"ಒಂದು ವಾರದಿಂದ ಹೆಂಡತಿಗೆ ಕೆಮ್ಮು ಜ್ವರ ಅಣ್ಣ, ಅದಕ್ಕೆ ಆಕೆ ಕೆಲಸಕ್ಕ ಬಂದಿಲ್ಲಾ. ನಾನೆ ಬೆಳಗ್ಗೆ ಗಂಜಿ ಮಾಡಿ ಆಕೆಗೆ ಹಾಕಿ ನಾನೊಂದಿಷ್ಟು ಕುಡಿದು ಬರಾಕತ್ತಿನಿ." ಉತ್ತರ ಕರ್ನಾಟಕದ ಯಾದಗಿರಿಯಿಂದ ದೂರದ ಮಹಾರಾಷ್ಟ್ರದ ಮಹಾಡಕ ಕೂಲಿ ಅರಸಿ ಬಂದ ಕಲ್ಲಪ್ಪ ತನ್ನ ಜೊತೆ ಕೆಲಸ ಮಾಡುತ್ತಿದ್ದ ವಾಸಪ್ಪನಿಗೆ ತನ್ನ ಪರಸ್ಥಿತಿ ಹೆಳುತಿದ್ದ.
ಕಲ್ಲಪ್ಪನ ಹೆಂಡತಿಗೆ ಒಂದು ತಿಂಗಳಿಂದ ಕೆಮ್ಮು ಕಾಣಿಸಿಕೊಂಡಿತ್ತು. ಅದು ದಿನೆ ದಿನೆ ಉಲ್ಭಣಿಸಿತ್ತು. ಔಷದ ಉಪಚಾರ ಮಾಡಿದರು ಕಡಿಮೆ ಆಗಿರಲಿಲ್ಲಾ. ಹೀಗೆ ಒಂದು ವಾರದಿಂದ ಆಕೆಗೆ ಹಸಿವು ಕೂಡಾ ಮಾಯವಾಗಿದೆ ದೊಡ್ಡ ದವಾಖಾನೆಗೆ ಹೊಗಬೇಕು. ಪೂನಾಗೆ ಕರಕೊಂಡ ಹೋಗು ಅಂತಾ ಅಲ್ಲಿರುವ ಡಾಕ್ಟರ್ ಚೀಟಿ ಬರೆದು ಕೊಟ್ಟಿದ್ದರು. ಆದರೆ ಕಲ್ಲಪ್ಪನ ಸಂಬಳ ಇನ್ನೂ ಆಗಿರಲಿಲ್ಲ. ಇನ್ನೊಂದೆರಡು ದಿನದಲ್ಲಿ ಆಗೊದಿತ್ತು. ಹಾಗಾಗಿ ಆಕೆಯನ್ನು ತನ್ನ ಪುಟ್ಟ ಗುಡಿಸಿಲಿನಲ್ಲಿ ಮಲಗಿಸಿ ತಾನು ಕೂಲಿ ಹಣದ ನಿರೀಕ್ಷೆಯಲ್ಲಿ ಕಾಲವನ್ನು ದೂಡುತಿದ್ದ.
ಕಲ್ಲಪ್ಪ ಯಾದಗಿರಿಯ ಬದ್ದೆಪಲ್ಲಿ ಎಂಬ ಕುಗ್ರಾಮದವನು. ಓದು ಬರಹ ಗೊತ್ತಿಲ್ಲದವನು. ಹಳ್ಳಿಯಲ್ಲಿ ಕೂಲಿ ಇಲ್ಲಾ, ಊಳೊಕೆ ಜಮೀನು ಕೂಡಾ ಇರಲಿಲ್ಲ. ಹೆಂಡತಿ ಬರೊವರೆಗೂ ಅಡ್ನಾಡಿಯಂತೆ ಅಲದಾಡುತಿದ್ದ ಕಲ್ಲಪ್ಪ, ಹೆಂಡತಿ ಬಂದಾಗ ಮೂಗದಾರ ಬಂದಂಗ ಆಗಿತ್ತು. ದಿನವೂ ಕೆಲಸ ಅರಸುತ್ತಾ ಸುತ್ತಮುತ್ತ ಹಳ್ಳಿಯ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಒಂದಿನಾ ಕೆಲಸ ಇದ್ದರೆ, ಇನ್ನೊಂದಿನಾ ಖಾಲಿ ಕೈ. ಹಾಗಿದ್ದರು ಹೇಗೊ ನಡೆದಿತ್ತು ಜೀವನಾ. ಒಂದು ಮಳೆಗಾಲದಲ್ಲಿ ಇವರಿದ್ದ ಗುಡಿಸಲು ಧಡಾರನೆ ನೆಲಕ್ಕೆ ಉರುಳಿತು. ಛಾವಣಿ ಎಲ್ಲಾ ಗಾಳಿಗೆ ಹಾರಿ ಹೋಗಿತ್ತು. ಅಂದು ಪಕ್ಕದ ಗುಡಿಸಿಲಿನಲ್ಲಿ ಆಸರೆ ಪಡೆದ ಕಲ್ಲಪ್ಪ ಮತ್ತು ಗಂಗವ್ವ ಮರುದಿನ ಗುಡಿಸಲ ದುರಸ್ತಿಯಲ್ಲಿ ತೊಡಗಿದರು. ಮದ್ಯಾಹ್ನ ಬಿಸಿಲು ಎರುವದರಲ್ಲಿ ಅರ್ದ ಗುಡಿಸಲು ಕಟ್ಟಿದ್ದರು. ಊಟದ ಸಮಯದಲ್ಲಿ ಗಿಡದ ನೆರಳಲ್ಲಿ ಕುಳಿತಾಗ ಗಂಗಮ್ಮ ಕಲ್ಲಪ್ಪನ ಮುಖವನ್ನು ನೋಡುತ್ತಾ ತಾನಿನ್ನು ಮೂರು ತಿಂಗಳ ಬಸುರಿ ಎಂಬ ವಿಚಾರವನ್ನು ನಾಚುತ್ತ ನುಲಿಯುತ್ತಲೆ ತಿಳಿಸಿದಳು. ಕಲ್ಲಪ್ಪನಿಗೆ ಸ್ವರ್ಗ ಮೂರೆ ಗೆಣು. ತುಂಬಾ ಖುಷಿಯಿಂದ ಹಾರಾಡಿದ. ಅಂದೇ ಗುಡಿಸಲು ಕಟ್ಟಿ ಮುಗಿಸಿ, ಮೀನು-ಹೆಂಡ ತಂದು ಅಡಿಗೆ ಮಾಡಿ ತನ್ನ ಖುಷಿಯನ್ನು ಆನಂದಿಸಿದ.
ಮರುದಿನ ಗಂಗವ್ವ ಮಬ್ಬಾಗಿ ಕುಳಿತಿದ್ದನ್ನು ಕಂಡ ಕಲ್ಲಪ್ಪ "ಯಾಕ ನನ್ನ ಮಹಾರಾಣಿ. ಯಾಕ ಹಂಗ ಕುಂತಿ. ಎನರೆ ಬಯಕೆ ಹುಟ್ಯಾವೆನ ಹೇಳ ತಿರಸ್ತಿನಿ" ಎಂದ. "ನನ್ನ ಬಯಕೆ ನೀ ತಿರಿಸುವಂತದಲ್ಲ ತಗೊ ಮಹಾರಾಜ" ಎಂದು ಕೊಂಕಿದಳು. "ಅದು ಏನ್ಯಾಕ ಇರಲಿ ಜೀವಾ ಹೋಗಲಿ ತೀರಸ್ತಿನಿ ಹೇಳ ಗಂಗು". "ನನಗೆ ಸಣ್ಣದೆ ಇರಲಾಕ ಒಂದು ಸ್ವಂತ ಸಿಮಿಟಿನ ಮನಿ ಬೇಕ, ಅದೆ ನನ್ನ ಬಯಕಿ" ಒಂದೆರಡು ಕ್ಷಣ ಮೌನವಾದ ಕಲ್ಲಪ್ಪ. ಗಂಗವ್ವಳಿಂದ ದೂರ ಸರಿದು ಎದ್ದುನಿಂತ. "ಗಂಗು ನಿನ್ನ ಆಸೆ ತೀರಸ್ತಿನಿ ನಾನು ಇಟ್ಟಂಗಿ ಬಟ್ಟಿಗಿ ಹೊಗತಿನಿ. ಅಲ್ಲಿ ದುಡದ ಗೊಳ್ಯಾ ಮಾಡಿ ತಂದ ಮನಿ ಕಟ್ಟಿಸೊಣ. ಆ ನಿನ್ನ ಹೊಟ್ಯಾಗಿಂದ ಮಹಾರಾಜ ಹೊರಗ ಬರೊದರಾಗ ಒಂದ ಸ್ವಂತ ಅರಮನಿ ಕಟ್ಟಸ್ತಿನಿ." ಎಂದು ಹೆಗಲ ಮೇಲಿದ್ದ ಟವಲ್ ಎತ್ತಿ ಮಿಸೆ ತಿರುವುತ್ತಾ ಜಾಡಿಸಿದ.
ಆರ ತಿಂಗಳ ನಂತರ ಕಲ್ಲಪ್ಪ ಊರಿಗೆ ಬಂದಿದ್ದ. ಉಬ್ಬು ಹೊಟ್ಟೆಯ ಗಂಗವ್ವ ಮೈತುಂಬಿಕೊಂಡಿದ್ದಳು. ಹಣ ಜಮಾಯಿಸಿಕೊಂಡು ಬಂದಿದ್ದ ಕಲ್ಲಪ್ಪ ಅದರಲ್ಲೆ ಸ್ವಲ್ಪ ಖರ್ಚು ಮಾಡಿ ಸಿಮಂತ ಮಾಡಿದ. ಆಕೆ ಹದಿನೈದು ದಿನದ ನಂತರ ಒಂದು ಮುದ್ದಾದ ಗಂಡು ಮಗುವನ್ನು ಹೆತ್ತಳು, ಊರಿಗೆಲ್ಲಾ ಹುಗ್ಗಿಯ ಊಟ ಹಾಕಿಸಿದ. ಮಗು ಎರಡು ತಿಂಗಳ ಆಗೊತನ ಕಲ್ಲಪ್ಪ ಊರಲ್ಲಿಯೆ ಕಾಲ ಕಳೆದ. ಕೊನೆಗೆ ಮನೆ ಕಟ್ಟಿಸುವ ಬಯಕೆ ಈಗ ಕಲ್ಲಪ್ಪನಲ್ಲಿ ಹುಟ್ಟಿದ ತರುವಾಯ ಒಂದಿನಾ ಗಂಗವ್ವನಿಗೆ ಹೇಳಿ ಮತ್ತೆ ಇಟ್ಟಂಗಿ ಬಟ್ಟಿಗೆ ಹೋಗಲು ಅನುವಾದ. ಆದರೆ ಈ ಸಲ ಗಂಗವ್ವ ತಾನು ಬರುವದಾಗಿ, ತಾನು ಕೂಡಾ ಗಂಡನ ಜೊತೆ ದುಡಿದು ಇಬ್ಬರು ಸೇರಿ ಹಣ ಮಾಡಿದರ ಬೇಗ ಮನೆ ಕಟ್ಟಿಸಬಹುದೆಂಬ ಮಾತನ್ನೂ ಗಂಡನಿಗೆ ತಿಳಿಸಿ, ಆತ ಎಷ್ಟು ವಿರೋಧ ಮಾಡಿದರು ಕೇಲದೆ ಆತನ ಜೊತೆ ಹೋರಟಳು..
ಮಗು ಅಂಬೆಗಾಲಿಡಲು ಪ್ರಾರಂಭಿಸಿದಾಗ ಗಂಗವ್ವ ಕೂಡಾ ಗಂಡನ ಜೊತೆ ಇಟ್ಟಿಗೆ ಭಟ್ಟಿಗೆ ಹೊರಟಳು. ಮಗುವನ್ನು ಗಿಡದ ನೆರಳಲ್ಲಿ, ಸೀರೆಯ ತೊಟ್ಟಿಲು ಮಾಡಿ ಮಲಗಿಸಿ ಕೆಲಸ ಮಾಡುತ್ತಿದ್ದಳು. ಅದು ಅತ್ತಾಗ, ಹಸಿದಾಗ ಅದರ ಬಾಯಿಗೆ ಹಾಲುಣಿಸಿ ಮತ್ತೆ ಕೆಲಸಕ್ಕೆ ತೊಡಗುತ್ತಿದ್ದಳು.
ದಿನಗಳು ಕಳೆದಂತೆ ಹಣ ಕೂಡಾ ಜಮೆ ಆಗುತ್ತಿತ್ತು. ಕಲ್ಲಪ್ಪ ತನ್ನ ಮ್ಯಾನೆಜರನ ಸಹಾಯದಿಂದ ಬ್ಯಾಂಕಲ್ಲಿ ಅಕೌಂಟ ತೆಗೆದು ಹಣ ಕೂಡಿಸಿಟ್ಟಿದ್ದ. ಇನ್ನೊಂದ ಮೂರು ತಿಂಗಳು ಕೆಲಸ ಮಾಡಿದರೆ ಭರ್ತಿ ಮನೆ ಕಟ್ಟಿಸುವಷ್ಟು ಹಣ ಕೂಡುತಿತ್ತು. ಆದರೆ ಅಷ್ಟರಲ್ಲಿ ಅದೆಲ್ಲಿಂದ ಬಂತೊ ರಾಕ್ಷಸ ಖಾಯಿಲೆ. ಗಂಗವ್ವಳಿಗೆ ಸಣ್ಣಗೆ ಬಂದಿದ್ದ ರೋಗ, ಈಗ ಒಂದು ವಾರದಿಂದ ವಿಪರೀತ ಮಟ್ಟಕ್ಕೆ ಏರಿದೆ. ಕ್ಷಣ ಕ್ಷಣಕ್ಕು ಕೆಮ್ಮು, ಮೈ ಬಿಸಿ. ಇರೊ ಬರೊ ಆಸ್ಪತ್ರೆ, ನಾಟಿ ಔಷಧ ಎಲ್ಲಾ ಹಾಕಿದರು ಕಡಿಮೆ ಆಗದು. ಕೊನೆಗೆ ಉಳಿದಿರೊದ ಒಂದೆ ಪೂನಾಗೆ ಹೋಗಿ ದೊಡ್ಡ ಆಸ್ಪತ್ರೆಗೆ ತೊರಿಸುವದು.
ಎರಡ ದಿನಾ ಮುಗಿಯೊದರಲ್ಲಿ ಯಜಮಾನ, ಕಲ್ಲಪ್ಪ ಮತ್ತು ಗಂಗವ್ವಳ ಕೂಲಿಯನ್ನು ನೀಡಿದ. “ಮಾಲಕರಾ ನಾ ನಾಳೆಯಿಂದ ಒಂದಿಷ್ಟ ದಿನಾ ಕೆಲಸಕ್ಕ ಬರಲ್ಲರಿ, ಗಂಗುಗ ಬಾಳ ಆರಾಮ ತಪ್ಯಾದರಿ ಪೂನಾಕ ಹೋಗಿ ತೊರಸ್ಕೊಂಡ ಬರ್ತಿನಿ” ಅಂತೆಳಿ. ಸಲಾಮ ಹೊಡೆದು ತನ್ನ ಗುಡಿಸಲು ಕಡೆ ಹೊರಟ. ಬರುವ ದಾರಿಯಲ್ಲಿ ಬ್ಯಾಂಕಿನಿಂದ ಹಣ ಕೂಡಾ ತೆಗೆದಿದ್ದ.
ಗುಡಿಸಲ ಬಾಗಿಲು ತೆಗೆಯೊದರಲ್ಲಿ ಹೊರಗಿನ ಬೆಳಕು ಮಲಗಿದ ಗಂಗವ್ವನ ಮೇಲೆ ಬಿದ್ದು ಆಕೆ ಸಣ್ಣಗೆ ಕಣ್ಣು ತೆಗೆದಳು. ಮಗು ಒಂದು ಮೂಲೆಯಲ್ಲಿ ಆಟ ಆಡುತ್ತ ಮಣ್ಣನ್ನು ಬಾಯಿಗೆ ಹಾಕಿಕೊಳ್ಳುತ್ತಿತ್ತು. ಕಲ್ಲಪ್ಪ ಹೋಗಿ ಅದನ್ನ ಎತ್ತಿಕೊಂಡ ಬಾಯಿ ಒರೆಸಿ ಗಂಗವ್ವಳ ಹತ್ತೀರ ಬಂದ. “ಗಂಗು ಏಳ ಸ್ವಲ್ಪ ಚಾ ಬಿಸಕಟ ತಿನ್ನಾಕತ್ತಿ. ನಾಳೆ ಪೂನಾ ದವಾಖಾನಿಗ ಹೋಗೊಣ. ಎಲ್ಲಾ ಕಡಿಮೆ ಆಗ್ತದ”. ಆಕೆಯ ತೆಲೆಯನ್ನು ಹಿಡಿದು ಎತ್ತಿ ಗೊಡೆಗೆ ಆಸರೆಯಾಗಿ ಕೂರಿಸಿದ. “ಮಾಮ.. ನಾ ಬದುಕಲ್ಲ ಅನಸ್ಯಾದ, ನನಗ ಬಾಳ ತ್ರಾಸ ಆಗಾಕತ್ತಾದ. ಈ ಕೂಸಿಗೆ ಹೆಂಗರ ಜ್ವಾಕ ಮಾಡ ಮಾಮ" ಗಂಗವ್ವ ಕ್ಷೀಣ ಧ್ವನಿಯಲ್ಲಿ ಉಚ್ಚರಿಸುವಾಗ ಕಲ್ಲಪ್ಪನ ಕಣ್ಣಿನ ನೀರು ಅವನ ದಾಡಿಯಲ್ಲಿ ಹರಿದು ಮರೆಯಾದವು. “ಏ ಗಂಗು ಹುಚ್ಚಗಿಚ್ಚ ಹಿಡದಾದೇನ ನಿನಗ. ಎಲ್ಲಾ ಕಡಿಮೆ ಆಗ್ತದ ತಗೊ ತೆಲಿ ಕೆಡಸ್ಕೊಬ್ಯಾಡ. ಇದ್ಯಾವ ದೊಡ್ಡ ಜಡ್ಡಲೆ. ಎಳೇಳ ಚಲೊ ಕಲಿತಿ ದೊಡ್ಡು ದೊಡ್ಡು ಮಾತಾಡೊದು”. ಅಂತೆಳಿ ಆಕೆಗೆ ಚಾ ಮತ್ತು ಬಿಸಕಟ್ ನೀಡಿ, ಮಗುವಿಗು ಉಣಿಸಿದ.
ರಾತ್ರಿ ಆಕೆಗೆ ಗಂಜಿ ಕುಡಿಸಿ ಮಲಗಿಸಿ ಮಗುವನ್ನು ಉಣಿಸಿ ಹೆಗಲ ಮೇಲೆ ಹಾಕೊಂಡ ಹೊರಗೆ ಬಂದು ಕುಂತಾಗ ಅಮವಾಸೆ ಕತ್ತಲು. ತಣ್ಣನೆ ಗಾಳಿಗೆ ಮಗು ಹೆಗಲ ಮೇಲೆ ನಿದ್ದೆಗೆ ಜಾರಿತು. ಕಲ್ಲಪ್ಪ ಅಷ್ಟೊತ್ತು ಹಿಡಿದಿಟ್ಟು ಕೊಂಡಿದ್ದ ದುಖವನ್ನು ತಡೆಯಲಾಗದೆ ಆ ಕತ್ತಲೆಯಲ್ಲಿ ಬಿಕ್ಕಿ ಅಳ ತೊಡಗಿದ, ಧಾರಾಕಾರವಾಗಿ ಕಣ್ಣೀರು ಹರಿಯುತ್ತಿತ್ತು. ಸಂಜೆ ಗಂಗವ್ವ ಹೇಳಿದ ಮಾತು ಆತನಿಗೂ ಅನುಮಾನ ಬಂದಂತಿತ್ತು. "ಗಂಗವ್ವ ನನ್ನ ಕೈ ಬಿಡತಾಳ, ನನ್ನ ಮಗಿಗ ಯಾರ ದಿಕ್ಕ, ನನಗ್ಯಾರ ದಿಕ್ಕ" ಅನ್ನೊ ಆಲೋಚನೆಯಲ್ಲಿ ಕಲ್ಲಪ್ಪ ಆ ರಾತ್ರಿಯೆಲ್ಲಾ ಚಿಂತಿಸಿದ, ಕಣ್ಣಿರು ಹಾಕಿದ. ಎನೇ ಮಾಡಿದರು ಆ ಆಲೋಚನೆಯಿಂದ, ದುಖದಿಂದ ಹೊರಗೆ ಬರಲಾಗುತ್ತಿಲ್ಲ.
ಬೆಳ್ಳ ಬೆಳಗ್ಗೆ ಮನೆಯ ಮುಂದೆ ಸಣ್ಣ ಅಟೋದಲ್ಲಿ ಗಂಗವ್ವ ಕಷ್ಟಪಟ್ಟು ಕುಳಿತಳು. ಮೈಯಲ್ಲಿ ಎಲುಬು ಬಿಟ್ಟರೆ ಎನು ಇಲ್ಲ. ಪಕ್ಕದ ಮುದುಕಿಗೆ “ಗುಡಿಸಲ ಕಡೆ ನೋಡ್ತಿರು ಅವ್ವ”. ಎಂದು ಹೇಳಿದ ಕಲ್ಲಪ್ಪ ತಾನು ಕೂಸನ್ನು ಹೊತ್ತು ಗಂಗವ್ವಳ ಪಕ್ಕಕ್ಕೆ ಕುಳಿತು ಬಸಸ್ಟಾಂಡ ಕಡೆ ಹೋರಟ. ಬಸ್ಸು ಪೂನಾ ತಲುಪೊದರಲ್ಲಿ ಮದ್ಯಾಹ್ನ ಎರಡಾಗಿತ್ತು. ಕಿಸೆಯಲ್ಲಿದ್ದ ಚೀಟಿಯನ್ನು ಹಿಡಿದು ಪೂನಾದ ಆಸ್ಪತ್ರಗೆ ಬಂದ ಕಲ್ಲಪ್ಪ ಆ ಚೀಟಿಯನ್ನು ತೋರಿಸಿ ಗಂಗವ್ವಳನ್ನು ಅಡಮಿಟ್ ಮಾಡಿದ. ಆಕೆಗೆ ಗಂಭಿರ ಖಾಯಿಲೆ ಆಪರೆಷನ್ ಮಾಡಬೇಕು. ಅದಾದ ಮೇಲೆ ಆಕೆ ಗುಣ ಆಗ್ತಾಳೊ ಬಿಡ್ತಾಳೊ ಅಂದರು. ಇದ್ದ ಬಿದ್ದ ಹಣವನ್ನು ಆಸ್ಪತ್ರೆಗೆ ಹಾಕಿ ಆಪರೆಷನ್ ಕೂಡಾ ಮಾಡಿದ. ಎರಡ ದಿನಾ ಬಿಟ್ಟು ಜನರಲ್ ವಾರ್ಡಿಗೆ ಶಿಪ್ಟ ಮಾಡಿದಾಗ, ಕಲ್ಲಪ್ಪ ಮತ್ತು ಮಗು ಗಂಗವ್ವಳ ಬಳಿ ಹೋದರು. ಮೊದಲಿಗಿಂತ ಸ್ವಲ್ಪ ಲವಲವಿಕೆ ಬಂದಿತ್ತು. ಗೆದ್ದೆ ಎಂಬ ಭಾವನೆ ಕಲ್ಲಪ್ಪನಲ್ಲಿ ಮೂಡಿತು. ಗಂಗವ್ವ "ಮಾಮ ನಿ ಎನಾರ ಹೊಟ್ಟಿಗೆ ಹಾಕೊಂಡ ಬಾ ಕೂಸ ನನ್ನಲ್ಲೆ ಇರಲಾಕ" ಅಂದಾಗ ಕಲ್ಲಪ್ಪನಿಗೆ ಎರಡ ದಿನದಿಂದ ಕೇವಲ ಚಾ ಮೇಲೆ ಕಳೆದಿದ್ದು ನೆನಪಾತು.
ಹೊರಗಡೆ ಹೊಗಿ ಮುಖ ಚೆನ್ನಾಗಿ ತೊಳಕೊಂಡು, ಗಡ್ಡವನ್ನು ಚೆನ್ನಾಗಿ ಶೆವಿಂಗ ಮಾಡಿಸಿಕೊಂಡು ಹೊಟ್ಟೆತುಂಬ ತಿಂದು, ಮಗುವಿಗಾಗಿ ಬಿಸ್ಕಟಗಳನ್ನು ಖರೀದಿ ಮಾಡಿ ನೆಮ್ಮದಿಯಿಂದ ಕಲ್ಲಪ್ಪ ಆಸ್ಪತ್ರಗೆ ನಡೆದ. ಇನ್ಮುಂದೆ ಆಕೆಗೆ ಕೆಲಸಕ್ಕ ಹೋಗದಂತೆ ನೋಡಿಕೊಳ್ಳಬೆಕು. ಆ ಇಟ್ಟಂಗಿ ಬಟ್ಟಿಯಿಂದಲೆ ಆಕೆಗೆ ಇಷ್ಟೆಲ್ಲಾ ತೊಂದರೆ ಆಗಿದ್ದು ಅಂತಾ ತಿರ್ಮಾನಿಸುತ್ತಾ, ಗಂಗವ್ವಳ ರೂಮ ಕಡೆ ಬಂದ. ಮಗು ತುಂಬಾ ಜೋರಾಗಿ ಅಳುತಿತ್ತು. ಅದನ್ನ ಪಕ್ಕದವರು ಯಾರೊ ಎತ್ತಕೊಂಡಿದ್ದರು. ಅದು ಗಂಗವ್ವಳ ಬೆಡ್ ಕಡೆ ಕೈ ಮಾಡಿ ಅಳುತ್ತಿತ್ತು. ಗಂಗವ್ವಳ ಬೆಡ್ ಸುತ್ತ ಜನಾ ಮುಗಿಬಿದ್ದದ್ದರು. ಕಲ್ಲಪ್ಪನಿಗೆ ಅಘಾತದ ಸೂಚನೆ ಮುಟ್ಟಿತು. ಸಣ್ಣಗೆ ಭಾರವಾದ ಕಾಲುಗಳನ್ನ ಎಳೆಯುತ್ತಾ ಬೆಡ್ ಸಮೀಪ ಬಂದಾಗ ಗಂಗವ್ವ ಕೂಸಿನೆ ಕಡೆ ಕಣ್ಣು ಬಿಟ್ಟು ಉಸಿರು ಚೆಲ್ಲಿದ್ದಳು.
ಕಲ್ಲಪ್ಪನ ಉಸಿರೆ ಅಡಿಗಿ ಹೊಯಿತು. ತಾನ್ಯಾರು, ತಾನೆಲ್ಲಿದ್ದಿನಿ, ಎನಿದು, ಎಂಬ ಶೂನ್ಯ ಭಾವದಲ್ಲಿ ಮೆತ್ತಗಾದ ಕಲ್ಲಪ್ಪ. ಮಾತು ಬರುತಿಲ್ಲ, ದುಖ ತಡಿಯುತ್ತಿಲ್ಲ. “ರಿ ಕಲ್ಲಪ್ಪ ಅವರೆ ಎಲ್ಲಾ ಭಗವಂತನ ಕೈಯಲ್ಲಿದೆ, ಎನೂ ಮಾಡಾಕ ಆಗಲ್ಲ. ಸಂಬಾಳಿಸಿಕೊಳ್ಳಿ.” ಎಂದು ಡಾಕ್ಟರ್ ಹೆಗಲ ಮೇಲೆ ಕೈಯಿಟ್ಟು ಸಮಾಧಾನ ಪಡಿಸಿದರು. ಕಲ್ಲಪ್ಪ ಮುಖ ಕೆಳ ಮಾಡಿ ಕುಳಿತಿದ್ದ. “ಸರ್ ಎಂಬುಲೆನ್ಸ ಮಾಡೊಣ್ವಾ, ಅಥವಾ ಅವರೆ ಒಯ್ಯುತ್ತಾರಾ ಬಾಡಿನಾ” ಅಂತಾ ವಾರ್ಡ ಬಾಯ್ ಡಾಕ್ಟರ್ ನ ಕೇಳಿದಾಗ ಕಲ್ಲಪ್ಪ ದುಖದ ಭಾವದಲ್ಲಿದ್ದರೂ ಸಹ ಅದನ್ನ ಅದುಮಿಟ್ಟು “ಸರ್ ನನ್ನ ಹೆಂಡತಿನಾ ನಾ ಒಯ್ಯತಿನಿ. ಅದು ಬಾಡಿ ಅಲ್ಲ ಸರ್. ನನಗ ಆಕಿ ಒಜ್ಜಿಲ್ಲಾರಿ” ಎಂದ. ಸರಸರನೆ ಆಕೆಯನ್ನ ಒಂದು ಶಾಲನ ಹಾಸಿಗೆಯಲ್ಲಿ ಸುತ್ತಿ, ಹೆಗಲ ಮೇಲೆ ಹಾಕಿಕೊಂಡು. ಇನ್ನೊಂದ ಹೆಗಲ ಮೇಲೆ ಕೂಸನ್ನ ಹೊತ್ತು ಆಸ್ಪತ್ರೆಯಿಂದ ಹೊರಗ ಬಂದ. ಹೊರಗೆ ಆಂಬುಲೆನ್ಸ ಡ್ರೈವರ “ಹತ್ತು ಸಾವಿರ ಕೊಡಿ. ನಿಮ್ನೂರಿಗೆ ಬಿಟ್ಟು ಬರತಿನಿ” ಎಂದ. ಮೌನದಿಂದ ಆತನ ಮಾತನ್ನು ಕಿವಿಯಲ್ಲಿ ಹಾಕಿಕೊಳ್ಳದೆ ಹೊರಗೆ ಬಂದ.
“ಪುಣೆಯಿಂದ ಮಹಾಡ 100 km, ತನ್ನೂರು ಊರು 500 km ಎಲ್ಲಿಗೆ ಹೋಗಬೇಕು” ? ಹೆಣವನ್ನು ಊರ ಹೊರಗೆ ತಂದು ನೆಲದ ಮೇಲೆ ಹಾಕಿ ಆಲೋಚಿಸಿದ. ಮಗುವಿಗೆ ನೀರು ಕುಡಿಸಿದ. ಸ್ವಲ್ಪ ಸಮಾಧಾನ ತಗೊಂಡ. “ಬೇಡ ಊರಿಗೆ ಬೇಡಾ ಇಲ್ಲೆ ಮಾಡೊಣ, ನಮ್ಮ ಸಂಬಂಧಿಕರು ಎಲ್ಲಾ ಸೇರಿ ಮಾಡೊಣ.” ಎಂದು ನಿರ್ಧರಿಸಿ ಮಗುವಿಗೆ ತಾನು ತಂದಿದ್ದ ಬಿಸ್ಕಟನ್ನು ನೀರಲ್ಲಿ ಅದ್ದಿ ತಿನ್ನಿಸಿ ಸುಧಾರಿಸಿಕೊಂಡು. ಮತ್ತೆ ಹೆಣವನ್ನು ಹೆಗಲಿಗೆ ಹಾಕಿಕೊಂಡ ಮಗುವನ್ನು ಎತ್ತಿಕೊಂಡು ಹೊರಟ. ದಾರಿಯುದ್ದಕ್ಕೂ ಗಂಗವ್ವನ ಜೊತೆ ಕಳೆದ ದಿನಗಳ ನೆನಪು. ಮಗುವಿನ ಮುಖ ಗಂಗವ್ವನಂಗೆ ಇದೆ. ಅದು ಬಿಸಿಲಿಗೆ ಎದುರಿಸುರು ಬಿಡುತ್ತ ದಾರಿಯಲ್ಲಿ ಹೋಗುವ ಹೆಮ್ಮಾರಿ ಗಾಡಿಗಳನ್ನು ನೋಡುತ್ತಾ ಮೈಮರೆತಿದ್ದ. ಅಪ್ಪನ ಹೆಗಲ ಮೇಲೆ ನಿರ್ಜಿವ ಅಮ್ಮ ಮಲಗಿದೆ ಎಂದು ಅದಕ್ಕೆಲ್ಲಿ ತಿಳಿಬೇಕು. ಅಮ್ಮ ತನ್ನಂತೆ ಅಪ್ಪನ ಹೆಗಲ ಮೇಲೆ ಮಲಗಿದೆ ಎಂದು ತಿಳಿದಿದೆ.
ರಸ್ತೆಯ ಮೇಲೆ ನಡೆದು ಹೊರಟಾಗ ಒಂದು ಪೋಲಿಸ ಗಾಡಿ ಸೈಡಗೆ ಹಾಕಿ ಕೈ ಮಾಡಿತು. ಕಲ್ಲಪ್ಪನ ಎದೆಯಲ್ಲಿ ಭಯ ಆವರಿಸಿತು. ಹೆಣ ಎತ್ತಿಕೊಂಡ ಹೊರಟಿದ್ದಕ್ಕೆ ನನ್ನ ಜೈಲಿಗೆ ಹಾಕ್ತಾರೆ ಎಂದು ಖಾತರಿ ಆಯಿತು. ಏನ ಮಾಡಬೇಕು ತಿಳಿವಲ್ದು, ಮಗುವಿನ ಮುಖ ನೋಡಿದಾಗ ಮಗು ಕೂಡಾ ಅಪ್ಪನ ಮುಖವನ್ನು ನೋಡತಾ ಒಂದ ಸಲ ಮುಖದ ಮೇಲೆ ಕೈಯಾಡಿಸಿತು. “ಇದೆ ಕೊನೆ ಕಣೊ ಕೂಸ. ನಿಮ್ಮಮ್ಮನ ಕೊಂದ ಆರೊಪದಲ್ಲಿ ನನ್ನ ಒಳಗೆ ಹಾಕ್ತಾರೆ. ನೀನು ಅನಾಥ ಆಗ್ತಿಯಾ ಮಗು” ಎಂದು ಮತ್ತೆ ದುಖ ಅಪ್ಪಳಿಸಿತು. ಮತ್ತೆ ಕಣ್ಣಿರು ತಾನಾಗೆ ಹರಿಯತೊಡಗಿತು. ಹೆಣವನ್ನು ಕೆಳಗೆ ಇಳಿಸಿ ಮಗುವನ್ನು ಹೊತ್ತೆ ಕೈ ಮುಗಿದು ನಿಂತ.
“ಪೋಲಿಸರು ಗಾಡಿಯಿಂದ ಇಳಿದು ನೇರವಾಗಿ ಕಲ್ಲಪ್ಪನ ಹತ್ತೀರ ಬಂದು ಇದು ಯಾರ ಹೆಣ ಏನಕ್ಕ ಹೀಗೆ ಹೊತ್ತುಕೊಂಡು ಹೊರಟಿದಿಯಾ” ಎಂದು ಕೇಳಿದಾಗ. ಸಂಪೂರ್ಣ ವಿವರವನ್ನು ಕಲ್ಲಪ್ಪ ತಿಳಿಸಿದ. ಕಠೊರ ಕಾಠಿಣ್ಯದಿಂದ ಕೂಡಿದ್ದ ಪೋಲಿಸರ ಮುಖ ದುಖವಾಗಿ ಮಡುಗಟ್ಟಿತ್ತು. ಕಲ್ಲಪ್ಪನ ಕಥೆ ಕೇಳಿ ಯಾರಿಗೊ ಪೋನ ಮಾಡಿ ಒಂದು ಆಂಬುಲನ್ಸ ತರಿಸಿ, ಅದರಲ್ಲಿ ಗಂಗವ್ವನ ಹಾಕಿ. ಪೋಲಿಸ ಸಾಹೇಬರು ಮತ್ತು ಅವರ ಪೇದೆ ಇಬ್ಬರೂ ಸೇರಿ ಹತ್ತು ಸಾವಿರ ಕಲ್ಲಪ್ಪನಿಗೆ ಕೊಟ್ಟು, ಮಗುವನ್ನು ಮುದ್ದಿಸಿ ಆ ಗಾಡಿಯಲ್ಲಿ ಕಳಿಸಿದರು.......
(ಈ ಮೇಲಿನ ಚಿತ್ರವನ್ನು ನೋಡಿ ಕಥೆಯನ್ನು ಬರೆಯಲಾಗಿದೆ. ಕಥೆ ಬರೆದು ಬಹಳ ದಿನವಾಗಿತ್ತು ಹಾಕೊಕೆ ಆಗಿರಲಿಲ್ಲಾ. ಕಥೆಯು ಕಾಲ್ಪನಿಕವಾಗಿದೆ. ಆದರೆ ಒಂದು ನೈಜ ಘಟನೆಯ ಚಿತ್ರದಿಂದ ಇದನ್ನ ಹಣೆಯಲಾಗಿದೆ. ಇಷ್ಟವಾದರೆ, ಅಥವಾ ದುಖವಾದರೆ ತಿಳಿಸಿ. ಸಹಕರಿಸಿ. ತಪ್ಪಾಗಿರುವಲ್ಲಿ ತಿದ್ದಿಸಿ, ಪ್ರೋತ್ಸಾಹಿಸಿ. ನನ್ನ ಕಥೆಗಳನ್ನು ಬುಕ್ ಮಾಡಬೇಕು ಎಂದು ಆಲೋಚಿಸಿದೆನೆ. ಅದರ ಕುರಿತು ಕೂಡಾ ತಿಳಿಸಿ.ಧನ್ಯವಾದಗಳು.)
ರಾಜು ಪಾಟೀಲ(ಸಿಂದಗಿ)
9611042409


0 ಕಾಮೆಂಟ್‌ಗಳು