Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಚಪ್ಪರಗ್ಯಾಂಗ

ಚಪ್ಪರಗ್ಯಾಂಗ



ಶುಭ ಮೂಹೂರ್ತದ ದಿನಗಳು ಬಂದರೆ ಎಲ್ಲಾ ಮದುವೆ ಮಂಟಪಗಳು ಮದುವೆಯ ಬಿಗರುಗಳಿಂದ ಭರ್ತಿಯಾಗಿ  ನಾದ ಸ್ವರಗಳಿಂದ ಕೂಡಿರುತ್ತವೆ. ಅಷ್ಟ ಸಾಕು ನಮಗೆ. ಶಾಲೆಗಳಿಗಂತು ರಜೆ. ನಮ್ಮಮ್ಮ ದಿನಗೂಲಿ ಮಾಡೋಳು, ಬೆಳಗ್ಗೆನೆ ಎದ್ದ ತಯಾರಾಗಿ ಕೆಲಸಕ್ಕೆ ಹೋಗಬೇಕು ಹಾಗಾಗಿ ಇಂತಹ ಮದುವೆಗಳು ಬಂದರೆ ನಮ್ಮ ಎರಡೊತ್ತಿನ ಊಟದ ಚಿಂತೆಗೆ ನಿಟ್ಟುಸಿರುಬಿಡುತ್ತಿದ್ದಳು.

ನಮ್ಮ ಏರಿಯಾದ ಹುಡುಗರ ಒಂದು ಗುಂಪು ಅದಕ್ಕೆ ಸಮಾಜ ಇಟ್ಟ ಹೆಸರು‌ ಚಪ್ಪರ್ ಗಳು ಚಪ್ಪರ್ ಗ್ಯಾಂಗ ಅಂತಾ. ಬಹುಶಃ ಆ ರೀತಿ ಗುಡಿಸಲಲ್ಲಿ ವಾಸಿಸುವ, ಹಳೆಯ ಬಟ್ಟೆಗಳನ್ನು ಧರಿಸುವವರನ್ನ ಚಪ್ಪರ್ ಗಳೆಂದು ಕರೆಯುತ್ತಿರಬಹುದು ಅಂತಾ ಈಗ ಗೊತ್ತಾಗಿದೆ. ಯಾಕಂದರೆ ಅವರು ಸರ್ವಶ್ರೇಷ್ಠರು ಇವರು ಕನಿಷ್ಠರು ಅಂತಾ.

ನಮ್ಮ ಕುಟುಂಬದವರೆನೂ ಸ್ವಾಭಿಮಾನ ಇಲ್ಲದವರು ಅಂತೆನಿಲ್ಲಾ, ಆದರೆ ಅವರ ಪರಸ್ಥಿತಿ ಹಾಗಿತ್ತು. ಕುಡುಕ ಗಂಡನ ಜೊತೆಗೆ ಸಂಸಾರ ನೆಗೆಯನ್ನು ತಳ್ಳುವ ತಾಯಿ. ಒಬ್ಬನದು ಎರಡೊತ್ತು ಊಟಾ ಹೊರಗಡೆ ಹೋಗುತ್ತೆ ಅಂದರೆ ಅದು Extra Time ಮಾಡಿದಷ್ಟು ಅಥವಾ ಕೆಲಸಕ್ಕೆ ಬೋನಸ್ ಕೊಟ್ಟಾಗ ಸಿಗುತ್ತಲ್ಲಾ ಆ ಖುಷಿ ಅವರಿಗೆ‌. ಇದು ಆ ಹೆಸರು ಇಲ್ಲದ ಏರಿಯಾದ ಪ್ರತಿ ಗುಡಿಸಲುವಾಸಿಗಳ ಕಥೆ.

ನಮಗಂತು ಮದುವೆ ಇದೆ ಅಂದರೆ ಬೆಳಗ್ಗೆ ತಿಂಡಿಗೆ ಬಿಗರು ಬರೊಕ್ಕಿಂತ ಮುಂಚೆ ನಾವೆ ಹಾಜರ್. ಆದರೆ ಒಳಗಡೆ‌ ನುಗ್ಗೊದಿದೆಯಲ್ಲಾ ಅದು ಹರಸಾಹಸ. ಗೇಟಿನ ಬಳಿ ನಿಲ್ಲುವ ವ್ಯಕ್ತಿಯ ಕಣ್ಣು ತಪ್ಪಿಸಿ ಒಳಗಡೆ ಹೋಗಬೇಕು. ಅಕಸ್ಮಾತ್ ಆತನ ಕೈಗೆ ಸಿಕ್ಕರೆ ಬಾಸುಂಡೆ ಖಂಡಿತ. ಯಾಕೆಂದರೆ ನಾವೂ ಆತನ ಮಕ್ಕಳಲ್ಲಾ, ಯಾರೊ ಭಿಕಾರಿಗಳ ಮಕ್ಕಳು ಕೈಯಿಂದ ಹೊಡೆದರು ಅಷ್ಟೆ, ಕಟ್ಟಿಗೆಯಿಂದ ಹೊಡೆದರು ಅಷ್ಟೆ. ಯಾರು ಕೇಳೊಕೆ ಬರ್ತಿರಲಿಲ್ಲಾ ಮತ್ತು ನಮಗೂ ಅದು ರೂಢಿಗತವಾಗಿ ಬಂದಿರುವ ಪದ್ದತಿಯಿಂದ ದಿನಕ್ಕೆ‌ ಒಂದಸಲನಾದರೂ ಯಾರ ಕಡೆಯಿಂದ ಹೊಡಸ್ಗೊಳ್ಳೊದು ಮಾಮೂಲಿಯಾಗಿತ್ತು ಮತ್ತು ದೇಹಕೂಡಾ ಅದಕ್ಕೆ ಹೊಂದಿಕೊಂಡಿತ್ತು.

ಆತನ ಕಣ್ಣ್ ತಪ್ಪಿಸಿ ನೇರವಾಗಿ ಊಟ ಬಡಿಸುವ ಹಾಲಗೆ ನುಗ್ಗತಿದ್ವಿ. ಪ್ಲೇಟ್ ಹಿಡಿದುಕೊಂಡ ಊಟಕ್ಕೆ ನಿಂತಾಗ ಅಲ್ಲಿ ಊಟಾ ಬಡಿಸುವವರ ಮುಖ ತಾತ್ಸಾರದಿಂದ ನಮಗೆ ಬಡಿಸುತ್ತಿದ್ದರು. ಪಾಪ ಪ್ರತಿ‌ ಮದುವೆಯಲ್ಲಿ ಅವರು ಅಡಿಗೆ ಬಡಿಸುವ ಕೆಲಸ ಆದರೆ ಅಂತಹ ಮದುವೆಗಳಿಗೆ ನಾವೂ ಹಾಜರಾಗಿರ್ತಿದ್ವಿ ಹಾಗಾಗಿ ಬಡಿಸುವವರಿಗೆ ಕೂಡಾ ನಮ್ಮ ಜಾತಕ‌ ಗೊತ್ತಾಗಿ ಬಿಟ್ಟಿತ್ತು. ಆಹಾಃ ಎಷ್ಟೊಂದು ರುಚಿಯಾದ ಅಡಿಗೆ, ಸ್ವೀಟು, ರೊಟ್ಟಿ, ಚಪಾತಿ ತರಹೆ ತರಹೆ ಪಲ್ಯಾ, ಅನ್ನ ಸಾರು ಇದರ ಮಧ್ಯ ಆಗಾಗ ನಮಗ್ಯಾರಾದರೂ ಹೊಡೆಯೊಕೆ ಬರ್ತಾರ ಅಂತಾ ಒಂದ ಕಣ್ಣು ಕಾವಲು. ಊಟ ಮುಗಿದ ಮೇಲೆ ಬೇಕಾದಂತೆ ಬಡಿಯಲಿ ಆದರೆ ಊಟಕ್ಕಿಂತ ಮುಂಚೆ ಬಡಿಬಾರದು ಅನ್ನೊ ಒಳಾಸೆ ನಮ್ಮ ಚಪ್ಪರ್ ಗ್ಯಾಂಗದು.

ಎಷ್ಟು ಮದುವೆಗಳಲ್ಲಿ ಊಟಾ ಮಾಡಿದ್ದೇವೆ ಎಂಬುದು ನಮಗೆ ನೆನಪೆ ಇಲ್ಲಾ. ಮಧು ಮಕ್ಕಳನಂತು ನೋಡಿಯೆ ಇಲ್ಲಾ ಸಾಯಂಕಾಲದವರೆಗೆ ಅಲ್ಲೆ ಇದ್ವಿ ಅಂದರೆ ಅವರ ಮದುವೆಗೆ ಊಟಾ ಉಂಡ ಖುಷಿಗೆ ಹಳೆ ಬಟ್ಟೆಯೊಂದಿಗೆ ಅವರ ಕಾರಿನ ಮುಂದೆ ಕುಣಿಯೊದು ಕೂಡ ಇದೆ ಚಪ್ಪರ್ ಗ್ಯಾಂಗ್. ಇಂತಹ ಎಷ್ಟೊ ಮದುವೆಗಳಲ್ಲಿ ಈ ಚಪ್ಪರ್ ಗ್ಯಾಂಗ್ ಗೆ ಊಟಾ ಹಾಕಿದ ಪುಣ್ಯ ಅವರಿಗೆ ಸಿಗಲಿ ಮತ್ತು ಕೆಲವೂ ಕಡೆ ಒದೆಕೂಡಾ ಬಿದ್ದಿದೆ ಅವರಿಗೂ ಕೂಡಾ ಒಳ್ಳೆಯದಾಗಲಿ ಎಂದು ಆ ಚಪ್ಪರ್ ಗ್ಯಾಂಗ್ ಕಡೆಯಿಂದ ಬಯಸುತ್ತೆನೆ.

ಇಗಾ ಅಂತಹ ಘಟನೆಗಳು ಕಣ್ಣೆದುರಿಗೆ ಜರುಗಿದಾಗ ಕರಳು ಹಿಂಡುತ್ತೆ ಅಲ್ಲಿಂದ ಜಾಗ ಖಾಲಿಮಾಡಲು ತವಕಿಸುತ್ತೆ ಸಾಧ್ಯವಾದರೆ ನಮ್ಮದೆ ಕಾರ್ಯಕ್ರಮಗಳಿದ್ದರೆ ಅವರನ್ನು ಅಥಿತಿಯನ್ನಾಗಿ ಸ್ವಾಗತಿಸಿ ಊಟಾ ಬಡಿಸುತ್ತೇವೆ. ಯಾಕೆಂದರೆ ಇವನು ಕೂಡಾ ಚಪ್ಪರ್ ಗ್ಯಾಂಗ್ ಸದಸ್ಯ ಅಲ್ವಾ ?

ಧನ್ಯವಾದಗಳು.

ರಾಜು.ಪಾಟೀಲ(ಸಿಂದಗಿ)

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ಹಳೆ ಅನುಭವ ಹೊಸ ನೆನಪು ಮೆಲಕು ಹಾಕೋದಷ್ಟೇ ಕೆಲ್ಸಾ...

    ಪ್ರತ್ಯುತ್ತರಅಳಿಸಿ
  2. ಮನ ಕಲಕುವ ಸಾಲುಗಳು..ನೈಜತೆಯನ್ನು ಸ್ಪಷ್ಟವಾಗಿ ಹೇಳುತ್ತಿವೆ..👌ಅಣ್ಣ..🙏

    ಪ್ರತ್ಯುತ್ತರಅಳಿಸಿ
  3. ನಾವು ಕೂಡ ಅದೇ ಗ್ಯಾಂಗಿನವರು ಅಣ್ಣ ಇವಾಗ ಎಲ್ಲ ಇದೆ but ಆ ದಿನಗಳು ಇಲ್ಲ ಅಸ್ಟ್ .. 😊

    ಪ್ರತ್ಯುತ್ತರಅಳಿಸಿ
  4. ಮನಸ್ಸಿಗೆ ತಟ್ಟುವ ಹೃದಯದ ಮಾತುಗಳು. ಕಣ್ಣೀರ ಪಸೆಗೆ, ಹೃದಯದ ಆರ್ದ್ರತೆಗೆ ಕಾರಣವಾಗುವ ಬರಹ!!!

    ಪ್ರತ್ಯುತ್ತರಅಳಿಸಿ