Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

"ಆಕೆ ಕಾಯಲಿಲ್ಲ, ಇತ ಸಾಧಿಸಲಿಲ್ಲ".


            ಅವತ್ತು ರವಿವಾರ ಎಲ್ಲರಿಗೂ ರಜೆ. ಮನೆಯ ವಿಶಾಲವಾದ ಹಾಲಿನ ಟಿವಿಯಲ್ಲಿ ಬೆಳಗ್ಗೆಯ ಸುದ್ದಿ ನೋಡುತ್ತ ಕುಳಿತಿದವನ ಬಳಿ ಓಡೋಡಿ ಬಂದ ಮಗ ಕರ್ಣ. ಎಷ್ಟು ಮುದ್ದು ಮುದ್ದಾಗಿ ಮಾತಾಡ್ತಾನೆ. 

ಮೂರು ವರ್ಷದ ಕರ್ಣ ಮತ್ತು ಐದು ವರ್ಷದ ಸುಮಿತ್ರ ಇಬ್ಬರೂ ಮುದ್ದಾದ ಮಕ್ಕಳು ನನಗೆ. ಅವರಮ್ಮ ವಿದ್ಯಾ ಭಾನುವಾರದ ಅಡಿಗೆಯಲ್ಲಿ ನಿರತಳಾಗಿದ್ದಾಳೆ. ಆಕೆಯ ಜೊತೆ ಮಗಳು ಸುಮಿತ್ರಾ. ದೇವರ ಕೋಣೆಯಲ್ಲಿ ಗಂಟೆಯ ಸದ್ದು ಬಹುಶಃ ನನ್ನಮ್ಮ ಪೂಜೆಯಲ್ಲಿ ನೀರತಳಾಗಿದ್ದಾಳೆ. ವಿಶಾಲವಾದ ಅಂದದ 3BHK ಮನೆ, ಆರೋಗ್ಯವಂತ ಅಮ್ಮ, ಮುದ್ದಾದ ಎರಡು ಮಕ್ಕಳು. ಮನೆ-ಮನವನ್ನು ಅರಿತುಕೊಂಡ ದೇವತೆಯಂತ ನನ್ನ ಮಡದಿ. ಸ್ವರ್ಗಕೂಡಾ ನಾಚಬೇಕು ನನ್ನ ಸುಖವ ನೋಡಿ. ಆದರೆ 8 ವರ್ಷದ ಹಿಂದೆ ಸ್ಥಿತಿ ಹೀಗಿರಲಿಲ್ಲ, ಇದರ ತದ್ವಿರುದ್ಧ ವಾತಾವರಣ.

ಅಂದು ಯುಗಾದಿ ಹೊಸ ವರ್ಷದ ದಿನ. ಅದೆಕೊ ಆಕೆಯ ಮುಂದೆ ಬೇಡಿಕೊಳ್ಳುವ ಹೊರೆತು ಮತ್ತೆನನ್ನು ಆಯ್ಕೆ ಇರಲಿಲ್ಲಾ ನನ್ನ ಬಾಳಲ್ಲಿ. ವಿದ್ಯಾ ಅದಾಗಲೆ ಸರಕಾರಿ ಕೆಲಸದಲ್ಲಿ ಇದ್ದಳು. ಅದ್ಹೆಗೋ ಆಕೆಗೂ ನನಗೂ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೇಮಕ್ಕೆ ಯಾವ ತಿರುವಿನಲ್ಲಿ ತಿರುಗಿತೊ ಗೊತ್ತೆ ಆಗಲಿಲ್ಲಾ, ಆದರೆ ಅದನ್ನ ಆಕೆಯ ಮುಂದೆ ನಾನು ವ್ಯಕ್ತ ಪಡಿಸಿರಲಿಲ್ಲ. ಅಕಸ್ಮಾತ ಆಕೆ ತಿರಸ್ಕರಿಸಿದರೆ ಸ್ನೇಹ ಕೂಡಾ ಮುರಿಯಬಹುದೆಂಬ ದೊಡ್ಡ ಭಯ, ಆದರೆ ಆಕೆಯೂ ನನ್ನ ಪ್ರೀತಿಸುತ್ತಿರಬಹುದೆ ?..... ಎಂಬ ಸಣ್ಣ ನಂಬಿಕೆ.

ಆಕೆಯ ಮನೆಯಲ್ಲಿ ಮದುವೆಗೆ ಗಂಡು ನೋಡುತ್ತಿದ್ದರು. ನನಗೆ ವಿಪರಿತ ಇರಿಸು ಮುರಿಸು, ಆಕೆಯ ಬಿಟ್ಟು ನಾನು ಬದುಕಲಾರೆ. ಹಾಗಂತ ಆಕೆ ನನ್ನ ಮದುವೆ ಆಗೊದಕ್ಕೆ ನಾನು ಯೊಗ್ಯನಲ್ಲದ ವ್ಯಕ್ತಿ. ಆಕೆ ಸರಕಾರಿ ನೌಕರಿಯ ದೊಡ್ಡ ಶ್ರೀಮಂತ ಮನೆತನದವಳು. ನಾನು ಏನೂ ಕೆಲಸವಿಲ್ಲದ ಬಡವ. ಇಬ್ಬರ ನಡುವಿನ ಅಂತರ ಬಹಳ, ಆದರೆ ಪ್ರೀತಿ ಬೆಳೆದುಬಿಟ್ಟಿದೆ. ಆಕೆಯನ್ನು ಆರಾಧಿಸುತ್ತೇನೆ. ಆಕೆಯೆ ನನ್ನ ಸರ್ವಸ್ವ ಎಂಬ ಗುರಿಯನ್ನು ಹೊಂದಿದ್ದೆ. ಆದರೆ ಇವಾಗ ತಿರ್ಮಾನ ತೆಗೆದುಕೊಳ್ಳದಿದ್ದರೆ ಆಕೆ ಎಂದಿಗೂ ನನಗೆ ದಕ್ಕುವದಿಲ್ಲಾ. ನನ್ನ ವಿದ್ಯಾ ವಿದಾಯ ಹೇಳಿ ಹೊರಡುವಳು. ಇಂದು ನಾನು ಆಕೆಗೆ ಮನದ ಮೂಲೆಯಲ್ಲಿ ಉಳಿದ ಆ ಮಾತನ್ನು ಹೇಳಲೆಬೇಕು ಎಂದು ಶಿವಾನಂದ ಸರ್ಕಲ್ ನ ಪಾರ್ಕಗೆ ಬರುವಂತೆ ಹೇಳಿದೆ.

10 ಗಂಟೆಗೆ ಬರೋಕೆ ಹೇಳಿದ್ದ ನಾನು, 8 ಗಂಟೆಗೆ ಅಲ್ಲಿ ಹಾಜರಾಗಿದ್ದೆ. ಸುಖಾ ಸುಮ್ಮನೆ ಕೊಸರಾಡುತ್ತಿದ್ದೆ. ಉಸಿರಾಟ ನಿಲ್ಲುವ ಭಾಸ. ಪದೆ ಪದೆ ಆಕೆ ಬರುವ ದಾರಿಯ ಕಡೆ ಕಣ್ಣು. ಕೈಯಲ್ಲಿ ಕಟ್ಟಿರುವ ವಾಚ್ ನ್ನು ಅದನ್ನ ಕೊಂಡುಕೊಂಡಾಗಿನಿಂದ ಇಲ್ಲಿಯವರೆಗೂ  ಅದನ್ನ ಅಷ್ಟು ನೋಡಿರಲಿಕ್ಕಿಲ್ಲಾ ಅಷ್ಟೊಂದು ಅವತ್ತು ಅದರ ಮೇಲೆ ಪ್ರೀತಿ. ಕೊನೆಗೂ ಬಂದಳು ತಿಳಿ ಕೆಸರಿ ಬಣ್ಣದ ಚೂಡಿದಾರ ಹಾಕಿಕೊಂಡು ಮೆಲ್ಲನೆ ಪಾರ್ಕಿನಲ್ಲಿ ನನ್ನ ಹುಡುಕುತ್ತ. "ವಿದ್ಯಾ" ಅಂತಾ ಕೂಗಿದೆ ನಿಧಾನವಾಗಿ ಬಂದು ನನ್ನ ಪಕ್ಕ ಕುಳಿತಳು. 

"ಏನೂ ಕರೆದಿದ್ದು" ಅಂದಳು. "ಮನೆಯಲ್ಲಿ ಗಂಡು ನೋಡ್ತಿದ್ದಾರಂತೆ."ಅಂದೆ. ಹೌದು ಅಂದಳು. "ಮದುವೆ ಆಗ್ತಿಯಾ" ಅಂದೆ. "ಆಗಲೆ ಬೇಕಲ್ವಾ ನಾನೆನೂ ಸನ್ಯಾಸಿ ಆಗ್ತಿನಿ ಅನಕೊಂಡಿಯಾ" ಅಂತಾ ನನ್ನ ನೋಡಿ ನಕ್ಕಳು. ನಂಗೆ ಕಸಿವಿಸಿ, ಹೇಳೊಕೆ ಹಿಂಜರಿಕೆ. "ಅಲ್ಲಾ ಕಣೆ ಮದುವೆ ಆದರೆ ಖುಷಿಯಾಗಿ ಇರ್ತಿಯಾ ಈಗಿನ ಥರ" ಅಂದೆ. "ನನಗೆ ನೋಡೊಕೆ ಬರ್ತಿರೊ ಗಂಡು ಸಾಮಾನ್ಯ ಅನಕೊಂಡಿಯಾ ಎಲ್ಲರೂ ದೊಡ್ಡ ಶ್ರೀಮಂತರು, ಒಳ್ಳೆಯ ಪದವಿಯಲ್ಲಿ ಇರೊರು." ಅಂದಳು. "ನೆಮ್ಮದಿಯಾಗಿ ಇರ್ತಿಯಾ." ಅಂದೆ. "ಹು ಇರ್ತೆನೆ ಏನ ಕಡಿಮೆ ಇರುತ್ತೆ ನನಗೆ. ಸಾಕಷ್ಟು ದುಡ್ಡು, ದೊಡ್ಡ ಆಸ್ತಿ ಮತ್ತೇನು ಬೇಕು ನೆಮ್ಮದಿಯಾಗಿ ಇರೊಕೆ." ಅಂದಳು. "ದುಡ್ಡು ನೆಮ್ಮದಿ ಕೊಡುತ್ತಾ." ಅಂದೆ. "ಗೊತ್ತಿಲ್ಲಾ ಕಣೊ ಮನೆಯಲ್ಲಿ ನೋಡ್ತಿದ್ದಾರೆ ಅವರು ಹೇಳಿದವರಿಗೆ ಕೊರಳ ಒಡ್ಡಿ ಜೀವನ ಸಾಗಿಸೊದು ಅಷ್ಟೇ." ಅಂದಳು. 

"ಇನ್ನೂ ಐದು ವರ್ಷ ಕಾಯ್ತಿಯಾ ನಾನು ಒಳ್ಳೆಯ ಪದವಿ, ನೌಕರಿ, ಹಣ, ಆಸ್ತಿ ಸಂಪಾದಿಸುತ್ತೇನೆ. ನಾನು ನಿನ್ನ ಆರಾಧಿಸುತ್ತೇನೆ, ಪ್ರೀತಿಸ್ತೇನೆ. ನಿನ್ನ ಬಿಟ್ಟು ನನಗೆ ಇರೊಕೆ ಆಗಲ್ಲ ಕಣೆ. ಕೊನೆಯವರೆಗೂ ನನ್ನ ಗೆಳತಿಯಾಗಿರು. ದಯವಿಟ್ಟು ಕಣೆ." ಎಂದೆ. ಮಾತು ಮುಗಿಯುವಷ್ಟರಲ್ಲಿ ಕಣ್ಣಲ್ಲಿನ ನೀರು ಜಾರಿದವು. ಭಾವೂಕ ಬೆರಗೂಗಣ್ಣಿನಿಂದ ನೋಡುತ್ತಿದ್ದ ಆಕೆಯ ಕಣ್ಣು ಮಂಜಾದವು. ನನ್ನ ಸ್ಥಿತಿಗೆ ಮರುಕ ಪಟ್ಟಳು. ಬೈಯಲ್ಲಿಲ್ಲಾ, ಮಾತನಾಡಲಿಲ್ಲಾ, ಮೌನವಾದಳು.

ಆಕೆಯ ಕಣ್ಣು ನನ್ನ ಹೊರೆತು ಮತ್ತೆನನ್ನೂ ಗಮನಿಸಲು ವಿರೋಧಿಸಿದವು. ನಾನು ಆಕೆಯ ಕಣ್ಣಿನ ನೋಟಕ್ಕೆ ಹೆದರಿ ನೋಟ ಬದಲಿಸಿದೆ. ಭಯ ಬೆಳಿತಾಯಿತ್ತು. ಆಕೆಯ ಮೌನ ಮಾತ್ರ ಕೊನೆಗಾಣೊ ಲಕ್ಷಣ ಕಾಣಲಿಲ್ಲಾ. ಅರ್ಧ ಗಂಟೆ ಮೌನವಾದ ಅವಳು ಯಾರನ್ನು ಲೆಕ್ಕಿಸದೆ ಕೆಳಗೆ ಮಾಡಿದ ನನ್ನ ಮುಖವನ್ನ ಎತ್ತಿ "ನನಗೂ ಗೊತ್ತು ಕಣೊ ನೀ ನನ್ನ ಪ್ರೀತಿಸೋದು, ಆರಾಧಿಸೊದು. ಹುಚ್ಚ, ನೀನು ಹೇಳದಿದ್ದರೆ ನನಗೆ ಅರ್ಥ ಆಗಲ್ಲ ಅನಕೊಂಡಿಯಾ ನನಗೂ ಅರ್ಥ ಆಗಿದೆ ಕಣೆ. ನನಗೆ ನಿನ್ನಷ್ಟು ನೆಮ್ಮದಿ, ನಿನ್ನಷ್ಟು ಪ್ರೀತಿ ನೀಡೊ ಹುಡುಗ ಸಿಗಲ್ಲ ಕಣೊ. ಆದರೆ ಅನಿವಾರ್ಯ ಕಣೊ ಹೆತ್ತವರಿಗೆ ಅವರ ಜವಾಬ್ದಾರಿ, ಮನೆತನಕ್ಕೆ ತಕ್ಕವರು, ಸ್ಟೇಟಸ್ ಮುಖ್ಯನೆ ಹೊರೆತು ಮಗಳ ಮನಸ್ಸಲ್ಲ ಕಣೊ. ನಮ್ಮ ಹಣೆ ಬರಹದಲ್ಲಿ ಇಷ್ಟೇ ಕಣೊ ಬರೆದಿದ್ದು ಅನಿಸುತ್ತೆ. ಸಾರಿ ಕಣೊ" ಎಂದು ಮಗುವನ್ನು ತಾಯಿ ತನ್ನ ತೆಕ್ಕೆಯಲ್ಲಿ ಎಳೆದಂತೆ ಎಳದು ನಾನಿದ್ದೇನೆ ಮಗು ಹೆದರಬೇಡ ಎಂಬ ನಿರ್ಭಯ ಅಪ್ಪುಗೆ ನೀಡಿದಳು. ಮರುಕ್ಷಣ ಧಿರ ಧಿರನೆ ಎದ್ದು ಹೊರಡಲು ಸಜ್ಜಾದಳು. ಎರಡು ಹೆಜ್ಜೆ ಹಾಕಿದವಳೆ ತಿರುಗಿ ನೋಡಿ. "ಏ ಹುಚ್ಚ ಇದನ್ನ ಹೇಳೊದಕ್ಕೆ ಇಷ್ಟು ದಿನಾ ಬೇಕಾಯ್ತಾ ಅಂದಳು." ನನ್ನಲ್ಲಿ ಉತ್ತರವಿಲ್ಲಾ ಆಕೆ ನಡೆದು ಪಾರ್ಕ ದಾಟಿ ಬಿಟ್ಟಳು ಕೇವಲ ಪಾರ್ಕ ಮಾತ್ರವಲ್ಲಾ ನನ್ನ ಹೃದಯದಿಂದ, ನನ್ನ ಜೀವನದಿಂದಲೂ ಕೂಡಾ ದಾಟಿದಳು ಅನಿಸುವ ಭಾವ.

ಕತ್ತಲಾಗಿತ್ತು ಹೊಟ್ಟೆಯಲ್ಲಿ ಸದ್ದು, ನೀರಡಿಕೆ. ಆದರೆ ಎದ್ದು ಹೋಗುವ ಮನಸ್ಸಿಲ್ಲಾ. "ಛೇ ದುಡ್ಡು, ಆಸ್ತಿ, ನೌಕರಿ ಇಷ್ಟಿದ್ದರೆ ಸಾಕಲ್ವಾ ಆಕೆ ನನ್ನಲ್ಲಿ ಬರಲು." ಎಂದು ಮನೆಯ ಕಡೆ ಭಾರವಾದ ಹೆಜ್ಜೆಯನ್ನು ಇಡತೊಡಗಿದೆ. ಮೊಬೈಲ್ ನಲ್ಲಿ ಮೆಸೆಜ್ ಬಂತು ನೋಡಲು ಕೂಡಾ ಆಸಕ್ತಿ ಇಲ್ಲ. ಮತ್ತೊಂದು ಬಂತು. ತೆಗೆದು ನೋಡಿದೆ ವಿದ್ಯಾಳದೆ ಮೇಸೆಜ್. "ನಾನು ನಿನ್ನ ನಂಬ್ತಿನಿ ಕಣೊ ಹುಚ್ಚಾ, ಕಾಯ್ತಿನಿ ಸಾಧಿಸಿ ತೊರಿಸು." "ಐದೆ ವರ್ಷ ಕಣೊ ನಿನಗೆ ಟೈಮ್, ಅನಂತರ ಏನಾದರೂ ನಾನು ಸಿಗಲ್ಲ ಬೇಗ ಸಾಧನೆ ಕಡೆ ಹೆಜ್ಜೆ ಹಾಕು." 

ಮರುಭೂಮಿಯಲ್ಲಿ ನೀರಿಗಾಗಿ ನಡೆದು ನಡೆದು ಬಳಲಿದವನಿಗೆ ನೀರಿನ ಝರಿ ಸಿಕ್ಕಿದ ಖುಷಿ. "ಮಾಡ್ತೆನೆ ಕಣೆ, ಸಾಧನೆ ಮಾಡಿ ಕುದುರೆ ಮೇಲೆ ಬಂದು ನಿನ್ನ ಹೊತ್ತಕೊಂಡು ಹೋಗ್ತೆನೆ ಬೈ." ಅಂತಾ ಮೇಸೆಜ ಹಾಕಿದವನು. ಹಗಲು ರಾತ್ರಿ ಎನ್ನದೆ ಇಷ್ಟಾ ಪಟ್ಟು ಕಷ್ಟ ಪಟ್ಟು 4 ವರ್ಷಕ್ಕೆ ಸಾಧನೆ ಮಾಡಿದ್ದೆ. ಸರಕಾರಿ ನೌಕರಿ, ಎರಡ-ಮೂರು ಬಂಡವಾಳ ಹಾಕಿ ವ್ಯಾಪಾರ, ಆಸ್ತಿ ಮತ್ತು ಆ ಪಾರ್ಕಿನ ಎದುರಿಗೆ  ಮನೆಕಟ್ಟಲು ದೊಡ್ಡ ಸೈಟು. ಇಷ್ಟನ್ನು ಸ್ವಂತದ್ದು ಮಾಡಿಕೊಂಡೆ.

ಆಕೆಯ ಮನೆಯಲ್ಲಿ ರಾದ್ದಾಂತ "ನಿಮ್ಮ ಘನತೆಗೆ ಧಕ್ಕೆ ತರಕೂಡದು ಅಂತಾನೆ ನಿಮ್ಮ ಅನಿಸಿಕೆ ಮತ್ತು ನಿಮ್ಮ ನೇತೃತ್ವದಲ್ಲಿ ಮದುವೆ ಮಾಡಿ ಅಂತಿರೊದು, ಇಲ್ಲದಿದ್ದರೆ ನಾನು ಎಂದೊ ಮದುವೆ ಆಗ್ತಿದ್ದೆ. ನಿಮಗೆ ಹಣ, ಗೌರವ, ಆಸ್ತಿ, ನೌಕರಿ. ಇದೆ ಮುಖ್ಯ ಅಲ್ವಾ ಎಲ್ಲವೂ ಇದೆ ಆತನ ಹತ್ತೀರ ಈಗಲೂ ಆತನನ್ನ ಬೇಡ ಅಂದರೆ ನನ್ನ ಹೆಣ ನೋಡಬೇಕಾಗುತ್ತೆ" ಅಂದಳು. ತುಂಬಾ ಗಟ್ಟಿಗಿತ್ತಿ. ಮೊದಲಿನಿಂದಲೂ ಹಾಗೆ ನಾನು ಸುಮ್ಮನೆ ಮೌನಿಯಾಗಿದ್ದೆ. ನನ್ನ ಜೀವನದ ಹಲವೂ ಸರಿಯಾದ ನಿರ್ಧಾರಗಳಿಗೆ ಆಕೆಯ ಗಟ್ಟಿತನವೆ ಕಾರಣ. ಕೊನೆಗೆ ಹಾಗೊ ಹೀಗೊ ಆಗಿ ಮದುವೆ ಆಯ್ತು. ನಾನು ರಾಜಸ್ಥಾನದಿಂದ ಕುದುರೆ ತರಿಸಿದ್ದೆ. ಆಕೆಗೆ ಕೊಟ್ಟ ಮಾತು ತಪ್ಪಲಿಲ್ಲ. ಆಕೆಯ ಮನೆಗೆ ಕುದುರೆ ಮೇಲೆಯೆ ಹೋಗಿ ಆಕೆಯನ್ನ ಕರೆತಂದೆ.

ಇಂದು ಅದೆ ಪಾರ್ಕಿನ ಎದುರಿಗೆ ಮನೆಕಟ್ಟಿ ನೆಮ್ಮಿದಿಯಾಗಿ ಇದ್ದೇವೆ. ಆಕೆ ಇಲ್ಲದಿದ್ದರೆ ನಾನು ಹೀಗಾಗುತ್ತಿದ್ದನಾ.... ? ಇಷ್ಟು ಸಾಧನೆ ಮಾಡುತ್ತಿದ್ದನಾ...... ?

ಕಾಲಿಗೆ ಗಟ್ಟಿಯಾಗಿ ಏನೊ ಕಚ್ಚಿದ ಅನುಭವ ಕಣ್ಣು ತೆಗೆದು ನೋಡಿದೆ ಇಲಿ ಸರಿಯಾಗಿ ಕಡಿದಿತ್ತು.ಛೇ ಎಂಥ ಕನಸು ನುಚ್ಚು ನೂರು ಮಾಡಿತ್ತಲ್ಲ ದರಿದ್ರ ಎಂದು ಶಪಿಸಿದೆ. ಕಣ್ಣುಜ್ಜಿ ವಾಸ್ತವಕ್ಕೆ ಬಂದೆ ಕೂಲಿಗೆ ಸಮಯ ಆಗಿತ್ತು. ನಾನು ಕೂಲಿ ಮಾಡದೆ ಹೋದರೆ ಅಂದು ಮನೆಯಲ್ಲಿ ಅಮ್ಮ ತಮ್ಮನ ಹೊಟ್ಟೆಗೆ ತಣ್ಣೀರು. ಸರಿಯಾಗಿ ಎಚ್ಚರಿಸಿದೆ ಎಂದು ಪುನಃ ಶಪಿಸಿದ ಮೂಶಿಕನನ್ನೆ ಕೈ ಮುಗಿದು ಎದ್ದು ಕೂಲಿಗೆ ನಡೆದೆ......

"ಆಕೆ ಕಾಯಲಿಲ್ಲ, ಇತ ಸಾಧಿಸಲಿಲ್ಲ".

                                 

                                     ಇಂತಿ,
                                 ರಾಜು ಪಾಟೀಲ
                                 9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು