Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಸಿಹಿ-ಕಹಿ ಪ್ರೇಮ-3


ಏನ ನಡಿಬೇಕಿತ್ತು ಅದನ್ನು ಹೊರೆತುಪಡಿಸಿ ಇಲ್ಲಿ ಬೇರೆಯದೆ ನಡಿತಾಯಿತ್ತು. 

(ಈ ಕಥೆಯನ್ನು ಹಿಂದಿನ ಭಾಗದಿಂದ ಓದಿದರೆ ಅರ್ಥ ಆಗುತ್ತೆ)

“ಹೌದು ಅಣ್ಣ ಇವನು ನನ್ನ ಮಗ” ನನ್ನಮ್ಮ ಸುಮಿತ್ರಾ ತನ್ನ ಅಣ್ಣನನ್ನು ಗುರುತಿಸಿ ಆನಂದ, ಆಶ್ಚರ್ಯದಿಂದ ತನ್ನ ಸೆರಗನ್ನು ಮುಖಕ್ಕೆ ಒತ್ತಿ ಕಣ್ಣು ಒರೆಸುತ್ತಾ ಬೆರಗುಗಣ್ಣಿನಿಂದ ತನ್ನ ಅಣ್ಣ ನಾರಾಯಣರಾವ್ ಕಡೆ ಗಹನವಾಗಿ ಗಮನಿಸುತ್ತಿದ್ದಳು.

    ನಾರಾಯಣರಾವ್ ಏನೂ ಮಾತನಾಡದೆ ತನ್ನ ಹಿರಿಯ ಮಗನನ್ನು ಮತ್ತು ತನ್ನ ಹೆಂಡತಿಯನ್ನು ಕರೆದುಕೊಂಡು ಹೋದ. ಕಾರಿನ ಬಳಿ ಹೋಗಿದ್ದ ನಾರಾಯಣರಾವ್ ಮತ್ತೆ ಮರಳಿ ಮೀನಾಕ್ಷಿಯ ಹತ್ತೀರ ಬಂದು ತನ್ನ ಜೇಬಿನಲ್ಲಿದ್ದ ಹತ್ತು ಸಾವಿರ ಮತ್ತು ತನ್ನ ಕೈ ಬೆರಳಿನಲ್ಲಿ, ಕೊರಳಲ್ಲಿ ಇದ್ದ ಬಂಗಾರವನ್ನು ಕೊಟ್ಟು “ಚೆನ್ನಾಗಿರು ತಾಯಿ” ಎಂದು ಹೇಳಿ ಹೊರಟು ಹೋದ.

ಇದು ಕನಸೊ-ನನಸೊ ಒಂದು ತಿಳಿಯದಾದೆ. ಅಮ್ಮ ನಾನು ಮೀನಾಕ್ಷಿ ಮನೆಗೆ ಬಂದೆವು. ನಾನು ಅಮ್ಮನ ಬಳಿ ಕೇಳಿದೆ “ಏನಮ್ಮ ಈ ಕಥೆ” ಪುಟ್ಟ ಮಕ್ಕಳು ಕಥೆ ಕೇಳುವಾಗ ಇರುವ ಕುತೂಹಲ ಮೀನಾಕ್ಷಿ ಮತ್ತು ನನ್ನಲ್ಲಿತ್ತು. ಆ ಸಮಯದಲ್ಲಿ ಇಡೀ ಜಗತ್ತೆ ವಿಸ್ಮಯದಂತೆ ಭಾಸವಾಗಿತ್ತು. ನನ್ನ ಮದುವೆಯ ವಿಷಯವೆ ಮರೆತು ಹೋಗಿತ್ತು. ತಾಯಿ ಯಾವದೋ ಹಳೆಯ ನೆನಪನ್ನು ಕೆದುಕುವ ದೀರ್ಘವಾದ ನಿಟ್ಟುಸಿರಿನೊಂದಿಗೆ ತನ್ನ ಜೀವನದ ಹಳೆಯ ಹಾಳೆಗಳನ್ನು ತಿರುವ ಹತ್ತಿದಳು.  

    “ಆತ ನನ್ನ ಸಹೋದರ ಸಂಬಂಧಿ. ಆತನ ತಂದೆ ತಾಯಿ ಆತ ಸಣ್ಣವನಿದ್ದಾಗ ತೀರಿಕೊಂಡರು. ನಮ್ಮಪ್ಪನೆ ಆತನನ್ನು ಸಾಕಿ ಸಲುಹಿ ದೊಡ್ಡವನನ್ನಾಗಿ ಮಾಡಿದ್ದು. ನನಗೆ ಮೂರು ಜನ ಅಣ್ಣಂದಿರು ಅವನೊಂದಿಗೆ ನಾಲ್ಕು ಅಣ್ಣಂದಿರಾದರು. ತುಂಬಾ ಮುಗ್ಧ, ಸಂಭಾವಿತ, ತೀಕ್ಷ್ಣ ಬುದ್ಧಿಯ ಹುಡುಗನಾಗಿದ್ದ. ಶಾಲೆಯಲ್ಲಿ ಆಟ-ಪಾಠದಲ್ಲಿ ಮುಂದು, ಮನೆಯಲ್ಲಿ ಕಸ, ನೀರು, ದನಗಳಿಗೆ ಮೇವು ಮಾಡುವದರಲ್ಲೂ ಮುಂದೆ. ನಮ್ಮಣ್ಣಂದಿರು ಬೆಳಗ್ಗೆ 9 ಗಂಟೆಗೆ ಎದ್ದರೆ ಈ ನಾರಾಯಣರಾವ ಬೆಳಗ್ಗೆ 5 ಗಂಟೆಗೆ ಎದ್ದು ದನದದೊಡ್ಡಿ ಸ್ವಚ್ಛ ಮಾಡುವದು, ಅವುಗಳಿಗೆ ಮೇವು, ನೀರು ಕುಡಿಸುವುದು ಮನೆಯಂಗಳದ ಕಸ ಗುಡಿಸುವುದು ಮನೆಗೆ ಬೇಕಾದ ನೀರನ್ನು ತಂದು ಹಾಕುವದು ಇವೆಲ್ಲಾ ಮಾಡುವುದು ಅವನಿಗೆ ಬಂದ ಕರ್ತವ್ಯವಾಗಿತ್ತು. ನಮ್ಮಮ್ಮ ಅವನನ್ನು ಕಂಡರೆ ಅಷ್ಟಕ್ಕಷ್ಟೆ. ಉಳಿದ ತಂಗಳನ್ನು ಆತನಿಗೆ ನೀಡುತ್ತಿದ್ದಳು. ಅದನ್ನೆ ತಿಂದು ಆತ ಶಾಲೆಗೆ ಹೋಗುತ್ತಿದ್ದ. ಉಳಿದ ಅಣ್ಣಂದಿರು ಶಾಲೆಯಲ್ಲಿ ಅಷ್ಟೊಂದು ಜಾಣರಾಗಿರಲಿಲ್ಲಾ ಅವರಿಗೆ ವಿಪರಿತ ಸಲುಗೆ ಬೆಳೆದಿತ್ತು. ಆದರೆ ಈ ನಾರಾಯಣರಾವನಿಗೆ ನಮ್ಮಪ್ಪ ಒಬ್ಬರೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಮನೆಯ ಮಂದಿಗೆಲ್ಲಾ ಇವನು ಪುಕಸಟ್ಟೆ ಊಟಕ್ಕೆ ದಂಡನಾಗಿರುವ ಅನಾಥನಾಗಿದ್ದ. 

    ಒಮ್ಮೆ ನಮ್ಮ ಹಿರಿಯಣ್ಣನ ಪೆನ್ನು ಕಳೆದುಹೊಗಿತ್ತು. ಅದೇ ತರಹದ ಪೆನ್ನು ಇವನಲ್ಲಿ ಸಿಕ್ಕಿತು, ಅದಕ್ಕೆ ನನ್ನ ಹಿರಿಯಣ್ಣ ರಮೇಶ ಈ ನಾರಾಯಣರಾವನ ಮೇಲೆ ಅಪವಾದ ಹೊರೆಸಿ ಅಮ್ಮ ಮಗ ಕೂಡಿ ಬಾರಕೊಲಿನಿಂದ ದನಕ್ಕೆ ಬಡಿದ ಹಾಗೆ ಹೊಡೆದಿದ್ದರು. ನಮ್ಮಪ್ಪನಿಗೆ ಮನೆಯ ಆಳು ಓಡಿ ಹೋಗಿ ಸುದ್ದಿ ಮುಟ್ಟಿಸಿದ “ಅಪ್ಪೊರಾ ಅಮ್ಮವರು ಮತ್ತು ನಿಮ್ಮ ಹಿರಿಮಗ ನಾರಾಯಣರನ್ನ ದನಕ್ಕೆ ಬಡಿದ ಹಾಗೆ ಹೊಡೆಯುತ್ತಿದ್ದಾರೆ. ದಯವಿಟ್ಟು ನೀವು ಹೋಗಿ ಬಿಡಿಸದಿದ್ದರೆ ಖಂಡಿತ ಅವನು ಇವತ್ತು ಶಿವನ ಪಾದ ಸೇರುತ್ತಾನೆ.” ಇಷ್ಟು ಕೇಳಿದ್ದೆ ತಡ ನಮ್ಮಪ್ಪ ಓಡೊಡಿ ಮನೆಗೆ ಬರುವುದರಲ್ಲಿ ನಾರಾಯಣರಾವ ಹಣ್ಣುಗಾಯಿ ನೀರುಗಾಯಿ ಆಗಿದ್ದ. ಬಾರಕೋಲಿನಿಂದ ಬಾರಿಸಿದ್ದಕ್ಕೆ ಅವನ ಬನಿಯನ್ ಎಲ್ಲಾ ರಕ್ತದ ಕಲೆಯಿಂದ ತುಂಬಿತ್ತು. ಬಾಯಿಯಲ್ಲಿ ರಕ್ತ ಜೊಲ್ಲಾಗಿ ಸೋರುತ್ತಿತ್ತು. ಅಪ್ಪ ಬಂದವರೆ ಅವರನ್ನು ತಡೆದರು, ನಾರಾಯಣನನ್ನು ಒಂದು ಗೊಡೆಗೆ ಬೆನ್ನು ಹಚ್ಚಿ ಕುರಿಸಿದರು. “ಏನಿದು ಮನುಷ್ಯರಾ ರಾಕ್ಷಸರಾ ನೀವು? ಏನ ತಪ್ಪು ಮಾಡಿದೆ ಆ ಕೂಸು ಹೀಗೆ ದನಕ್ಕ ಹೊಡೆದ ಹಾಗೆ ಹೊಡೆದಿರಲ್ಲ, ಬೆಳಗ್ಗೆಯಿಂದ ಸಾಯಂಕಾಲದವರೆಗೆ ಜೀತದ ಆಳಿನಂತೆ ಅವನ ಕಡೆಯಿಂದ ಸೇವೆ ಮಾಡಿಸಿಕೊಳ್ಳುತ್ತಿರಿ. ತಂಗುಳ ಅನ್ನವನ್ನು ಹಾಕುತ್ತಿರಿ. ಅಷ್ಟು ಸಾಲದು ಅಂತಾ ಅವನಿಗೆ ರಾಶಿ ರಾಶಿ ಬೈಗುಳಗಳ ಸುರಿಮಳೆ. ಇವತ್ತು ಈ ರೀತಿ ದನಕ್ಕೆ ಹೊಡೆದಾಗೆ ಹೊಡೆದಿದ್ದಿರಿ” ಅಂತಾ ತಮ್ಮಲ್ಲಿದ್ದ ಸಿಟ್ಟಿನಿಂದ ಹಿರಿಯ ಮಗನಿಗೆ ಒಂದು ಕಪಾಳಕ್ಕೆ ಬಾರಿಸಿದರು. ನಮ್ಮಮ್ಮ ಜೋರಾಗಿ “ ಆ ನಿಮ್ಮ ಕೂಸಿಗೆ ಕೇಳಿ ಆತ ಏನ ಘನಂದಾರಿ ಕೆಲಸ ಮಾಡಿದಾನೆ ಅಂತ. ನಿಮಗೆನು ಗೊತ್ತು, ಇವತ್ತು ರಮೇಶನ ಪೆನ್ನು ಕದ್ದಿದಾನೆ, ನಾಳೆ ಮನೆಯಲ್ಲಿರೊ ಬಂಗಾರ-ಒಡವೆ, ಹಣ ಕಳ್ಳತನ ಮಾಡಲ್ಲ ಅಂತಾ ಎನ್ ಗ್ಯಾರಂಟಿ. ಹೀಗೆ ಹದ್ದು ಬಸ್ತಿನಲ್ಲಿ ಇಟ್ಟರೆ ಅವನು ಮುಂದೆ ಯಾವುದೆ ತಪ್ಪು ಮಾಡಲ್ಲ. ಅವನ ಪರವಾಗಿ ವಾದಿಸೊಕೆ ಬರಬೇಡಿ. ನಿಮಗೆ ಆದರೆ ಬುದ್ದಿ ಹೇಳಿ ಇಲ್ಲಾ ಸುಮ್ಮನಿರಿ” ಎಂದು ಅಮ್ಮ ಅಪ್ಪನ ಮೇಲೆ ರೆಗಿದರು.

“ಏನು ನಮ್ಮ ನಾರಾಯಣ ಪೆನ್ನು ಕದ್ದನಾ” 

“ಹಾ ನಿಮ್ಮ ನಾರಾಯಣನೆ ಪೆನ್ನು ಕದ್ದಿದ್ದು” 

“ಯಕಶ್ಚಿತ ಒಂದು ಪೆನ್ನು ಕದ್ದಿದ್ದಕ್ಕೆ ಹೀಗಾ ಹೊಡೆಯೊದಾ, ಅಯ್ಯೋ ಮಗುವೆ” ಎಂದು ನಾರಾಯಣ ಕಡೆ ಹೋದರು.

“ಮಗು ನಾರಾಯಣ ನೀನೆಕಪ್ಪಾ ಆ ರಾಕ್ಷಸರ ಪೆನ್ನು ತಗೊಂಡೆ ನನಗೆ ಕೇಳಿದರೆ ರಾಶಿ ರಾಶಿ ತಂದು ಹಾಕುತಿದ್ದನಲ್ಲಾ” ಎಂದು ಮರುಕ ಪಟ್ಟು ಅವನ ಮುಖ ಬೆನ್ನು ಕಡೆ ಮೈದುವಾಗಿ ಸವರಲು ಯತ್ನಿಸಿದರು.

“ದೊಡ್ಡಪ್ಪ ನಾನು ಪೆನ್ನು ಕದ್ದಿಲ್ಲ, ನೀವೆ ಪೆನ್ನು ತಂದು ಕೊಟ್ಟಿದಿರಲ್ಲ ಆ ಪೆನ್ನು ರಮೇಶ ಅಣ್ಣನದಂತೆ ಅದಕ್ಕೆ ಆ ಪೆನ್ನು ನಾನು ಕದ್ದೆ ಎಂದು ದೊಡ್ಡಮ್ಮ ಮತ್ತು ರಮೇಶಣ್ಣ ಹೊಡಿತಿದಾರೆ ದೊಡ್ಡಪ್ಪ ನಾನು ಕದ್ದಿಲ್ಲ ದೊಡ್ಡಪ್ಪ” ಎಂದು ನೋವು ಮತ್ತು ಅವಮಾನದಿಂದ ನಾರಾಯಣ ದೊಡ್ಡಪ್ಪನ ತೊಡೆಯ ಮೇಲೆ ಮುಖವಿಟ್ಟು ಅಳುವಿಗೆ ಮೊರೆಯಾದ.

    ಅದೆಲ್ಲಿತ್ತೊ ಏನೊ ದುಖದಲ್ಲಿದ್ದ ಅಪ್ಪ ರಾಕ್ಷಸನಂತಾದ “ಅಯ್ಯೊ ರಾಕ್ಷಸರೆ ಹೊಟ್ಟೆಗೆ ಎನೊ ತಿಂತಿರಾ ಅಮಾಯಕನಿಗೆ ಸುಖಾ ಸುಮ್ಮನೆ ಹೊಡೆದಿರಲ್ಲೊ ಆ ಪೆನ್ನು ಆತ ಕದ್ದಿದಲ್ರೊ, ಪೇಟೆಯಿಂದ ನಾನೆ ರಮೇಶನಿಗೊಂದು ಮತ್ತು ನಾರಾಯಣನಿಗೊಂದು ಒಂದೆ ಥರದ ಎರಡು ಪೆನ್ನು ತಂದಿದ್ದೆ. ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ ಕೂಸನ್ನು ಹೀಗೆ ಹೊಡೆದಿದಿರಲ್ಲ ನೀವು ಮನುಷ್ಯರೆ ಅಲ್ಲ ಹೊಟ್ಟೆಗೆ ಅನ್ನವನಂತು ತಿನ್ನಲ್ಲ ನೀವು...” ಎಂದು ಅಪ್ಪ ರಮೇಶನನ್ನು ತೊಡೆಯ ಮೆಲಿಂದ ಮೆಲ್ಲಕ್ಕೆ ಎಬ್ಬಿಸಿ “ಸುಮಿತ್ರ ಸ್ವಲ್ಪ ನಿರು ತಗೊಂಡು ಬಾರಮ್ಮ” ಎಂದು ನನ್ನ ಕಡೆಯಿಂದ ನೀರು ತರಸಿ ನಾರಾಯಣಣ್ಣನಿಗೆ ಕುಡಿಸಿದ. ಅಮ್ಮ ಮತ್ತು ರಮೇಶ ಅಣ್ಣ ಪೆಚ್ಚಾಗಿ ನಿಂತರು. ಪಾಪ ಅಂತಹ ಬಹಳಷ್ಟು ನೋವು ಕಷ್ಟಗಳನ್ನು ನಮ್ಮ ಮನೆಯಲ್ಲಿ ನಾರಾಯಣ ಉಂಡಿದಾನೆ”. ಎಂದು ಅಮ್ಮ ತನ್ನ ಕಥೆಯನ್ನು ನಿಲ್ಲಿಸಿ “ಮಗು ಮೀನಾಕ್ಷಿ. ಸ್ವಲ್ಪ ಕುಡಿಯೊದಕ್ಕೆ ನೀರು ತರ್ತಿಯೆನಮ್ಮ “ಎಂದು ಕೇಳಿದಳು. 

    ಅಪ್ಪನ ಹಳೆಯ ಕಷ್ಟದ ದಿನಗಳನ್ನು ಕೇಳಿದ ಮೀನಾಕ್ಷಿಯ ಕಣ್ಣಲ್ಲಿ ನೀರು. ತನ್ನ ಅಪ್ಪ ಇಷ್ಟೆಲ್ಲ ಕಷ್ಟಪಟ್ಟು ಇವತ್ತು ಇಂತಹ ಬೃಹತ್ ಸಾಮ್ರಾಜ್ಯ ಕಟ್ಟಿದರಾ ! ಅವರಿಗೆ ಅನ್ನ ಹಾಕಿದ ನಮ್ಮತ್ತೆ ಇಷ್ಟೊಂದು ಬಡತನದಲ್ಲಿ ಹೇಗೆ ? ಯೋಚಿಸುತ್ತ ಅತ್ತೆಗಾಗಿ ನೀರು ತರಲು ಹೋದಳು.

ಇಂತಿ ನಿಮ್ಮ ಅನಿಸಿಕೆಗಾಗಿ ಕಾದಿರುವ

             ರಾಜು ಪಾಟೀಲ (ಸಿಂದಗಿ)

                        9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು