Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಅಪ್ಪ ಅಂದರೆ ?



ಅಪ್ಪ ಅಂದರೆ ಆಕಾಶ. ಅಪ್ಪ ಅಂದರೆ ಭಯ. ಅಪ್ಪ ಅಂದರೆ ಗದರಿಸುವವ-ಕೋಪಾ. ಅಪ್ಪ ಅಂದರೆ ಸೀನಿಯರ್. ಅಪ್ಪ ಅಂದರೆ ಹಿರೋ. ಅಪ್ಪ ಸೈಕಲ್‌ ನ ಕೆರಿಯರ್ ಹಿಡಿದು ಕಲಿಸುವವನು. ಅಪ್ಪ ಅಂದರೆ ಹೆಗಲ ಮೇಲೆ ಹೊತ್ತು ಜಾತ್ರೆಯ ತೇರು ತೊರಿಸುವವನು. ಅಪ್ಪ ಅಂದರೆ ಬದುಕು ಕಲಿಸುವವನು. ಅಪ್ಪ ತನ್ನ ಕನಸನ್ನ ಮಗನಲ್ಲಿ ಬಿತ್ತುವವನು.

"ಏ ಮಗ ಯಾರೋ ನಿನ್ನ ಹೊಡೆದವರು ಎರಡು ಕೊಟ್ಟ ಬರಬೇಕಲಾ ನೀ ನನ್ನ ಮಗ. ನನ್ನ ಮಗ ಎಂದಿಗೂ ಹಿಂಜರಿಯಬೇಡ" ಅಂತಾ ಧೈರ್ಯ ತುಂಬುತ್ತಾನೆ ಅಪ್ಪ. "ಏ ಕತ್ತೇ ಭಡವ ಅವರ ಹತ್ತೀರ ಏನೊ ಕೆಳ್ತಿಯಾ, ನನ್ನ ಮರ್ಯಾದೆ ತಗಿತಿಯಾ". ಅಂತಾ ಸ್ವಾಭಿಮಾನ ಕಲಿಸಿದವನು. "ಇವನು ನನ್ನ ಮಗ ಸ್ಕೂಲಲ್ಲಿ ತುಂಬಾ ಜಾಣ ಇಂಗ್ಲಿಷ್ ಸ್ಕೂಲಗೆ ಹಾಕಿನಿ." ಅಂತಾ ಹೆಮ್ಮೆ ಪಟ್ಟು-ಪಡಿಸುವವನು. ನನ್ನ ಮಗನಿಗೆ ಮನೆ ಕಟ್ಟಿಸಬೇಕು. ಅವನಿಗೆ ಚೆನ್ನಾಗಿ ಓದಿಸಬೇಕು. ಅವನನ್ನ ಒಬ್ಬ ಜವಾಬ್ದಾರಿಯುತ ಮನುಷ್ಯನನ್ನಾಗಿ ಮಾಡಬೇಕು. ಮಗನಿಗಾಗಿ ಚರಾಸ್ಥಿ, ದುಡ್ಡು ಅಂತಾ ಅವನ ಭವ್ಯ ಭವಿತವಾದ ಕನಸು ಕಂಡು, ತಾನೂ ಪಟ್ಟ ಕಷ್ಟ ಮಗ ಅನುಭವಿಸಬಾರದೆಂದು ಕರುಳ ಆಳದಲ್ಲಿ ನೋವ ಅನುಭವಿಸುವವನು.

ಆದರೆ ಸ್ವಲ್ಪ ಜಾಣರಾದ ನಾವೂ ಅಪ್ಪನನ್ನ ಕೇವಲ ಗದರಿಸುವ ವ್ಯಕ್ತಿ ಅಂತಾ ನಾವೆ ಸರ್ಟಿಫಿಕೇಟ್ ಕೊಟ್ಟುಬಿಡ್ತಿವಿ. "ನಮ್ಮಪ್ಪ ತುಂಬಾ ದುರಹಂಕಾರಿ ದುಡ್ಡೆ ಕೊಡಲ್ಲಾ, ತುಂಬಾ ಕಂಜೂಸ್ ನನ್ಮಗ." ಅಂತಾ ಗೆಳಯರ ಮುಂದೆ ಅಪಹಾಸ್ಯ ಮಾಡ್ತಿವಿ. ಆಗ ನಮಗೆ ಬೇಕಿರುವದು ಪಡೆಯಬೆಕು ಅಷ್ಟೆ. ಅದಕ್ಕಾಗಿ ಹುಡುಕುವ ಮಾರ್ಗ ಅಪ್ಪನನ್ನ ದಬಾಯಿಸೊದು. ಹಟ ಮಾಡೋದು. ಬ್ಲಾಕ್ ಮೇಲ್ ಮಾಡೊದು. ಹಂಗೋ ಹಿಂಗೋ ಮಾಡಿ ಅಪ್ಪನ ಹತ್ತೀರ ಇಷ್ಟವಾದ ದುಬಾರಿ ಮೊಬೈಲ್, ದುಬಾರಿ ಬೈಕ್, ದುಬಾರಿ ಬಟ್ಟೆ ಖರೀದಿಸೊದು. ಅದನ್ನ ಹಾಕೊಂಡ ಮೆರೆಯೋದು ಆದರೆ ಆತ್ಮವಲೋಕನ ಮಾಡಿ ನೋಡೊಣ. ಎಂದಾದರೂ ಇದು ನಮ್ಮ ಅಪ್ಪಂದು ಅಂತಾ ಎಲ್ಲಾದರೂ ಹೇಳಿದಿವಾ ...? ನೋ.. ವೆ. ಆದರೆ ಅಪ್ಪನೆ ಕಷ್ಟಪಟ್ಟು ಬೇವರು ಹರಿಸಿ ನಮಗೆ ಅಷ್ಟು ದುಬಾರಿ ಮೊತ್ತದ ಬೈಕ್ ಕೊಡಿಸಿದರೂ... ಆತ ಹೇಳ್ತಾನೆ "ಇದು ನನ್ನ ಮಗನ ಬೈಕು" ಅದೆ ಅಲ್ವಾ ತ್ಯಾಗ. ಅದೆ ಕಣ್ರಿ ಅಪ್ಪ ಅಂದರೆ.....



ಅಪ್ಪ ಇದ್ದಾಗ ಮನೆಗೆ ಬಂದರೆ ನಮಗೆ ವಿಪರಿತಿ ಕಿರಿಕಿರಿ ಅನಿಸುತ್ತೆ .  ಧೈರ್ಯ ಇದ್ದರೆ, ಮುಂಗೋಪಿಯಾಗಿದ್ದರೆ ಅಪ್ಪನ ಎದುರಿಗೆ ಕಪಾಳಕ್ಕೆ ಹೊಡೆದಂಗೆ ಹೇಳಿ ಬಿಡ್ತಿವಿ, ಇಲ್ಲದೆ ಇದ್ದವರು ಮನಸ್ಸಿನಲ್ಲೆ ಗೊಣಗಿಕೊಳ್ತಾ ಬೇರೆ ಕಡೆ ಸ್ಥಳ ಬದಲಾಯಿಸುತ್ತೆವೆ. ಆದರೆ ಅಪ್ಪ ಅಲ್ಲೆ ಒಟ ಒಟ ಅಂತಾ ಮಾತಾಡ್ತಿರತಾನೆ. ಒಮ್ಮೊಮ್ಮೆ ಅಮ್ಮನ ಮೇಲೆ ಮಗನ ಸಿಟ್ಟನ್ನು ವರ್ಗಾಯಿಸುತ್ತಾನೆ. "ನಿನ್ನ ಸಲುಗೆಯಿಂದಾನೆ ಮಗ ಕೆಟ್ಟಿದ್ದು ಮೊದಲು ನಿನ್ನ ಬಡಿಬೇಕು." ಆದರೆ ಎಂದಾದರೂ ಒಬ್ಬರೆ ಕುಂತು ಯೋಚನೆ ಮಾಡಿದ್ದಿವಾ.. ಅಪ್ಪಾ ಯಾಕೆ ಹಾಗೆ ಬೈತಾರೆ, ಯಾಕೆ ಹಾಗೆ ಗೊಣಗುತ್ತಾರೆ. ನೋ... ಆ ಅವಕಾಶವೆ ನಮಗೆ ಸಿಗಲಿಲ್ಲ ಯಾಕಂದರೆ ನಾವು ಅದಾಗಲೆ "ಅಪ್ಪ ನನ್ನ ಎಲ್ಲಾ ಕೆಲಸಕ್ಕೆ ವಿರೊಧಿ." ಅಂತಾ ಮನದಲ್ಲಿ ಅಚ್ಚೊತ್ತಿರುತ್ತೆವೆ. ಹಾಗಾಗಿ ಅಪ್ಪನ ಒಳ್ಳೆಯತನ ನಮಗೆ ಕೆಟ್ಟತನ ಕಾಣುತ್ತೆ.

ಇದರಲ್ಲಿ ಒಂದು ಗಮನಿಸಬೇಕಾದ ಅಂಶ ಅಂದರೆ ಅಪ್ಪನಿಗೆ ಯಾವಾಗಲೂ ಮಗಳ ಮೇಲೆ ಅಪಾರ ಪ್ರೀತಿ ಅವಳೆಂದರೆ ಆತನಿಗೆ ತನ್ನ ತಾಯಿಯ ನೆನಪು. ಯಾವುದೊ ಮರೆತ್ಹೊದ ಅಜ್ಜಿಯ ಮಾತು. ಅವಳು ಹೇಳಿದ ಮಾತೆ ವೇದ ವಾಕ್ಯ. ಹಾಗಂತ ಹುಡುಗರಿಗೆ ಪ್ರೀತಿಸುವ, ಕನಿಕರ ತೋರುವ, ಅವರನ್ನ ಮುದ್ದಿಸುವ ಪ್ರಾಣಿ ಮನೆಯಲ್ಲಿ ಇಲ್ವೆನು ? ನೋ..... ಜಗತ್ತಿನ ಯಾವ ಹುಡುಗನು ಹಾಗೆ ಹೇಳಲು ಬಯಸಲಾರ ಯಾಕಂದರೆ ಅವನಿಗಾಗಿ, ಅವನ ಪ್ರೀತಿಗಾಗಿ, ಅವನ ಹಟಗಳಿಗೆ, ಅವನಿಗೆ ಊಟ, ಬಟ್ಟೆ, ಅವನ ಎಲ್ಲಾ ಖರ್ಚುಗಳಿಗಾಗಿ ಅಪ್ಪನ ಕಿಸೆಯಲ್ಲಿನ ದುಡ್ಡನ್ನು ಸರಳವಾಗಿ ಎನೊ ಒಂದು ಉಪಾಯದಿಂದ ತಂದು ಒಪ್ಪಿಸುವ ಆ ಒಂದು ಜೀವವೆ "ಅಮ್ಮ". ಅದು ಮಗ ಕೆಡೂಕನಾಗಿದ್ದರು ಅವಳಿಗೆ ಆತ ಮಾಣಿಕ್ಯ. ಒಂದ ರೀತಿ ಹುಡುಗರು ಹಾಳಾಗುವದಕ್ಕೆ ಅಮ್ಮನ ಪ್ರೀತಿಯ ಮಡಿಲು ಕೂಡಾ ಕಾರಣನೆ. ಅದಕ್ಕೆ ಅಪ್ಪ ಹೊಸ್ತಿಲ ಬಳಿ, ಹಾಲಿನ ಸೋಪಾದ ಮೇಲೆ ಕುಳಿತು, ಮಗ ಎದುರಿಗೆ ಹಾದು ಹೊದಾಗಲೆಲ್ಲ ಗೊಣಗುತ್ತ ಅಮ್ಮನ್ನನ್ನು ಬೈತಿರ್ತಾನೆ.

ಅಮ್ಮ ಜೀವ ಕೊಟ್ಟವಳಾದರೆ, ಅಪ್ಪ ಬೆವರು ಸುರಿಸಿ ಬದುಕು ಕಟ್ಟಬಲ್ಲವನು. ಆತನ ಕನಸುಗಳೆಲ್ಲ ಮಗನ ಭವಿಷ್ಯ. ಆತನ ಗುರಿಯೆ ಮಗ. ಇಂಥವನೊಬ್ಬ ಅಪ್ಪ ಪಡೆದುಕೊಂಡವರೆ ಧನ್ಯರು. ಅಂತಹ ಅಪ್ಪ ಇಲ್ಲದಿರುವವರು ದುರ್ದೈವಿಗಳು ಆದರೆ ಅಮ್ಮ. ಅಮ್ಮ ಅಪ್ಪನ ಸ್ಥಾನದಲ್ಲಿ ನಿಂತು ಮಗನ ಬೆಳೆಸಬಲ್ಲಳು ಆದರೆ ಅಪ್ಪ ಅಮ್ಮನ ಸ್ಥಾನವನ್ನು ತುಂಬಲಾರ.... ಕಟ್ಟಕಡೆಯದಾಗಿ ಅಪ್ಪನ ದ್ವೇಷಿಸುವದನ್ನು ಮರೆತು ಬಿಡೋಣ, ಯಾಕೆಂದರೆ ದ್ವೇಷಿಸುತ್ತ ದ್ವೇಷಿಸುತ್ತ ನಾವೂ ಒಂದಿನಾ ಅಪ್ಪಂದಿರಾಗ್ತಿವಿ‌. ನಮಗೂ ಮಕ್ಕಳಾಗ್ತಾವೆ ಅವು ನಮ್ಮನ್ನ " ಅಪ್ಪ ಯು ಆರ್ ರಾಂಗ್ " ಅಂದು ಬಿಡುತ್ತೆ. ಸೋ ಮೈ ಡಿಯರ್ಸ ಈಗಲೇ ತಿದ್ದುಕೊಳ್ಳೊಣ.....

(ನಿಮಗೆಲ್ಲಾ ಅಪ್ಪ ಅಂದರೆ ಒಂದು ಸ್ಪಷ್ಟ ಚಿತ್ರಣ. ಆದರೆ ನನಗೆ ಅಪ್ಪ ಅಂದರೆ ನೆನಪು. ನನಗೆ ಅಪ್ಪ ಅಂದರೆ ಕುಡುಕ. ನನಗೆ ಅಪ್ಪ ಅಂದರೆ ಕ್ರೌರ್ಯಿ. ನನಗೆ ಅಪ್ಪ ಅಂದರೆ ಅಮಾಯಕಳಾದ, ಸಹೃದಯಿಯಾದ ನನ್ನ ಅಮ್ಮನಿಗೆ ಹಿಂಸಿಸುವವನು.-ಲೇಖಕನ ಮಾತು)

                                                   ರಾಜು ಪಾಟೀಲ(ಸಿಂದಗಿ)
9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು