ವಯಸ್ಸಿನ ಖಾಯಿಲೆಯೊ ಅಥವಾ ಕನಸುಗಳು ಮುಗಿದಿವೆಯೋ ಬೆಳ್ಳ್ ಬೆಳಗ್ಗೆ 3.30 ಕ್ಕೆ ಎಚ್ಚರಾಗುತ್ತೆ. ಎದ್ದು ಸಣ್ಣಗೆ ಟಾಯ್ಲೆಟಗೆ ಹೋಗುವ ಪರಿಪಾಠ. ಇವತ್ತು ಹಾಗೆಯೆ ಎದ್ದವನು ಸಣ್ಣಗೆ ಕಾಲನ್ನು ಎಳೆಯುತ್ತಾ ಟಾಯ್ಲೆಟ್ ಕಡೆ ಹೊರಡುವಾಗ ಮಗ ಯಾಕೊ ವರಾಂಡದಲ್ಲಿ ಕುಳಿತಿದ್ದ. ಮಲಗಿಲ್ಲ ಎಂಬ ದಣಿವು ಅವನ ಕಣ್ಣುಗಳಲ್ಲಿ. ನನ್ನ ನೋಡಿದವನೆ ಅಪ್ಪ ಬೇಗ ತಯಾರಾಗಿ ಊರಿಗೆ ಹೋಗಬೇಕು ಎಂದ. ನಾನು ಎನು, ಎಂತ ಎಂದು ಕೇಳಲಿಲ್ಲಾ ಆಯ್ತು ಎಂದು ನನ್ನ ನಿತ್ಯಕರ್ಮ ಮುಗಿಸಿದೆ. ದಿನವೂ ಒಂದು ಕಪ್ ಚಹಾಗಾಗಿ ಬೆಳ್ಳ್ ಬೆಳಿಗ್ಗೆ ಪರಿತಪಿಸುತ್ತಿದ್ದ ನನಗೆ, ಅವತ್ತು ಮಗನೆ ಕಾಫಿ ಮಾಡಿ ತಂದು ಕೊಟ್ಟ. ಕಾಫಿ ಕುಡಿದು ಸ್ನಾನ ಮಾಡಿದೆ. ಅಪ್ಪಯ್ಯ ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳಿ ಒಂದು ವಾರ ಊರಿಗೆ ಹೋಗೊದಿದೆ ಎಂದ. ನನಗೆ ಆಶ್ಚರ್ಯ! ಏನೂ ಪೂರ್ವಾಪರ ಇಲ್ಲದ ಈ ನಿರ್ಧಾರದಿಂದ. ತನ್ನದೆ ಬ್ರಾಂಡೆಡ್ ಸೂಟಕೆಸ್ ನನಗೆ ಕೊಟ್ಟ, ಅದರಲ್ಲಿ ನನ್ನ ಮೂರು ಜೊತೆ ಬಟ್ಟೆ ಟವಲ್ಲು ಎಲ್ಲಾ ತೆಗೆದುಕೊಂಡೆ. ಆತನೆ ನನ್ನ ಹೆಂಡತಿಯ ಪೋಟೊ ತಂದು ಅದರಲ್ಲಿ ಇಟ್ಟ.
ಅವನು ಬೇಗ ಬೇಗ ತಯಾರಾದ, ಹೊರಗಡೆ ಹೋಗುವಾಗ ಸೊಸೆ ಎದ್ದು ಬಂದು ನಿಂತಿದ್ದಳು. ಹಳೆಯ ಸಂಪ್ರದಾಯದಂತೆ ಕಾಲಿಗೆ ನಮಸ್ಕರಿಸಿದಳು ಮನತುಂಬಿ ಆಶೀರ್ವದಿಸಿದೆ, ಹೋಗುವಾ ಅಂದ ಮಗ. ಮೊಮ್ಮಗನ ಮುಖ ನೋಡುವಾಸೆ ಆದರೆ ಮಲಗಿದಾನೆ ಅವನನ್ನ ಎಚ್ಚರಿಸಿದರೆ ಸೊಸೆ ಸಿಟ್ಟಿಗೇಳುವಳೆಂದು ಭಾವಿಸಿ ನಾನು ಅವನ ರೂಮ ಕಡೆ ನೋಡಿ ಹೊರಟೆ.
ಕಾರಲ್ಲಿ ಬ್ಯಾಗ್ ಸೂಟಕೆಸ್ ಗಳನ್ನ ಇಟ್ಟ, ಬಾಗಿಲು ತೆಗೆದು ಒಳಗಡೆ ಕುಳಿತೆ. "ಅಪ್ಪಯ್ಯ ನಿಮ್ಮ ಪ್ರೇಂಡ್ ಸದಾಶಿವ ಅವರ ಹೋಟೆಲ್ ನಲ್ಲಿ ತಿಂಡಿ ಮಾಡೋಣ" ಅಂದ. ಆಯ್ತು ಅಂದೆ.
ಊರಿಗೆ ಹೋಗಿ ಹತ್ತು ವರ್ಷ ಆಗಿರಬಹುದು. ತೋಟವನ್ನು ಮಾರಲಿಕ್ಕೆ ಹೋಗಿದ್ದು ಬಿಟ್ಟರೆ ಮತ್ತೆಂದೂ ಆ ಕಡೆ ತೆಲೆ ಹಾಕಿರಲಿಲ್ಲಾ. ತೋಟ ಮಾರುವ ಜರೂರ ಕೂಡಾ ಇರಲಿಲ್ಲಾ. ಆದರೆ ಮಗನನ್ನು ಸರಕಾರಿ ನೌಕರನನ್ನಾಗಿ ಮಾಡಬೇಕಿತ್ತು. ಕಲಿಸೊದು ಮಾತ್ರ ಪಾಲಕರ ಜವಾಬ್ದಾರಿ ಆಗಿರುವದಿಲ್ಲ ಅವರನ್ನ ಒಂದು ಹಂತಕ್ಕೆ ತರುವದು ಕೂಡಾ ಪಾಲಕರೆ ಮಾಡಬೇಕು. ಮನೆಯೊಂದಿದೆ ವಿಶಾಲವಾದದ್ದು, ತುಂಬೂ ಕುಟುಂಬ ಬಾಳಿ ಬದುಕಿದ ಮನೆಯದು. ಅಲ್ಲಿಗ ನನ್ನ ತಮ್ಮನ ಮಕ್ಕಳು ವಾಸಮಾಡುತ್ತಿದ್ದಾರೆ. ನಾನು ಪಟ್ಟಣಕ್ಕೆ ಸೇರುವ ಮುಂಚೆ ಅಲ್ಲೆ ಎಲ್ಲರು ಕೂಡಿ ಬೆಳದಿದ್ದು. ಆ ನೆನಪು ಈಗ ಮತ್ತೆ ಮರಕಳಿಸುತ್ತಿದ್ದೆ. ಬಹಳ ದಿನದಿಂದ ಹೋಗಬೇಕು ಎಂದುಕೊಂಡ ಮನಸ್ಸಿನ ಆಸೆಯನ್ನು ಇಂದು ಮಗ ಹೇಳದೆಯೇ ನಡೆಸಿಕೊಡುತ್ತಿದ್ದಾನೆ. ಮಗನ ಮೇಲೆ ಹೆಮ್ಮೆ ಮೂಡಿತು.
ಮಗನಿಗೀಗ ನಲವತ್ತರ ಪ್ರಾಯ, ಅವನ ಮಗ ಅಂದರೆ ಮೊಮ್ಮಗನಿಗೆ 9. ಹತ್ತು ವರ್ಷ ಹಿಂದೆ ಮಗನಿಗೆ ಮದುವೆ ಮಾಡಿದೆ. ನನ್ನ ಮಡದಿಗೆ ಅದೃಷ್ಟ ಇರಲಿಲ್ಲ ತನ್ನ ಮಗನ ಕಂಕಣ ಭಾಗ್ಯ ಕಾಣುವ ಮೊದಲೆ ತೀರಿ ಹೋದಳು. ಪಟ್ಟಣಕ್ಕೆ ಬಂದು ಸೇರಿದಾಗಿನಿಂದ ಕಷ್ಟಪಟ್ಟು ದುಡಿದು ಒಂದು ಪ್ರತಿಷ್ಠಿತ ಏರಿಯಾದಲ್ಲಿ ಜಾಗವನ್ನು ಕೊಂಡು ಮನೆಯನ್ನು ಕಟ್ಟಿದೆ. ರಿಟೈರ್ ಆಗುವರೆಗೂ ಅದರ ಸಾಲ, ಮಗನ ಶಾಲೆ, ಕುಟುಂಬ ನಿರ್ವಹಣೆ ಇಷ್ಟರಲ್ಲೆ ಜೀವನ ಮುಗಿತು ಆಸ್ತಿಗೆ ಕೈ ಹಚ್ಚಿರಲಿಲ್ಲಾ. ತೋಟವೆಲ್ಲ ತಮ್ಮನೆ ನೋಡಿಕೊಳ್ಳುತಿದ್ದ. ನಮಗೆ ವರ್ಷಕ್ಕೊಮ್ಮೆ ಧಾನ್ಯಗಳ ಮೂಟೆ ತಂದು ಕೊಟ್ಟು ಹೋಗುತ್ತಿದ್ದ. ಲಕ್ಷ್ಮಣನಂತ ತಮ್ಮ ಇಲ್ಲಿಯವರೆಗೂ ನನ್ನ ಮೇಲೆ ಗೌರವ-ಭಕ್ತಿ, ಆತನೆಂದರೆ ನನಗೂ ಪ್ರೀತಿ. ತೋಟ ಮಾರುವಾಗಲೂ ಕೂಡಾ ಆತ ಒಂದು ಮಾತು ಚಕಾರ ಎತ್ತಲಿಲ್ಲ. ನನಗೂ ನಿವೃತ್ತಿಯ ಜೀವನ. ಮನೆಯಲ್ಲೆ ಇದ್ದೆ ಊರಿಗೆ ಹೋಗುವ ಆಸೆ ಆಗ್ತಿತ್ತು ಆದರೆ ಸಮಯ ಸಂದರ್ಭ ಕೂಡಿ ಬರಲಿಲ್ಲ. ಮೊಮ್ಮಗನ ಜೊತೆ ಬಿಟ್ಟು ಇರೋಕು ಆಗ್ತಿರಲಿಲ್ಲ. ಇಂದು ಅಚಾನಕ್ಕಾಗಿ ಹೋರಟಿದ್ದೆನೆ.
ಪ್ರೆಂಡ್ ಸದಾಶಿವನ ಹೋಟೆಲ್ ಗೆ ಬಂದ್ವಿ. "ಸದಾಶಿವ ಎಲ್ಲಿ ? ಎಂದು ವಿಚಾರಿಸಿದೆ. "ಅವರಿಗ ಹಾಯಾಗಿ ಮನೆಲಿದಾರೆ ಹೊಟೆಲ್ ನಾವೆ ನಡೆಸ್ತಿದ್ದೆವೆ." ಎಂದ ಆತನ ಮಗ. ನನ್ನಿಷ್ಟದ ತಿಂಡಿ ಕೇಸರಿಬಾತ ತಿಂದೆ, ಬಿಸಿಬಿಸಿ ಕಾಫಿ ಹೀರಿದೆ. ಮತ್ತೆ ಪ್ರಯಾಣ ಶುರು. ತಿಂಡಿ ತಿಂದದ್ದಕ್ಕೊ ಅಥವಾ ಕಾರಿನ ಪ್ರಯಾಣಕ್ಕೊ ನಿದ್ದೆ ಹತ್ತಿದ್ದು ಗೊತ್ತೆ ಆಗಲಿಲ್ಲ. ಸುಮಾರು 11 ಗಂಟೆ ಆಗಿತ್ತು ಕಾರ ನಿಲ್ಲಿಸಿದ "ಅಪ್ಪ" ಎಂದ. ಕಣ್ಣು ತೆಗೆದು ನೋಡಿದೆ. ನಿಸರ್ಗದ ಮಧ್ಯದಲ್ಲಿ ಒಂದು ಮನೆ. "ಇಳಿಯಿರಿ" ಅಂದ. ಇದ್ಯಾರ ಮನೆ ಇಲ್ಲಿಗೆಕೆ ತಂದಿದಾನೆ. ಆಶ್ವರ್ಯ ಕೂತುಹಲ. ಕಾರಿನಿಂದ ಇಳಿದೆ., ನನ್ನ ಕೈ ಹಿಡಿದು ಆ ಮನೆಯ ಬಾಗಿಲಿಗೆ ತಂದ. ಯಾರೊ ಐವತ್ತರ ಆಸುಪಾಸಿನ ಹೆಣ್ಮಗಳ ಹತ್ತಿರ ಹೋಗಿ ಎನೆನೊ ಮಾತಾಡಿದ, ಆಕೆ ಅಪ್ಪಣೆ ನೀಡಿದಳು. ಇವನು ನನ್ನ ಅಲ್ಲೆ ನಿಲ್ಲಿಸಿ ಕಾರಿನ ಕಡೆ ಹೊಗಿ ಬ್ಯಾಗ್ ಗಳನ್ನು ತಂದ.
ಕೊಣೆಗೆ ಕರೆದುಕೊಂಡು ಹೋಗಿ ಅದನ್ನೆಲ್ಲಾ ಇರಿಸಿದ. "ಬರ್ತೆನೆ" ಎಂದ. "ಎನೊ ಇದು, ಯಾರು ಇವರು ? ಇಲ್ಲಿಗೇಕೆ ತಂದಿದಿಯಾ ?" ಅಂತಾ ಕೇಳಿದೆ. "ಅಪ್ಪ ಇದು ವೃದ್ಧಾಶ್ರಮ ಇನ್ಮುಂದೆ ತಾವೂ ಇಲ್ಲಿಯೆ ಇರಬೇಕು, ನಿಮ್ಮನ್ನ ಕಂಡರೆ ಸರಸ್ವತಿಗೆ ಅಸಹನೆ" ಅಂದ. "ಅಲ್ಲಾ ಕಣೋ ಮೊದಲೆ ಹೇಳಬಹುದಿತ್ತಲ್ಲೊ" ಎಂದೆ. ಮೌನನಾದ. "ಕೊನೆಪಕ್ಷ ಮೊಮ್ಮಗನ ಮುಖನಾದರೂ ನೋಡ್ತಿದ್ದೆ" ಎಂದೆ. ಅದಕ್ಕೂ ಮೌನನಾದ.
ಗಂಡ-ಹೆಂಡತಿ ಸೆರಿಯೆ ರಾತ್ರಿಯೆಲ್ಲ ಕೂಡಿಕೊಂಡ ಈ ಯೋಜನೆ ರೂಪಿಸಿದಾರೆ. ಬೆಳಗ್ಗೆ ಎದ್ದು ನನ್ನ ಸಾಗ ಹಾಕಿದಾರೆ. ನನ್ನ ಜೋತೆ ನನ್ನ ಹೆಂಡತಿಯೂ ವೃದ್ಧಾಶ್ರಮ ಸೇರಲಿ ಎಂದು ಆಕೆಯ ಪೋಟೊವನ್ನು ನನ್ನ ಜೊತೆ ಕಳಿಸಿದರು. ಕೊನೆಯದಾಗಿ ಎಂಬಂತೆ ಈತ ಕಾಫಿ ಮಾಡಿಕೊಟ್ಟ, ಆಕೆ ನಮಸ್ಕರಿಸಿದಳು. ಗೆಳೆಯನ ಹೊಟೆಲ್ ತಿಂಡಿಯೇ ಕೊನೆ. ಇನ್ಮುಂದೆ ಈ ವೃದ್ಧಾಶ್ರಮವೆ ನನಗೆ ಅಂತಿಮ. ಎದೆ ಭಾರವೆನಿಸಿತ್ತು. ಮುಂದಿನ ಆಲೋಚನೆ ಹೊಳೆಯಲಿಲ್ಲ ಕಣ್ಣೀರು ಬಂತು. ಹೊರಗೆ ಬಂದು ಅವನು ಹೋಗೊದು ಗಮನಿಸಿದೆ ಆತ ಕಾರನಲ್ಲಿ ಕೆಳಮುಖ ಮಾಡಿ ಕುಳಿತಿದ್ದ.
ಒಳ್ಳೆಯ ಉಪಕಾರ ಮಾಡಿದ ನನಗೆ. ಈ ಜನ್ಮದ ಋಣ ತಿರಿಸಿದ. ಮೊಮ್ಮಗನ ನೆನಪು, ಮನೆಯ ನೆನಪು ಉಕ್ಕಿ ಉಕ್ಕಿ ಬರುತ್ತಿದೆ. "ಎ ಶ್ರೀನಿವಾಸ ಯಾವಾಗ ಬಂದೆ ಕಣೊ ನೀನು?. ಬಾರೊ ಇಲ್ಲಿ". ತಿರುಗಿ ನೋಡಿದೆ ನನ್ನ ಮಿತ್ರ ಹೋಟೆಲ್ ಸದಾಶಿವಯ್ಯ. ಆಶ್ಚರ್ಯ ಇವನ ಹೋಟೆಲ್ ನಲ್ಲಿ ಇದೀಗ ತಾನೆ ತಿಂಡಿ ತಿಂದು ಬಂದೆ. ಮನೆಯಲ್ಲಿ ರೆಸ್ಟ್ ಮಾಡ್ತಿದಾರೆ ಎಂದ ಇತನ ಮಗ.
ಇವನು ಇಲ್ಲಿ, ನನ್ನ ನೊವು ಮರೆತು ಅವನ ಜೀವನದ ಕುರಿತು ಆಲೋಚನೆ ಶುರು ಆದವೂ. ಇದೆ ಅಲ್ವಾ ಜೀವನ, ನಮ್ಮದ್ದನ್ನು ಮರೆಯಲು ಇನ್ನೋಬ್ಬರ ಜೀವನ ಅಧ್ಯಯನ ಮಾಡೊದು, ಹೋಲಿಕೆ ಮಾಡುವದು. ಕೊನೆಗೆ ಆ ವೃದ್ಧಾಶ್ರಮವೆ ನನ್ನ ಮನೆಯಾಗಿ ಹೊಂದಿಕೊಂಡಿದ್ದೇನೆ. ನಾನು ಪಡೆದುಕೊಂಡಿದ್ದು ಇಷ್ಟೇ ಎಂದು.
(ಈ ಮೇಲಿನ ಚಿತ್ರ ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆದ ಭಾವಚಿತ್ರ ಅದರ ಮೇಲೆಯೆ ಈ ಕಥೆ ಹೆಣೆದಿದ್ದು. ಇದು ನೈಜ ಚಿತ್ರ.)
ರಾಜು ಪಾಟೀಲ (ಸಿಂದಗಿ)
9611042409


0 ಕಾಮೆಂಟ್‌ಗಳು