿಗಳೆ ಆಗಿರಬೇಕು. ಅದಕ್ಕೆ ಇವರೆನು ಕಡಿಮೆನಾ ? ಪೂರ್ಣಚಂದ್ರ ತೇಜಸ್ವಿಯವರನ್ನ ತಮ್ಮಲ್ಲಿ ಆವ್ಹಾನಿಸಿಕೊಳ್ಳಬಲ್ಲ ಜೋಡಿಗಳಿವೂ. ಅದು ವರ್ಷದ ಮೊದಲ ಮಳೆ. ಕಾದ ಭೂಮಿ, ಇನಿಯನಿಗೆ ಕಾದು ಅವನಲ್ಲಿ ಬೊರ್ಗರೆಯುವ ಸಮಯ. ಧೂಳು ತಿಂದು ತಿಂದು ಸ್ನಾನವನ್ನೆ ಕಾಣದ ಮರಗಳು ಇಂದು ಮನಸ್ಸು ತುಂಬಿ ಮಳೆಯ ನೀರಿಗೆ  ಮೈಯೊಡ್ಡಿ ನಿಂತಿವೆ. ಗಾಳಿಯ ರಭಸಕ್ಕೆ ಮರದ ಎಲೆಗಳು ಕುಣಿತಿವೆ. ಮಳೆಯ ಹನಿಗಳು ಮುತ್ತಿನ ಬಣ್ಣದಿಂದ ಸ್ಪರ್ಧೆಗೆ ಇಳಿದವರಂತೆ ಉದುರುತ್ತಿವೆ. ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟೊಂದು ಸೌಂದರ್ಯ. 

             "ರಾಜೀ ಸ್ವರ್ಗ ಹಿಂಗೆ ಇರುತ್ತೆ ಏನೊ?" ಗಂಭಿರವಾಗಿ ಮಳೆಯ ಹನಿಗಳ ಕಡೆ ಗಮನಿಸುತ್ತಾ ರಾಜೇಶನನ್ನು ಕೇಳಿದಳು. "ಇರಬಹುದು ಶ್ವೇತಾ" ಇತನದ್ದು ಒಂದೆ ವಾಕ್ಯ. "ಸ್ವರ್ಗದಲ್ಲಿ ಇಂದ್ರ ಮತ್ತು ಇಂದ್ರ ರಾಣಿಯರು ಇರ್ತಾರೆ. ಅದಕ್ಕೆ ಸ್ಚರ್ಗ ಬಲು ಚಂದ ಅಲ್ವೆನೋ" ಎಂದು ಬಲಕ್ಕೆ ನಿಂತಿದ್ದ ಇತನ ಮುಖವನ್ನು ನೋಡಿದಳು. ಕಣ್ಣುಗಳು ಭಾವುಕತೆಯಿಂದ ಕೂಡಿದ್ದವು. ಇಷ್ಟೊತ್ತು ಅರಳಿದಂತಿದ್ದ ಮುಖ ಈಗ ಗಂಭಿರವಾಗಿತ್ತು. ರಾಜೇಶ ಉತ್ತರ ನೀಡಲಿಲ್ಲ. ಮೌನಿಯಾಗಿ ಒಂದೆರಡು ಹೆಜ್ಜೆ ಮುಂದೆ ಹೋಗಿ ಮಳೆಯ ಹನಿಗೆ ಕೈಯೊಡ್ಡಿದ. ಆತನ ಬೆನ್ನನ್ನು ಗಮನಿಸುತ್ತಾ ಇವಳು ಮೂಕಳಾದಳು. ಇಬ್ಬರೂ ಕಣ್ಣಾಲಿಗಳು ತುಂಬಿ ಕೆನ್ನೆಗೆ ಬಂದಿದ್ದವು. ಆದರೆ ಅವರ ಕಣ್ಣಿರು ಮಳೆಯ ಹನಿಯಲ್ಲಿ‌ ಲೀನವಾಗಿದ್ದವು.

         "ರಾಜೀ ಗಾಡಿಯ ಕಡೆ ಹೊಗೊಣ್ವಾ"ಎಂದಳು. ತಿರುಗಿದ ರಾಜೇಶ ಮೌನ ಭಾಷೆಯಲ್ಲಿ ಸಮ್ಮಿತಿಸಿದ. ಮಳೆ ಹನಿಗಳಿಂದ ಮೆತ್ತಗೆ ಆಗಿದ್ದ ಆತನ ಅಂಗೈ, ಇವತ್ತು ಯಾಕೋ ಆಕೆಯ ಮೆದು ಕೈಯನ್ನು ಹಿಡಿಯಲು ಬಯಸಿದ್ವು. ಆದರೆ ಭಯ, ಸಂಕಟ. ಆಕೆ ಮುಂದೆ, ಇತ ಹಿಂದೆ. 


    "ಅಪ್ಸರೆ ಅಲ್ಲವಾ ಶ್ವೇತಾ, ಭಗವಂತ ಸಮಯವನ್ನು ತೆಗೆದುಕೊಂಡು ಮಾಡಿದಂತ ಹುಡುಗಿ ಇವಳು. ಈಕೇ ನಿಜವಾಗಿ ಇಂದ್ರಲೋಕದಲ್ಲಿ ಇರಬೇಕಾದವಳನ್ನ, ತನ್ನ ಹೆಂಡತಿಯ ಅಸೂಯೆಯನ್ನು ಎದುರಿಸಲಾಗದೆ  ಭೂಲೋಕದಲ್ಲಿ ಇಳಿಸಿಬಿಟ್ಟಿದ್ದಾನೆ ಭಗವಂತ. ಸತ್ಯವಾಗಲೂ ಸೌಂದರ್ಯ ದೇವಿ ಕೂಡಾ ಇವಳನ್ನ‌ ಕಂಡು ಅಸೂಯೆ ಪಡಬೇಕಾದ ರೂಪವತಿ ನನ್ನ ಶ್ವೇತಾ" ಹಾಗೆ ಮನಸ್ಸಲ್ಲಿ ಗುನಗುನಿಸುತ್ತಾ ಅವಳ ಕಡೆನೆ ನೋಡುತ್ತಾ ಹೊರಟಾಗ ಥಟ್ಟನೆ ತಿರುಗಿದಳು, ಗರಬಡಿದವನಂತೆ ನಿಂತ ರಾಜೇಶ. "ರಾಜೀ ನಿ ಇಲ್ಲೆ ಇರು, ನಾನೇ ಹೋಗಿ ಗಾಡಿಯಲ್ಲಿನ ಕಾರ್ಡ ತರುತ್ತೇನೆ ಎಂದಳು" ಸ್ವಲ್ಪ ಮಳೆ‌ ಕೂಡಾ ಕಡಿಮೆಯಾಗಿತ್ತು. 

         ಅವತ್ತು ಇವನು ಕಪ್ಪು ಪ್ಯಾಂಟು, ಬಿಳಿಯ ಶರ್ಟ ಹಾಕಿದ್ದ ಇದು ಶ್ವೇತಾ ಇಷ್ಟಪಡುವ ಬಟ್ಟೆ. ಆಕೆ ಶ್ವೇತ ವಸ್ತ್ರ ಚೂಡಿದಾರ ಹಾಕಿದ್ದಳು ಅದು ಇತ ಇಷ್ಟ ಪಡುತ್ತಿದ್ದ ಬಣ್ಣ. ಟ್ರೈನ್ ಮಿಸ್ಸಾಗೊ ಅವಸರದಲ್ಲಿ ಬಂದಂತೆ ಇವನಲ್ಲಿ ಅವಸರವಾಗಿ ಬಂದಳು. ಇವನ ಕಣ್ಣಣ್ಣು ಎದುರಿಸಲಾಗದೆ ಕಾರ್ಡನ್ನು ಹೊರಗೆ ತೆಗೆದವಳೆ ಇವನ ಕೈಗೆ ಕೊಡಲು ಹೋದಳು. ಅದೆಲ್ಲಿತ್ತೋ ವರುಣ ದೇವನಿಗೆ ಕೋಪ ಇವರು ಈ ಮೊದಲು ನಿಂತಿದ್ದ, ಇವರಿಗಿಂತ ಇಪ್ಪತ್ತೆ ಅಡಿ ದೂರದ ಮರಕ್ಕೆ ಸಿಡಿಲು ಬಡಿದು ಬಿಡ್ತು. ಹಿರೋಶಿಮಾ, ನಾಗಾಸಾಕಿಯ ಮೇಲೆ‌ ಒಮ್ಮೆಲೆ ಅಣುಬಾಂಬ ಹಾಕಿದ ಶಬ್ದ. ಹೆದರಿ ಶ್ವೇತಾ ಕೂಗಿಕೊಂಡು ರಾಜೇಶನ ಎದೆಗೆ ಅವಚಿಕೊಂಡಳು. ಕ್ಷಣದಲ್ಲೆ‌ ಆ ಮರ ಸುಟ್ಟು‌ ಕರಕಲಾಯಿತು. ಹತ್ತು ನಿಮಿಷಗಳ ಹಿಂದೆ ರಾಜೇಶ ಮತ್ತು ಶ್ವೇತಾ ಅದೆ ಮರದ ಹತ್ತೀರ ನಿಂತಿದ್ದರು.

         "ಸದ್ಯ ಜೀವ ಉಳಿತು ರಾಜೀ" ಎಂದಳು. ಆತನಿಗೆ ಅದರ ಪರಿವೆಯೆ ಇಲ್ಲದಂತೆ ಯೋಗಿಯ ಮೂಕ ಭಾವವನ್ನು ಹೊತ್ತು ಆ ಸಿಡಿಲನ್ನೆ ಗಮನಿಸುತ್ತಾ ಮುಗುಳುನಗುತ್ತಿದ್ದ. "ನೀ ಬರದೆ ಇದ್ದರೆ ಒಳ್ಳೆದು ರಾಜೀ, ನನಗೆ ಸಹಿಸೋಕ ಆಗಲ್ಲ" ಈ ಸಲ ಮಾತ್ರ ರಾಜೇಶನ ಕಣ್ಣಲ್ಲಿ‌ ದೃಷ್ಟಿ ನೆಟ್ಟಿದ್ದಳು. ಸಿಡಿಲ ಮರದ‌ ಕಡೆಯಿಂದ ಇಕೆಯ ಕಣ್ಣಿಗೆ ಆತ ದೃಷ್ಟಿಯನ್ನು ಸೇರಿಸಿದಾಗ ಇಬ್ಬರಿಗೂ ಅರಿವಿಲ್ಲದಂತೆ‌ ಮತ್ತೆ ಕಣ್ಣಿರು‌ ಜಿನುಗಿದವು. ಆದರೆ ಈ ಸಲ ಅವರ ಕಣ್ಣಿರಿಗೆ ಮಳೆಯ ಹನಿ ಜೊತೆ ನೀಡಲಿಲ್ಲ. ತಮ್ಮ ಕೈಗಳಿಗೆ ಬುದ್ದಿಹೇಳಿ ಕಣ್ಣಿರು ಕೆನ್ನೆಗೆ ಜಾರೋಕ್ಕಿಂತ ಮುಂಚೆಯೆ ವರೆಸಿಕೊಂಡರು.

"ಚಿ.ಸೌ. ಶ್ವೇತಾ (BE,LLM) ಜೊತೆ ರೋಹಿತ್ (ME) (Joint Commissioner BBMP). ಜುಲೈ 14 ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ". ಬೇಕಿರೊದನ್ನ ಮಾತ್ರ ಓದಿದ ರಾಜೇಶ. ತಕ್ಷಣ ಅದನ್ನ ಮಡಚಿಟ್ಟು "All the best ಶ್ವೇತಾ" ಎಂದ. ಏಕೆಂದರೆ ಮದುವೆಗೆ ಹೋಗಿ ಶುಭಾಶಯ ಕೊರುವ ಭಾಗ್ಯ ಅವನಿಗಿಲ್ಲ. ಮದುವೆ ಮನೆಯಲ್ಲಿ ಆತನ ನೋಡಿ ತಡೆದುಕೊಳ್ಳೊ ಶಕ್ತಿ ಇವಳಿಗಿಲ್ಲಾ.

      ಆತ ಆಕೆಯಿಂದ ವಿರುದ್ದ ದಿಕ್ಕಿಗೆ ತಿರುಗಿದ. ಮನೆಯ ಕಡೆ ಹೆಜ್ಜೆ ಹಾಕತೊಡಗಿದ. ಒಂದೆರಡು ಹೆಜ್ಜೆ ಹಾಕಿರಬಹುದು  "ರಾಜೀ…!" ಎಂದಳು ತಿರುಗಿದ. "ಒಂದೆ ಒಂದ ಸಲ ತಬ್ಬಿಕೊಳ್ಳೊ" ಆತನ ತೋಳ ಬಂದಿಗಾಗಿ ಇಕೆ ಕೈಚಾಚಿದಳು. ಈತ ಮರಳಿ ತನ್ನ ಹೆಜ್ಜೆಗೆ ಹೆಜ್ಜೆ ಬೆರೆಸಿ ಪಾರ್ಕನಿಂದ ಹೊರನಡೆದ. ಇದೆ ಮೊದಲ ಸಲ ಆಕೆಯ ಮಾತಿಗೆ ಈತ ಕಿವಿ ಕೊಡಲಿಲ್ಲ.

           "ಪ್ಲಿಜ್ ಕಣೊ ರಾಜೀ ಒಂದೆ ಒಂದ ಸಲ ಹಗ್ ಮಾಡೊ ಬಾರೋ" ಎಂದಳು. ಆತ ಕರಗಲಿಲ್ಲ. ಆದರೆ ಕೊನೆಯ ತನಕ ಕಾಣುವಾಗ ಆತನ ಕೈಗಳು ಕಣ್ಣಿರು ಒರೆಸುತ್ತಿದ್ದು ಮಾತ್ರ ಗೋಚರಿಸಿದವು. ಆತ ಮರೆಯಾದಾಗ ಅಷ್ಟೊತ್ತು ತಡೆದುಕೊಂಡಿದ್ದ ದುಃಖದ ಕಟ್ಟೆ ಒಡೆದು ಭೊರ್ಗರೆದು ಅಳತೊಡಗಿದಳು. ಮಧ್ಯ ಮಧ್ಯ "ಸಾರಿ ರಾಜೀ ಸಾರಿ ಕಣೊ" ಎನ್ನುತ್ತಿದ್ದಳು...............

          ಇವರಿಬ್ಬರಲ್ಲಿದ್ದ ಕಾಠಿಣ್ಯತೆ ಕರಗಿತ್ತು, ಲೈಲಾ ಮಜ್ನುಗಿಂತಲೂ ಒಂದಿಂಚು ಹೆಚ್ಚಾಗಿದ್ದ ಇವರ ಪ್ರೇಮ ಪೂರ್ಣಪ್ರಮಾದಲ್ಲಿ ಸಮಾಧಿಯಾಯಿತು. ಮೂರು ವರ್ಷಗಳಿಂದ ಬೇರೆಯಾಗದ ಪ್ರೇಮಿಗಳು ಶಾಶ್ವತವಾಗಿ ದೂರವಾದರು. ಒಂದಿನವೂ ಕಣ್ಣಿರು ಹಾಕದಿದ್ದ ಜೋಡಿಗಳು ಕೊನೆಯವರೆಗೂ ಕಣ್ಣಿರು ಹಾಕುವ ಹಂತಕ್ಕೆ ಬಂದರು. ಯಾರ ದೃಷ್ಟಿ ಬಿತ್ತೊ ಇವರ ಮೇಲೆ ?

                         ‌‌ ‌         ರಾಜು ಪಾಟೀಲ(ಸಿಂದಗಿ)

                                         9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು