"ಇವತ್ತು ನಾನೆ ಸೋಮವ್ವಳಿಗೆ ಸಾಯಂಕಾಲ ಬರಬೇಡಾ ಅಂದಿದ್ದೆ, ಹಾಗಾದರೆ ಮತ್ಯಾರು ಬಾಗಿಲು ತಟ್ಟುತ್ತಿರುವದು. ವಿಶಾಲವಾದ ಮನೆ ಆದರೆ ಇರೊಳು ಒಬ್ಬಳೆ, ವಯಸ್ಸಾತು ಏನ ಮಾಡೊದು ಎಳೊಕೆ-ಕುರೊಕೆ ಕಷ್ಟ" ಅಂತಾ ಗೊಣಗುತ್ತಾ ಶಾರದಮ್ಮ ನಿಧನಿಧಾನವಾಗಿ ಹೆಜ್ಜೆ ಹಾಕುತ್ತ ಬಾಗಿಲು ಕಡೆ ಸಾಗಿದಳು.
ಒಂದೆ ಸಮನೆ ಬಾಗಿಲು ಬಡಿಯುತ್ತಿದ್ದ ವ್ಯಕ್ತಿ ಮನೆಯಲ್ಲಿ ಯಾರಾದರೂ ಇದಾರೋ ಇಲ್ಲವೊ ಎಂಬಂತೆ ಬಾಗಿಲು ಬಡಿಯಿತ್ತಿದ್ದ. ಪಾಪ ಐದು ನಿಮಿಷದಿಂದ ಬೆಲ್ ಬಡಿತಿದ್ದ. ಆತನ ಸಹನೆ ಒಡೆದಿತ್ತು. ಪದೆ ಪದೆ ಬಡಿಯುತ್ತಿದ್ದ. "ಬಂದೆ ಬಂದೆ" ಎಂದು ಶಾರದಮ್ಮನ ಧ್ವನಿ ಕೇಳಿದಾಗಲೆ ಬೆಲ್ ಸದ್ದು ನಿಂತಿದ್ದು. "ಅಮ್ಮ ಪಾರ್ಸಲ್ ಬಂದಿದೆ, ತಗೋಳಿ" ಎಂದು ಕೈಗೆ ಒಂದು ಪಾರ್ಸಲ್ ನೀಡಿ, ಕಾಗದದ ಚೂರಿನ ಮೇಲೆ ಶಾರದಮ್ಮನ ರುಜುವಾತು ಮಾಡಿಸಿಕೊಂಡು ಆತ ನಡೆದ.
ಶಾರದಮ್ಮನಿಗೆ ಆಶ್ಚರ್ಯ!! ಯಾರು ಕಳಿಸಿದ್ದು ಪಾರ್ಸಲ್. ಅದು ದೊಡ್ಡದು. ಅದರ ಭಾರವನ್ನು ಹೊತ್ತು ನಿಧನಿಧಾನವಾಗಿ ಮನೆಯೊಳಗೆ ತಂದರು. ಒಂದು ನಿಮಿಷ ಸಮಾಧಾನ ಮಾಡಕೊಂಡಾದ ಮೇಲೆ ಅದನ್ನ ಆಶ್ಚರ್ಯದಿಂದ ನೋಡಿ, ಅದನ್ನ ಬಿಚ್ಚತೊಡಗಿದಳು. ದುಬಾರಿಯಾದ ರೆಶ್ಮೆ ಸೀರೆ, ಬಂಗಾರದ ಬಳೆ ಮತ್ತು ಮೊಮ್ಮಕ್ಕಳ ಫೋಟೊ. ಮಗ ರಮೇಶ ದೂರದ ಅಮೇರಿಕೆಯಿಂದ ಕಳಿಸಿದ್ದು. ಅಷ್ಟರಲ್ಲಿ ಪೋನ್ ರಿಂಗಣಿಸಿತ್ತು. ಮತ್ತೆ ಕಾಲನ್ನು ಎಳೆಯುತ್ತಾ, ನಿಧನಿಧಾನವಾಗಿ ಫೋನ್ ಎತ್ತಿ ಹಲೋ ಅಂದರೆ ಆಕಡೆ "Happy Birthday ಅಜ್ಜಿ" ಎಂದು ಒಂದೆ ಸಮನೆ ಎರಡು ಮೊಮ್ಮಕ್ಕಳು ಜೋರಾಗಿ ಕುಗ್ತಿದ್ದಾರೆ. ಶಾರದಮ್ಮನಿಗೆ ತನ್ನ ಹುಟ್ಟು ಹಬ್ಬಕ್ಕಿಂತ ಮೊಮ್ಮಕ್ಕಳ ಧ್ವನಿಯಿಂದಲೆ ಖುಷಿಯಾಗಿ ಆನಂದದಲ್ಲಿ ತೆಲಾಡಿದಳು. ಶಾರದಮ್ಮನಿಗೆ ಮೊಮ್ಮಕ್ಕಳು ಅಂದರೆ ಪಂಚಪ್ರಾಣ. ಹೊದ ವರ್ಷ ಶಾರದಮ್ಮನ್ನ ಹುಟ್ಟು ಹಬ್ಬಕ್ಕೆ ಎಲ್ಲರೂ ಸೇರಿ ಗೋಕರ್ಣ, ಉಡುಪಿ ಸುತ್ತಾಡಿ ಬಂದಿದ್ದರು. ಮೊಮ್ಮಕ್ಕಳು ಅಜ್ಜಿಗೆ ಅಂಟಿಕೊಂಡೆ ಇದ್ದರು. ಸುಮಾರು ಒಂದ ವರ್ಷ ಆಯಿತು ಅವರ ಮುಖ ನೋಡಿ. ಆಗಾಗ ಭಾದಿಸುತ್ತಿತ್ತು ಅವರ ನೆನಪು. ವಾರದಲ್ಲೊ ಹದಿನೈದು ದಿನಕ್ಕೊಮ್ಮೆ ವಿಡಿಯೋ ಕಾಲ ಮಾಡ್ತಾರೆ. ಆದರೂ ಎದುರಿಗೆ ಸಿಕ್ಕ ಖುಷಿ ಆ ಡಬ್ಬಿಯಲ್ಲಿ ಸಿಗುವುದೆ ?
ಸೊಸೆ, ಮಗ, ಮೊಮ್ಮಕ್ಕಳ ಹಾರೈಕೆಯೊಂದಿಗೆ ಗಿಫ್ಟ ಇಷ್ಟಾ ಆಯ್ತಾ, ತುಂಬಾ ಖುಷಿ ಆತು ಎಂಬಲ್ಲಿಗೆ ಮಾತು ಮುಗಿತು. ಅವರೆಲ್ಲ ಈ ದಿನ ಶಾರದಮ್ಮನ ಹುಟ್ಟು ಹಬ್ಬದ ಸಂಭ್ರಮವನ್ನು ಹೊಟೇಲಗೆ ಹೋಗಿ ಕಳೆಯೊರಿದ್ದರು. "ಅಮ್ಮ ನೀವೂ ಊಟಾ ಮಾಡಿ" ಎಂದ ಮಗ. ಆಯ್ತಪಾ ಹುಷಾರು ಎಂದು ಶಾರದಮ್ಮ ಪೋನ್ ಕೆಳಗಿಟ್ಟಲು.
ಶಾರದಮ್ಮನಿಗೆ ಮದ್ಯಾಹ್ನದಿಂದಲೂ ಹಸಿವಿರಲಿಲ್ಲಾ. ಅದೆನೊ ಹೊಟ್ಟೆಯಲ್ಲಿ ಕಸಿವಿಸಿ. ಹಳೆಯ ನೆನಪುಗಳು ಮೆಲುಕು. ಮೊಮ್ಮಕ್ಕಳ ನೋಡೊ ಆಸೆ. ತನ್ನದು ಇವತ್ತು ಹುಟ್ಟು ಹಬ್ಬ ಎಂದು ಆಕೆಗೆ ನೆನಪಿರಲಿಲ್ಲ. ನೆನಪಲ್ಲಿಡೊಕೆ ಅದೊಂದು ಸಂಭ್ರಮದ ಹಬ್ಬವೆ ? ತನ್ನ 80 ವರ್ಷದ ಅವಧಿಯಲ್ಲಿ ಸುಮಾರೆಂದರೆ 10 ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಬಹುದು. ಅದು ಮಗ ಒಂದು ಸ್ಥಾನಕ್ಕೆ ಏರಿದಾಗ. ಅದಕ್ಕಿಂತ ಮುಂಚೆ ಶಾರದಮ್ಮನಿಗೆ ದುಡಿಯದೆ ವಿಧಿ ಇರಲಿಲ್ಲಾ. ಆಕೆಗೆ ಹಬ್ಬವೆಂದರೆ ಯುಗಾದಿ, ದೀಪಾವಳಿ.
ಸೀರೆಯನ್ನು, ಬಳೆಯನ್ನು ಎತ್ತಿಟ್ಟು ಮೊಮ್ಮಕ್ಕಳ ಪೋಟೊವನ್ನು ನೊಡುತ್ತ ಕುಳಿತ ಶಾರದಮ್ಮ ತನ್ನ ಹಳೆಯ ಇತಿಹಾಸದಲ್ಲಿ ಇಳಿದಳು. ಗಂಡ ಸತ್ತೊದಾಗ ತನಗಿದ್ದ ವಯಸ್ಸಾದರು ಎಷ್ಟಿತ್ತು ? ಶಾರದಮ್ಮನಿಗೆ ಕೇವಲ 18. ಮೂರು ಮಕ್ಕಳು. ದೊಡ್ಡವನು ರಮೇಶ, ಎರಡನೆಯವನು ಸುರೇಶ ಮೂರನೆಯವಳು ಸಾವಿತ್ರಿ. ಮೂರು ಮಕ್ಕಳನ್ನು ಇವಳ ಮಡಿಲಿಗೆ ಇಟ್ಟು, ಕುಡಿತದ ಚಟಕ್ಕೆ ತನ್ನ ಚಟ್ಟವನ್ನು ಕಟ್ಟಿಕೊಂಡಿದ್ದ ಶಾರದಮ್ಮನ ಗಂಡ.
ಮೂರು ಪುಟ್ಟ ಮಕ್ಕಳನ್ನು ಕರೆದುಕೊಂಡು ಸರಕಾರ ನೀಡಿದ ಬೈಲು ಜಾಗದಲ್ಲಿ ಗುಡಿಸಲು ನಿರ್ಮಿಸಿದ್ದಳು. ಮನೆ ಮನೆಗೆ ಕಸ ಮುಸುರೆ ತೊಳೆದುಕೊಂಡು ಮಕ್ಕಳ ಶಿಕ್ಷಣ, ಹೊಟ್ಟೆ, ಬಟ್ಟೆ ನೋಡ್ಕೊಳೊದು ಮಾಡುತ್ತಿದ್ದಳು. ಶಿಕ್ಷಣದಲ್ಲಿ ಮಕ್ಕಳು ಚುರುಕಾಗಿದ್ದರು. ಎಷ್ಟೆ ಕಷ್ಟ ಬಂದರು ಶಾಲೆಯನ್ನು ಬಿಡಸಕೂಡದು ಎಂಬುದು ಶಾರದಮ್ಮನ ಆಸೆ. ಮಕ್ಕಳು ಕೂಡಾ ಆಕೆಯ ಆಸೆಯಂತೆಯೆ ಬೆಳೆದರು.
ಸಾವಿತ್ರಿ 15 ವರ್ಷದವಳಿರಬಹುದು ಹೈಸ್ಕೂಲ್ ಹೋಗುತ್ತಿದ್ದಳು. ಮನೆಯಿಂದ 5 ಮೈಲಿ ದೂರ ಅಷ್ಟೇ. ಮಧ್ಯದಲ್ಲಿ ಒಂದು ಹೆದ್ದಾರಿ ದಾಟಿ ಹೋದರೆ ಆಕೆಯ ಶಾಲೆ. ಅವತ್ತು ಮನೆಯಲ್ಲಿ ಕೆಲಸ ಬಹಳ ಇದ್ದುದ್ದರಿಂದ ಅವಸರ-ಅವಸರದಲ್ಲಿ ಎಲ್ಲ ಕೆಲಸ ಮಾಡಿ ಶಾಲೆಗೆ ಓಡೊಡಿ ಹೋದಳು. ಶಾರದಮ್ಮ ಕೂಡಾ ಮನೆಗೆ ಬೀಗ ಹಾಕಿ ತನ್ನ ಕೆಲಸಕ್ಕೆ ಹೋದಳು. ಹೆದ್ದಾರಿ ದಾಟುತ್ತಿದ್ದ ಸಾವಿತ್ರಿಗೆ ಯಮವೇಗದಲ್ಲಿ ಬರುವ ಕಾರನ್ನು ನೋಡಿ ಹೆದರಿ ಕಣ್ಣು ಮುಚ್ಚಿ ಜೋರಾಗಿ ಕೂಗಿದಳು. ಧ್ವನಿ ಆಕಾಶದೆತ್ತರಕ್ಕೆ ಹಾರಿತು ಕಣ್ಣು ಮಾತ್ರ ತೆಗೆಯಲಿಲ್ಲ. ಎಷ್ಟೂ ಮೆಲಕ್ಕೆ ಹಾರಿದ್ದಳೊ, ಅಷ್ಟೇ ರಭಸವಾಗಿ ರಸ್ತೆಗೆ ಅಪ್ಪಳಿಸಿದಳು. ಬಿದ್ದ ಏಟಿಗೆ ಬುರುಡೆ ಬಿಚ್ಚಿತು. ಕಿವಿ-ಬಾಯಿಯಲ್ಲಿ ರಕ್ತ ಚಿಮ್ಮಿತು. ಕಷ್ಟಪಟ್ಟು ಕೊನೆಯ ಉಸಿರು ಪಡೆಯಲು ಹೆಣಗಾಡಿದಳು. ಅರ್ಧ ರೆಪ್ಪಯಲ್ಲಿ ಕಣ್ಣು ಬಿಟ್ಟಳು, ತೆಗೆದುಕೊಂಡ ಉಸಿರು ಒಳಗೆ ಹೊಗಲಿಲ್ಲ. ಬಿಟ್ಟ ಕಣ್ಣು ಮುಚ್ಚಲಿಲ್ಲ. ಅಮ್ಮ ಎಂಬ ಕ್ಷೀಣ ಧ್ವನಿ. ಪ್ರಾಣ ಹಾರಿಹೊಯಿತು.
ಡುಪ್ಲೆಕ್ಸ ಮನೆಯಲ್ಲಿ ಭರ್ತಿ ಒಂದುವರೆ ಲಕ್ಷದ ಸೋಪಾದ ಮೇಲೆ ಕುಳಿತಿದ್ದ ಶಾರದಮ್ಮನ ಕಣ್ಣಲ್ಲಿ ನೀರು ಉಕ್ಕಿದ್ದವು. ಮೊಮ್ಮಕ್ಕಳ ಪೋಟೊದ ಮೇಲೆ ಒಂದೆರಡು ಹನಿ ಬಿದ್ದು, ಸೆರಗಿನಿಂದ ಕಣ್ಣು ಮತ್ತು ಪೊಟೊವನ್ನು ಒರೆಸಿದ ಶಾರದಮ್ಮನಿಗೆ ಯಾಕೋ ಗಂಟಲು ಒಣಗಿದ ಅನುಭವ. ಎದ್ದು ಹೊಗಿ ನೀರು ಕುಡಿದ ಒಂದೆರಡು ನಿಮಿಷ ನಿಂತಕೊಂಡ ಸುಧಾರಿಸಿಕೊಂಡ ಪುನಃ ಸೋಪಾದ ಮೇಲೆ ಬಂದು ಕುಳಿತರು, ಹಿರಿಯ ಜೀವ ಶಾರದಮ್ಮ.
ರಮೇಶನಿಗೆ ಚಿಕ್ಕವಯಸ್ಸಲ್ಲೆ ಕಷ್ಟದ ಜೀವನ ನೋಡಿಕೊಂಡ ಬೆಳದಿದ್ದ ಆದ್ದರಿಂದ ಆತ ಜೀವನವನ್ನು ತುಂಬಾ ಗಂಭಿರವಾಗಿ ತೆಗೆದುಕೊಂಡಿದ್ದ. ಆದರೆ ಸುರೇಶ ಮಾತ್ರ ಸಣ್ಣ ವಯಸ್ಸಲ್ಲೆ ಕೆಟ್ಟವರ ಸಹವಾಸ ಮಾಡಿ ಪದವಿ ಮುಗಿಯೊದರೊಳಗೆ ಕೆಟ್ಟುಹೊಗಿದ್ದ. ಕುಡಿತ, ಜೂಜು ಅಂತಾ ಹಣವೆಲ್ಲಾ ಖರ್ಚು ಮಾಡುತ್ತಿದ್ದ. ಮನೆಯಲ್ಲಿ ಹಣ ಕೇಳುತ್ತಿರಲಿಲ್ಲ ಆದರೆ ಅದ್ಯಾವ ದಾರಿಯಲ್ಲಿ ಸಂಪಾದನೆ ಮಾಡಿ ಅದನ್ನೆಲ್ಲಾ ಮಾಡುತ್ತಿದ್ದನೊ! ಊರಲ್ಲೆಲ್ಲಾ ತಂದೆಯಿಲ್ಲದ ಮಗ ಸರಿಯಾಗಿ ಬೆಳಸಲಿಲ್ಲಾ ಶಾರದಮ್ಮ, ಅಂತಾ ಶಾರದಮ್ಮನಿಗೆ ತುಚ್ಛವಾಗಿ ಕಾಣುತ್ತಿದ್ದರು, ತೆಗಳುತ್ತಿದ್ದರು. ಆದರೆ ರಮೇಶ ಒಳ್ಳೆಯವನು. ಅವನ ಕುರಿತು ಹೊಗಳಿಕೆ ಶಾರದಮ್ಮನಿಗೆ ಸಿಗುತ್ತಿರಲಿಲ್ಲ. ಸಮಾಜವೆ ಹಾಗೆ ಒಳ್ಳೆಯದಕ್ಕೆ ಬೆಲೆಯಿಲ್ಲ ಕೆಟ್ಟದಕ್ಕೆ ಮಾತ್ರ ಬಹು ಪ್ರಾಮುಖ್ಯ ಕೊಡೊದು. ಎಷ್ಟೆ ಬುದ್ದಿ ಹೇಳಿದರು ಮಾತು ಕೇಳದ ಸುರೇಶ ಕೊನೆಗೆ ಕುಡಿತದ ಚಟಕ್ಕೆ ದಾಸನಾಗಿ ಅದ್ಯಾರೊ ಸ್ನೇಹಿತನ ಜೊತೆ ಸೇರಿ ಅಡ್ಡದಾರಿ ಹಿಡಿದು ಜೈಲು ಪಾಲಾದ. ಮನೆಯಿಂದ ಬೆಳ್ಳ ಬೆಳ್ಳಗೆ ಪೋಲಿಸರು ಕೊರಳ ಪಟ್ಟಿ ಹಿಡಿದು ನಾಯಿಯಂಗೆ ತಾಯಿಯ ಮುಂದೆ ಎಳೆದುಕೊಂಡು ಹೋಗುವಾಗ ತಾಯಿ ಕರಳು ಎಷ್ಟು ಸಂಕಟ ಪಟ್ಟಿರಬಾರದು. ಶಾರದಮ್ಮ ತುಂಬಾ ಸೊರಗಿದಳು. ಅಷ್ಟೊತ್ತಿಗೆ ರಮೇಶನಿಗೆ ಓದು ಮುಗಿದು ಒಂದೊಳ್ಳೆ ಕೆಲಸಕ್ಕೆ ಸೆರಿಕೊಂಡ.
ತನ್ನ ಜೊತೆ ಓದಿದ ರೋಹಿಣಿ ಅನ್ನೊ ಅಂದವಾಗಿದ್ದ ಹುಡುಗಿಯನ್ನ ಪ್ರೀತಿಸುತ್ತಿದ್ದ. ಶಾರದಮ್ಮನ ಮುಂದೆ ಹೇಳಲು ಧೈರ್ಯವಾಗದೆ ತನ್ನ ಸ್ನೇಹಿತನ ಮೂಲಕ ಶಾರದಮ್ಮನಿಗೆ ತಿಳಿಸಿದ್ದ. ಇದ್ದ ಎರಡು ಮಕ್ಕಳು ಹೀಗಾದವು ಇನ್ನೂ ಇದಕ್ಕೆ ವಿರೊಧ ಮಾಡಿದರೆ ಇವನೆನು ಮಾಡಿಕೊಳ್ಳುತ್ತಾನೆ ಎಂಬ ಸಂಕಟದಿಂದ ಮತ್ತು ಮಗನ ಇಚ್ಛೆಗೆ ಅಡ್ಡಿಬರಬಾರದು ಎಂದು ಒಪ್ಪಿದ್ದಳು, ಮದುವೆಯು ಆಯಿತು. ಗುಡಿಸಲಿನಿಂದ ಮುಕ್ತಿಹೊಂದಿ ಒಂದು ಬಾಡಿಗೆ ಮನೆಗೆ ಇಡೀ ಸಂಸಾರ ವರ್ಗವಾಯಿತು. ಗುಣವಂತ ಸೊಸೆ, ಜವಾಬ್ದಾರಿಯುತ ಮಗ. ಸುರೇಶನ ಚಿಂತೆಯೊಂದು ಬಿಟ್ಟು ಉಳಿದೆಲ್ಲವೂ ಚೆನ್ನಾಗಿತ್ತು ಶಾರದಮ್ಮನಿಗೆ.
ಮೂರು ವರ್ಷ ಆಗಿತ್ತು ರಮೇಶ ಕೆಲಸಕ್ಕೆ ಸೇರಿ. ಅವನ ಕೆಲಸದ ಚಾಕ್ಯತೆಯನ್ನು ನೋಡಿ ಅವನ ಸಂಸ್ಥೆಯವರು ಅವನಿಗೆ ಪ್ರಮೋಶನ್ ನೀಡಿ ದೂರದ ಅಮೇರಿಕಾದ ಬ್ರಾಂಚಗೆ ಮುಖ್ಯಸ್ಥನನ್ನಾಗಿ ಮಾಡಿತು. ಒಳ್ಳೆಯ ಸಂಬಳ, ದೊಡ್ಡ ಸ್ಥಾನ. ನಿರಾಕರಿಸಲಾಗದೆ ರಮೇಶ ಒಪ್ಪಿಕೊಂಡ. ಖುಷಿಖುಷಿಯಿಂದ ಮನೆಗೆ ಸಿಹಿ ತಿಂಡಿಗಳನ್ನು ತಂದು ವಿಷಯವನ್ನು ಹಂಚಿಕೊಂಡ. ಅವತ್ತು ಹಬ್ಬದ ವಾತಾವರಣ ಶಾರದಮ್ಮನಿಗೂ ಖುಷಿಯಾಗಿತ್ತು. ಆದರೆ ಎರಡು ದಿನದಲ್ಲಿ ಅದು ದುಃಖವಾಗಿ ಪರಿಣಮಿಸುತ್ತೆ ಅನ್ನೊದು ಶಾರದಮ್ಮನಿಗೆ ತಿಳಿದಿರಲಿಲ್ಲ. ಏರ ಟಿಕೆಟ್ ಎಲ್ಲವೂ ಹೊಂದಿಸಿಕೊಂಡ ಮನೆಗೆ ಬಂದ ರಮೇಶ "ಅಮ್ಮ ನಾಳೆ ಬೆಳಗ್ಗೆ ಹೊರಡಲಿದ್ದೆವೆ, ಎಲ್ಲ ಕೆಲಸವು ಆಗಿದೆ. ನಾಳೆ ಏರಪೊರ್ಟಿಗೆ ಹೋಗೊಣ, ಅಲ್ಲಿಂದ ನಮಗೆ ನೀನು ಬಿಳ್ಕೋಡುವಂತೆ ಅಲ್ಲಿಗೆ ಹೋದ ಬಳಿಕ ನಿನಗೆ ಪೋನ್ ಮಾಡುವೆ. ನಿನಗಂತ 1 ಲಕ್ಷ ಹಣ ಲಾಕರನಲ್ಲಿ ಇಟ್ಟಿದ್ದೆನೆ ಇನ್ನೊಂದಿಷ್ಟು ಹಣ ನಿನ್ನ ಬ್ಯಾಂಕಲ್ಲಿ ಇಟ್ಟಿದ್ದೆನೆ. ನಿನ್ನ ಸೇವೆಗಾಗಿ ಸೋಮವ್ವಳಿಗೆ ಹೇಳಿದ್ದೆನೆ. ಆರು ತಿಂಗಳಿಗೊಮ್ಮೆ ರೋಹಿಣಿ ನಾನು ಬಂದು ತಮ್ಮ ಜೊತೆ ಎರಡು ದಿನ ಇದ್ದು ಹೊಗ್ತೆವೆ. ನಿನ್ನ ಆಶಿರ್ವಾದದಿಂದ ಇಷ್ಟೆಲ್ಲ ಸಾಧಿಸಿದೆ ಅಮ್ಮ" ಎಂದು ಶಾರದಮ್ಮನ ಕಾಲಿಗೆ ನಮಸ್ಕರಿಸಿದ. ಒಂದೆ ಉಸಿರಲ್ಲಿ ತನ್ನ ಮಾತನ್ನು ಮುಗಿಸಿದ. ಮಗ ತನ್ನ ಜೊತೆ ಶಾರದಮ್ಮಳಿಗೂ ಕರೆದುಕೊಂಡ ಹೊಗ್ತಾನೆ ಎಂಬ ಆಸೆಯನ್ನು ಇಟ್ಟಿದ್ದಳು. ಆದರೆ ಮಗ ಶಾರದಮ್ಮಳಿಗೆ ಇಲ್ಲಿಯೆ ಬಿಟ್ಟು ದೂರದುರಿಗೆ ಹೊರಟಿದ್ದ. ಶಾರದಮ್ಮನಿಗೆ ಮಾತೆಯಿರಲಿಲ್ಲ, ಮೊದಲೆ ಮೌನಿಯಾಗಿದ್ದ ಶಾರದಮ್ಮ ಈಗ ಒಂಟಿಯಾದಳು.
ಆರ ತಿಂಗಳಿಗೊಮ್ಮೆ ಬರುತೆನೆ ಅಂದಿದ್ದ ಮಗ-ಸೊಸೆ ಎರಡು ವರ್ಷವಾದರೂ ಬರಲಿಲ್ಲ. ಆದರೆ ತಪ್ಪದೆ ಎರಡ ದಿನಕ್ಕೊಮ್ಮೆ ಫೋನ್ ಮಾಡುತ್ತಾರೆ. ಅಮೇರಿಕಾಕ್ಕೆ ಹೋದ ಒಂದೆ ವರ್ಷದಲ್ಲಿ ಒಂದು ಹೆಣ್ಣು ಮಗು ಆಗಿತ್ತು. ಎರಡನೆ ಮಗು ಹೊಟ್ಟೆಯಲ್ಲಿ ಇಟ್ಟುಕೊಂಡು ಊರಿಗೆ ಬಂದಿದ್ದರು.
ಇಲ್ಲಿಯೆ ಎರಡನೆ ಮಗುವನ್ನು ಹೆತ್ತು, ಮೂರು ತಿಂಗಳಾದ ಬಳಿಕ ಪುನಃ ಹೊದವರು ಹೊದ ವರ್ಷ ಅಂದರೆ ಎರಡನೆ ಮಗು ಎರಡು ವರ್ಷವಾದಾಗ ಬಂದಿದ್ದರು. ಬಂದಾಗ ಒಂದು ಬಂಗಲೆಯನ್ನು ಖರಿದಿಸಿದ್ದರು. ಇಷ್ಟು ದೊಡ್ಡ ಬಂಗಲೆಯಲ್ಲಿ ಇರೊದ ಶಾರದಮ್ಮ ಒಬ್ಬರೆ. ಕೆಲಸಕ್ಕೆ ಅಂತಾ ಸೋಮವ್ವ ಬೆಳಗ್ಗೆ ಸಾಯಂಕಾಲ ಬಂದು ಹೊಗ್ತಾಳೆ. ಶಾರದಮ್ಮನ ಊಟ, ಆರೋಗ್ಯ ಎಲ್ಲವನ್ನೂ ವಿಚಾರಿಸುವ, ನೋಡಿಕೊಳ್ಳುವವಳು ಆಕೆನೇ. ಏನೇನೂ ಇಲ್ಲದಿದ್ದ ಶಾರದಮ್ಮ ಇಂದು ಲಕ್ಷಗಟ್ಟಲೆ ಹಣ ಇದ್ದರು ಒಂದು ಕುಟುಂಬವಿಲ್ಲ, ಸರಿಯಾಗಿ ನೆಮ್ಮದಿಯಿಲ್ಲ, ಸರಿಯಾದ ನಿದ್ದೆಯಿಲ್ಲ. ಶಾರದಮ್ಮ ಕಷ್ಟದ ದಿನಗಳಲ್ಲಿ ದುಡಿತಿದ್ದಳು, ಹೊಟ್ಟೆ ತುಂಬಾ ಉಂಡು ನೆಮ್ಮದಿಯ ನಿದ್ದೆ ಮಾಡುತ್ತಿದ್ದಳು. ಆದರೆ ಈಗ ಕಾಲ ಬದಲಾಗಿದೆ ಮಗ ಕೊಟಿಗಟ್ಟಲೆ ಸಂಪಾದಿಸಿದ್ದಾನೆ ದೊಡ್ಡ ಬಂಗಲೆ ಕಟ್ಟಿಸಿಕೊಟ್ಟಿದಾನೆ, ಕೈ ತುಂಬಾ ಹಣ ನೀಡಿದ್ದಾನೆ ಆದರೆ ಕೊನೆಗಾಲದಲ್ಲಿ ಆಸರೆ ಆಗಬೇಕಿದ್ದ ಮಗ ಸೊಸೆ, ಕಣ್ಣ ಮುಂದೆ ಅಡಬೆಕಾದ ಮೊಮ್ಮಕ್ಕಳು ಇಲ್ಲಿಲ್ಲಾ. ಆ ಬೇಜಾರಲ್ಲಿ ಒಂಟಿಯಾಗಿದ್ದಳು ಶಾರದಮ್ಮ.
ಅದೆಕೊ ಮದ್ಯಾಹ್ನದಿಂದ ಎದೆಯಲ್ಲಿ ಕಸಿವಿಸಿ, ಸಂಕಟ. ಕಾಲಲ್ಲಿ ಶಕ್ತಿಯಿಲ್ಲ. ಸಾಯಂಕಾಲ ಸೋಮವ್ವಳಿಗೆ ಕೆಲಸಕ್ಕೆ ಬರಬೇಡಾ ಅಂದಿದ್ದಳು. ಸೊಪಾದ ಮೇಲೆ ಕುಳಿತಿದ್ದ ಶಾರದಮ್ಮಗೆ ಎದೆಯಲ್ಲಿ ಚುಚ್ಚಿದಂತೆ ಆಗ್ತಿದೆ, ಮತ್ತೆ ಗಂಟಲು ಒಣಗಿದೆ. ನೀರು ಕುಡಿಯಲು ಬೆಸರ, ಸೋಪಾದ ಮೇಲೆಯೆ ಕಾಲುಚಾಚಿ ಮಲಗಿದಳು, ಮಲಗಿದಲ್ಲಿಯೆ ನಿದ್ದೆ.
ಸಮಯ ಮದ್ಯರಾತ್ರಿ 1 ಘಂಟೆ ಆಗಿತ್ತು. ಎಚ್ಚರಗೊಂಡ ಶಾರದಮ್ಮ ಎದೆಯನ್ನು ಹಿಡಿದು ಉಸಿರು ತೆಗೆದುಕೊಳ್ಳಲು ಕಷ್ಟ ಪಡುತಿದ್ದಳು. ನೀರು, ಮಾತ್ರೆ ಎದ್ದು ತೆಗೆದುಕೊಳ್ಳುವಷ್ಟು ಕೂಡಾ ಅಶಕ್ತಳಾಗಿದ್ದಳು. ಯಾರೊ ಬಾಗಿಲು ಬಳಿ ಮನುಷಾಕೃತಿ ಸುಳಿದಂತಾಯಿತು. ಕೂಗಬೇಕು ಎಂದರೆ ಗಂಟಲು ಹಿಡಕಂಡಿದೆ. ಅಷ್ಟಕ್ಕೂ ಅಷ್ಟು ಹೊತ್ತಲ್ಲಿ ಮನೆಯ ಕಡೆ ಸುಳಿದವರು ಯಾರೂ ? ಅಂತಹ ಕಷ್ಟದ ಪರಿಸ್ಥಿತಿಯಲ್ಲೂ ಶಾರದಮ್ಮನ ತೆಲೆಯಲ್ಲಿ ವಿಚಾರ ಸುಳಿಯುತಿತ್ತು. ತುಂಬಾ ಒದ್ದಾಡಿದಳು. 1.30 ಕ್ಕೆ ಬಾಗಿಲು ಜೋರಾಗಿ ಸಪ್ಪಳ ಆಯ್ತು, ಈ ಕಡೆ ಸೋಪಾದ ಮೇಲಿನಿಂದ ಕೆಳಗೆ ಬಿದ್ದ ಶಾರದಮ್ಮ ಜೋರಾಗಿ ಅಮ್ಮ ಎಂದು ಕೂಗಿದ ಸದ್ದು. ಒಂದೆ ಸಮಕ್ಕೆ ಎರಡು ಕಡೆ ಸದ್ದು ಮೌನವಾಗಿತು. ಸಂಪೂರ್ಣ ಸ್ಮಶಾನ ಮೌನವಾಯಿತು.
ಕೊನೆಯದಾಗಿ ಶಾರದಮ್ಮನ ಕಣ್ಣಲ್ಲಿ ಇಡೀ ತನ್ನ ಬದುಕಿನ ಪುಟಗಳು ಅಲೆದಾಡಿದವು. ಬಲಗೈ ಮೊಮ್ಮಕ್ಕಳ ಫೋಟೊದ ಮೇಲೆ ಬಿಗಿಯಾಗಿ ಹಿಡಿದಿಟ್ಟಿತು. ಹಣ್ಣು ಜೀವ ಒಂಟಿಯಾಗಿ, ಬಾಯಲ್ಲಿ ನೀರು ಹಾಕೊಕು ಯಾರೂ ಇರದೆ ಕಣ್ಣುಮುಚ್ಚಿತು. ಬಾಗಿಲ ಬಳಿಯ ನೆರಳು ಕೂಡಾ ಮರೆಯಾಯಿತು......
9611042409


0 ಕಾಮೆಂಟ್‌ಗಳು