"ಕುಡಿಯುವ ನೀರು ಗಂಗೆ ಹೆಣ್ಣು, ದುಡಿದಾಗ ಸಿಗುವ ಹಣ ಲಕ್ಷ್ಮಿ ಹೆಣ್ಣು, ಹಡೆದ ತಾಯಿ ಹೆಣ್ಣು, ಸಂಸ್ಕಾರ, ವಿದ್ಯೆ ಅಂತಲೇ ಕರೆಯುವ ಸರಸ್ವತಿ ಹೆಣ್ಣು, ಹೊಟ್ಟೆ ಹಸಿದಾಗ ಮಾಡುವ ಊಟ ಅನ್ನಪೂರ್ಣೆ ಕೂಡಾ ಹೆಣ್ಣು, ಅಷ್ಟೆಯಲ್ಲ ಹಾಯಾಗಿ ಮಲಗುವ ಭೂಮಿ ಕೂಡಾ ಹೆಣ್ಣು. ಹೆಣ್ಣಿಂದಲೇ ಸೃಷ್ಟಿ, ಹೆಣ್ಣಿಲ್ಲದೆ ಏನೂ ಇಲ್ಲಾ" ಅಂತಾ ಕಾಲೇಜಿನ ಮಹಿಳಾ ದಿನಾಚರಣೆಯಲ್ಲಿ ಬಂದ ಅತಿಥಿ ಅದ್ಭುತವಾಗಿ ಭಾಷಣ ಮಾಡಿದರು. ನಾನದನ್ನು ಕೇಳಿ ಪುಳಕಿತಳಾದೆ. ಅಲ್ಲಿಯವರೆಗೂ ನಾನು ಹೆಣ್ಣಾಗಿ ಹುಟ್ಟಿದ್ದು ಹೀನ ಎಂದು ತಿಳಿದ ನನಗೆ ಅವತ್ತು ಹೆಣ್ಣೆಂದರೆ ಶಕ್ತಿ ಅಂತ ತಿಳಿಯಿತು. ಆದರೆ.......!!!!
ಭಾಷಣಗಳಿಂದ ಬದಲಾವಣೆಯಾಗುವಂತಿದ್ದರೆ ಇಲ್ಲಿಯವರೆಗೂ ಜನ್ಮಿಸಿದ ಮಹಾತ್ಮರು ಎಷ್ಟೆಲ್ಲಾ ಒಳ್ಳೊಳ್ಳೆಯ ಭಾಷಣಗಳನ್ನು, ಉಪನ್ಯಾಸಗಳನ್ನು, ಗ್ರಂಥಗಳನ್ನು ಬರೆದು ಇತಿಹಾಸವಾಗಿದ್ದಾರೆ. ಆದರೆ ನಾವು ನಮ್ಮತನವನ್ನು ಬಿಟ್ಟುಕೊಡದೆ ಅವರಿಗೊಂದು ಜಯಂತಿ, ಹಬ್ಬ ಮಾಡಿ ಕೈ ತೊಳೆದುಕೊಳ್ಳುತ್ತಿದ್ದೇವೆ. ಕಾಡುವ ದೇವರಿಗೆ ನೈವೇದ್ಯ ನೀಡಿ ಕಾಡಬೇಡ ಅನ್ನುವಹಾಗೆ. ಅವರು ಹೇಳಿದ ರೀತಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಲಾಗಲಿಲ್ಲ. ಹೆಣ್ಣನ್ನು, ಜಾತಿಯನ್ನು, ಮತಗಳನ್ನು, ಮೇಲು-ಕೀಳೆಂಬ ಭೂತವನ್ನು ಇನ್ನಷ್ಟು ಮೊದಲಿಗಿಂತಲೂ ಹೆಚ್ಚೇ ಮಾಡಿದ್ದೇವೆ ಅವರ ಹೆಸರು ಉಪಯೋಗಿಸಿಕೊಂಡು. ಮಹಾತ್ಮರನ್ನ ವಿಧ ವಿಧವಾಗಿ ಬಣ್ಣಿಸಿ ಅವರನ್ನ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಮಾಡಿದೆವು. ಆ ಭಾಷಣ ಕೇಳಿದ ಮರು ದಿನವೆ ನನಗೂ ಮನನವಾಯ್ತು ಭಾಷಣ ಕೇಳುವದಕ್ಕಷ್ಟೆ ಚಂದವೆಂದೂ.
ಹುಟ್ಟಿದಾಗಲೆ ಅಪ್ಪಾ ಥೂ.. ಗಂಡು ಹಡೆಯಬಾರದೆ ಎಂದು ಅಮ್ಮನನ್ನು ಗದರಿಸಿ ಬೈದಿದ್ದ ಅನಿಷ್ಟದಂತೆ ನನ್ನ ನೋಡಿ. ಆತ ಗಂಡಸು ಬೈಯಲಿ ಆದರೆ ನಮ್ಮಜ್ಜಿ ಕೂಡಾ ತನ್ನ ಸೊಸೆಗೆ ನನಗೆ ದರಿದ್ರದವರೆಂದು ಊರ ತುಂಬಾ ಸಾರುವುದೇ. ಆಕೆಯು ಕೂಡಾ ಒಂದು ಹೆಣ್ಣಾಗಿ. ಅದೆಲ್ಲದರ ಮಧ್ಯೆ ತಾಯಿ ಕೂಡಾ ಅವರ ಮಾತಿಂದ, ಊರವರಿಂದ ಬೇಸತ್ತು ಒಂದು ದೃಷ್ಟಿಯಿಂದ "ನೀನು ಗಂಡಾಗಿ ಹುಟ್ಟಬಾರದೇ ನನ್ನ ಹೀಯಾಳಿಸೋದಕ್ಕೆ ಹೆಣ್ಣಾಗಿ ಹುಟ್ಟಬೇಕಾ" ಅಂತ. ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕೂಡಾ ತೀರಾ ಕಡಿಮೆ. ಹುಡಗರಂತು ತಾವು ಗಂಡಾಗಿ ಹುಟ್ಟಿದ್ದೇ ಶ್ರೇಷ್ಠ ಎಂಬಂತೆ ಪೀಡಿಸೋದು, ಕಾಡಿಸೋದು ನಡೆಯುತ್ತಿತ್ತು.
ಇದೆಲ್ಲಾ ಕಷ್ಟಗಳ ಮಧ್ಯೆ ಬೀದಿ ಕಾಮಣ್ಣರ ಕಾಟ. ಮನೆಗೆ ಬಂದರೆ ಎಲ್ಲರ ಕೆಲಸ ಬೈಗುಳಗಳು ನನಗೆ, ಪ್ರೀತಿ ಮಾತ್ರ ತಮ್ಮನಿಗೆ. ನನಗೆ ಅರಿಯದೆ ನಾನೇನು ತಪ್ಪು ಮಾಡಿದೆನೆಂಬ ಅರಿವೆ ಇಲ್ಲದಂತೆ, ಪ್ರಶ್ನಿಸುವ ಅಧಿಕಾರವೂ ಇಲ್ಲದಂತೆ, ಸುಮ್ಮನೆ ಅದೊಂದು ದಿನನಿತ್ಯದ ಕಾರ್ಯದಂತೆ ಸಹಿಸಿಕೊಂಡೆ. ಒಳ್ಳೆಯ ಹುಡುಗನೆಂದು ತಾವೆ ನಿರ್ಧರಿಸಿ ಒಂದು ಮಾತು ಕೇಳದೆ ನನ್ನ ಕುತ್ತಿಗೆಯನ್ನು ಆತನ ಕೈಗೆ ಕೊಟ್ಟು ತಾಳಿ ಕಟ್ಟಿಸಿದರು ನನ್ನಪ್ಪ. ನಾನು ಆತನನ್ನು ಕಣ್ಣೆತ್ತಿ ಸಂಪೂರ್ಣವಾಗಿ ನೋಡಿದ್ದು ಆತನ ಮನೆಯಲ್ಲಿ. ಈ ದರಿದ್ರ ಬೈಗುಳದ ಮನೆಯನ್ನು ಬಿಟ್ಟು ಹೊಸ ಮನೆಯಲ್ಲಿ ಸಿಕ್ಕ ಸ್ವಾಗತವನ್ನು ನೋಡಿ ಇಷ್ಟು ದಿನ ಪಟ್ಟ ತಾಪತ್ರೆಯು ಮರೆಯಾಯಿತು ಎಂದು ಖುಷಿಪಟ್ಟೆ. ನನ್ನ ಹಣೆ ಬರಹಕ್ಕೆ ನಾನೇ ತೆಲೆಚಚ್ಚಿಕೊಳ್ಳಬೇಕು. ಆ ಮನೆಯಲ್ಲಿ ಆ ಸ್ವಾಗತ ಸಿಕ್ಕಿದ್ದು ನನ್ನ ಪಕ್ಕದಲ್ಲಿ ನಿಂತ ಆ ಮಧುಮಗನಿಗೆ ಹೊರೆತು ನನಗಲ್ಲಾ. ನಾನೇನಿದ್ದರು ಹಗಲು ಮನೆಗೆಲಸ ರಾತ್ರಿ ಗಂಡನ ಕೆಲಸ ನಿರ್ವಹಿಸಲು ಸಂಬಳವಿಲ್ಲದ ಆಳು ಅಂತಾ. ಅಲ್ಲಿಯೂ ಕೂಡಾ ನನ್ನ ಮಾತನಾಡಿಸುವರು ಯಾರು ಇಲ್ಲ. ನನಗೂ ಒಂದು ಆತ್ಮವಿದೆ ಅದು ಕೂಡಾ ಮಾತನಾಡುತ್ತೆ ಎನ್ನುವುದನ್ನು ಯಾರು ಕಾಣಲಿಲ್ಲಾ. ಅವರಿಗೆ ಹಿಡಿಸಿದ ಅಡಿಗೆಯೆ ನಾನು ತಿನ್ನಬೇಕು, ಅವರು ತಂದು ಕೊಟ್ಟ ಬಟ್ಟೆಯೆ ಹಾಕಿಕೊಳ್ಳಬೇಕು, ಅವರು ಮಲಗು ಎಂದರೆ ಮಲಗಬೇಕು, ಅವರು ಒದ್ದರೆ ಒದೆ ತಿನ್ನಬೇಕು.
ನನಗೂ ಒಮ್ಮೊಮ್ಮೆ ಅನಿಸೋದು ನಾನು ಗಂಡಾಗಿ ಹುಟ್ಟಿದ್ದರೆ ಎಷ್ಟೇಲ್ಲಾ ಅಧಿಕಾರ ಪಡೆಯಬಹುದಿತ್ತು. ನನಗೆ ಇಷ್ಟದ ಅಡಿಗೆ, ಬಟ್ಟೆ ನಾನು ಬೇಕೆಂಬುದನ್ನು ಮಾಡಬಹುದಿತ್ತು. ನಾನು ಕೂಡಾ ಒಂದು ಹೆಣ್ಣನ್ನು ಆಳಬಹುದಿತ್ತು ಅಂತಾ. ಆದರೆ ಎಲ್ಲರೂ ನನ್ನ ಇಷ್ಟೊಂದು ದ್ವೆಷಿಸೋಕೆ ನಾನು ಮಾಡಿರೊ ತಪ್ಪಾದರು ಏನೂ? ಯಾರನ್ನು ದ್ವೆಷಿಸಲಿ ಕಾಣದ ದೇವರಿಗಾ? ತಮ್ಮ ಕಸುವು ತಿರಲು ಸ್ವಚ್ಛಂದದ ಆಟವಾಡಿ ನನ್ನ ಹಡೆದ ತಂದೆ-ತಾಯಿಗಾ? ಅಥವಾ ಸಮಾಜಕ್ಕಾ? ಯಾರನ್ನ ದ್ವೆಷಿಸಲಿ ?
ಅಕಸ್ಮಾತ್ ಈ ಭೂಮಿ ಮೇಲೆ ಹೆಣ್ಣೆ ಇರದೆ ಇದ್ದಿದ್ದರೆ ಸೃಷ್ಟಿ ಆಗುತ್ತಿತ್ತಾ ? ಮಾನವೀಯತೆ ಎಂಬ ಮಾತು ಇರುತ್ತಿತ್ತಾ ? ಗಂಡಿನ ಫಜೀತಿ ಅಂತೂ ಕೇಳಲೆಬಾರದು.. ಹ್ಹ ಹ್ಹ ಹ್ಹ.(ತನಗೆ ತಾನೆ ನಕ್ಕಳು)
ಆದರೆ ಸತ್ತಮೇಲೆ ಬುದ್ಧಿ ಬಂತು ಎಂಬಂತೆ ನನಗೀಗ ಬುದ್ಧಿ ಬಂದಿದೆ. ಹೆಣ್ಣು ಗಂಡಿಗಿಂತ ಶ್ರೇಷ್ಠ, ಒಂದು ಮಗುವನ್ನು ಹಡೆಯುವ ಅರ್ಹತೆ ಇರುವದು ಹೆಣ್ಣಿಗೆ ಹೊರೆತು ಗಂಡಿಗಿಲ್ಲಾ. ಆ ನೋವು ಸಹಿಸುವ ಶಕ್ತಿಯಾಗಲಿ, ತಾಳ್ಮೆಯಾಗಲಿ, ಆತನಿಗಿರಲ್ಲ. ತಿಂಗಳ ತಿಂಗಳ ನೋವು, ಮಕ್ಕಳ ಸಾಕುವ, ಕುಟುಂಬವನ್ನು ಸಲುಹುವ ಶಕ್ತಿ ಸ್ಥೈರ್ಯ ಇರೋದು ಮಾತ್ರ ಹೆಣ್ಣಿಗೆ. ತಂದೆ ಇಲ್ಲದ ಮಗು ಬದುಕಬಹುದು ಆದರೆ ತಾಯಿ ಇಲ್ಲದ ಮಗು ಬದುಕೋದು ಬಹಳ ಕಷ್ಟ. ಹಾಗಾಗಿ ಹೆಣ್ಣೇ ಶ್ರೇಷ್ಠ ಎಂಬುದು ಈಗ ಅರ್ಥವಾಗಿದೆ. ಆದರೆ ಏನು ಮಾಡೋದು ನಾನು ದುಡುಕಿ ನಿರ್ಧಾರ ತೆಗೆದುಗೊಂಡ ಕತ್ತಲೆಯಲ್ಲಿ ತಿರುಗಾಡೊ ಭೂತವಾದೆ.
ಅಷ್ಟರಲ್ಲಿ ಯಾರೊ ದೂರದಿಂದ ಬಹಿರ್ದೆಸೆಗೆ ತಂಬಿಗೆ ಹಿಡಿದು ಬರುತ್ತಿರುವುದು ಗೋಚರಿಸಿತು. ಹೋ.. ನನ್ನ ಸಮಯ ಮುಗಿದಿದೆ ನಾನು ಇವತ್ತು ನನ್ನದೆ ಆಲೋಚನೆಯಲ್ಲಿ ಈ ರಾತ್ರಿ ಕಳೆದೆ. ಈಗೆನಿದ್ದರು ನಿಜವಾದ ರಕ್ಕಸರು ಆಳೊ ಸಮಯ. ಮತ್ತೆ ನಾಳೆ ಮಧ್ಯರಾತ್ರಿ ಇದೆ ಭಾವಿಯ ಕಟ್ಟೆಯ ಮೇಲೆ ಕುರೋಣ. ಇದೆ ಭಾವಿಯ ಕಟ್ಟೆಯ ಮೇಲಿಂದ ಅಲ್ವಾ ನಾನು ಹಾರಿ ಸತ್ತಿದ್ದು. ನಡೆ ನಡೆ ಸಮಯವಾಯ್ತು ಮತ್ತೆ ಅದೆ ರೀತಿ ಹಾರೋಣ ಆದರೆ ಈಗ ಭಾರವಾದ ದೇಹವಿಲ್ಲಾ ಹಗುರವಾದ ಆತ್ಮದೊಂದಿಗೆ.... ಹ್ಹ ಹ್ಹ ಹ್ಹ... 😊
ರಾಜು ಪಾಟೀಲ(ಸಿಂದಗಿ)
9611042409



3 ಕಾಮೆಂಟ್ಗಳು
Super
ಪ್ರತ್ಯುತ್ತರಅಳಿಸಿಅಣ್ಣ ಅದ್ಬುತ ...🙏
ಪ್ರತ್ಯುತ್ತರಅಳಿಸಿಒಂದು ಹೆಣ್ಣಿನ ಜೀವನದಲ್ಲಿ ಹುಟ್ಟಿನಿಂದ ಜೀವನದ ಪಯಣದ ವರೆಗೂ ಕಷ್ಟಗಳನ್ನು ಮೆಟ್ಟಿ ನಿಲ್ಲುವವಳಾಗಿದ್ದಾಳೆ, ಆದರೆ ಈ ಸಮಾಜ (ಹೆಣ್ಣನ್ನು ಗೌರವಿಸದೆ ಇರುವವರು) ಆಕೆಯನ್ನು ನೋಡುವ ರೀತಿ ಆಕೆಯನ್ನು ಮೌನಿಯಾಗಿಸಿ ಬಿಡುತ್ತದೆ. ಆಕೆ ಕಂಡ ಕನಸುಗಳನ್ನು ಜೀವನದಲ್ಲಾಗುವ ಏರುಪೇರುಗಳಿಂದ ಈಡೇರಿಸಿಕೊಳ್ಳದೆ ಹಿಸುಕಿ ಹಾಕುವಂತದ್ದಾಗಿದೆ. ಈ ಕಥೆಯಲ್ಲಿ ಕೊನೆಯ ಪ್ಯಾರ ಓದುವಾಗ ಆ ಹೆಣ್ಣಿನ ಆಕ್ರಂದನ ಸಾವಿನಲ್ಲಿ ಅಂತ್ಯ ಕಂಡಿದ್ದು ಮನಕಲುಕುವಂತದ್ದಾಗಿದೆ. ಕಣ್ಣಿಗೆ ಕಟ್ಟುವ ಹಾಗೆ ನೈಜ ಸ್ಥಿತಿಯನ್ನು ತಿಳಿಸಿದ್ದಿರಿ. ಅಭಿನಂದನೆಗಳು ತಮ್ಮ ಬರಹಕ್ಕೆ.
ಪ್ರತ್ಯುತ್ತರಅಳಿಸಿ