Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಸಿಹಿ-ಕಹಿ ಪ್ರೇಮ - 2

 


          10 ಗಂಟೆಯ ಆಗಿರೊದನ್ನ ಗಡಿಯಾರದ ಅಲಾರಾಮ ತಿಳಿಸಿತು. ಭಾರವಾದ ಮನಸ್ಸಿನಿಂದ ಶುಸ್ ಹಾಕಿಕೊಂಡು ಕೊರ್ಟ ಗೆ ಹೊರಡಲು ಅನುವಾದೆ. ಮನೆಗೆ ಕೀ ಹಾಕಿದೆ. ಆಕೆ ಹೋದ ಮೇಲೆ ಮನೆಯಲ್ಲಿ ಉಳಿದವನು ನಾನೊಬ್ಬನೆ. ಕೀ ಹಾಕುವವನು ನಾನೆ ತೆಗೆಯುವವನು ನಾನೆ. ಹಳ್ಳಿಯಲ್ಲಾದರೆ ಒಬ್ಬರಲ್ಲ ಒಬ್ಬರು ಮನೆ ನೋಡಿಕೊಳ್ಳಲು ಮನೆಯಲ್ಲೆ ಉಳಿತಿದ್ರು. ಅದು ಸಂಪ್ರದಾಯ ಕೂಡಾ, ಮನೆಯ ಲಕ್ಷಣವು ಕೂಡಾ.

         ಅಷ್ಟರಲ್ಲೆ ವಕೀಲರು ಪೋನ ಮಾಡಿದ್ದರು “ಎಲ್ಲಿದಿರಿ ರಾಮನಾಥ ಇವತ್ತು ಸರಿಯಾಗಿ 11 ಗಂಟೆಗೆ ನಿಮ್ಮ ಫೈಲ ಬರುತ್ತೆ ಬೇಗ ಬನ್ನಿ ಕೊರ್ಟನ ಮೂರನೇ ಗೇಟ್ ಹತ್ತೀರ ಕಾಯ್ತಿರತೇನೆ.” “ಹಾ ಬಂದೆ ಈಗ ಮನೆ ಬಿಟ್ಟಿದ್ದೆನೆ.” ಎಂದು ಹೇಳಿ ಮನೆಯ ಮೂರನೇ ರೋಡ್ ಕ್ರಾಸ್ ಮಾಡಿ ವಿಲ್ಸನ್ ಪಾರ್ಕಿನ ಸಮೀಪ ಬಂದೆ. ಮಾಮೂಲಿ ಟ್ರಾಫಿಕ. ಏನಿಲ್ಲ ಅಂದರು ಅರ್ಧ ಗಂಟೆ ವೇಟಿಂಗ್‌. ಆದರೆ ಇಂದು ಕಾರಿದೆ, ವಿಲ್ಸನ ಪಾರ್ಕ್ ಮರೆತಿದ್ದೆನೆ. ಆದರೆ ಆ ದಿನಗಳಲ್ಲಿ ಇದೆ ಪಾರ್ಕ ಅಲ್ಲವೆ ನಾನು ಮುಕ್ತ ಮನಸ್ಸಿನಿಂದ ಪ್ರೇಮಿಸಿದ್ದು, ಇದೇ ಪಾರ್ಕನಲ್ಲಿ ಅಲ್ಲವಾ ಸಾಯಂಕಾಲದ ನಡಿಗೆ ಆಕೆಯ ಜೊತೆಯಾಗಿ ನಡೆದಿದ್ದು.  ಕಾಲೇಜು ಮುಗಿದು ಇಬ್ಬರ ಪ್ರೇಮ ಪುರಾಣ ಪ್ರಾರಂಭವಾಗಿದ್ದು. ಮೀನಾಕ್ಷಿ ಗೆ ಮತ್ತು ನನಗೆ ಕ್ಯಾಂಪಸ್ ಸೆಲೆಕ್ಷನಲ್ಲಿ ಎಮ್ಎನ್ಸಿ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಕೈ ತುಂಬಾ ಸಂಬಳ ಆದರೆ ಇಬ್ಬರ ಕಂಪನಿಗಳು ಬೇರೆ ಬೇರೆ ಅನ್ನೊದ ಬಿಟ್ಟರೆ ಯಾವ ತೊಂದರೆಯೂ ಇಲ್ಲಾ. ಆಕೆ ಪಿಜಿಯಲ್ಲಿ ವಾಸವಾಗಿದ್ದಳು, ನಾನು ರೂಮ್ ಮಾಡಿಕೊಂಡಿದ್ದೆ. ಆಕೆಯ ಪಿಜಿಗೆ ಮತ್ತು ನನ್ನ ರೂಮಿಗೆ ಹತ್ತೀರ ಇರುವದು ಈ ವಿಲ್ಸನ ಪಾರ್ಕ. ಹಾಗಾಗಿ ದಿನವೂ ತಪ್ಪದೆ ಇಲ್ಲಿ ಸೇರುತಿದ್ವಿ. ಭವಿಷ್ಯದ ಕನಸುಗಳನ್ನು ಹಣೆಯುತಿದ್ವಿ, ಅಂತಾಕ್ಷರಿ ಹಾಡುತಿದ್ವಿ, ಕುಚೇಷ್ಟೆ ಮಾಡುತಿದ್ವಿ, ಮಾತು, ಹರಟೆ, ಒಗಟು, ಮುನಿಸು ಅದರ ಜೊತೆಗೆ ರಮಿಸು ಎಲ್ಲವೂ ಇತ್ತು. ಭಗವಂತ  ನಮ್ಮಿಬ್ಬರನ್ನ ಸೃಷ್ಟಿಸಿದ್ದೆ ಒಬ್ಬೊರಿಗೊಬ್ಬರಿಗಾಗಿ. ಸತತ ಮೂರು ವರ್ಷ ಯಾವುದೆ ತೊಂದರೆ ಇಲ್ಲದೆ ಪ್ರೇಮಿಗಳಾಗಿ ಕಳೆದೆವು. ಆದರೆ ಮನೆಯಲ್ಲಿ ನನಗೆ ಹೆಣ್ಣು ಆಕೆಗೆ ಗಂಡು ನೋಡುವ ಕುರಿತು ನಮ್ಮ ನಮ್ಮ ಕುಟುಂಬದವರು ಪ್ರಸ್ತಾವನೆಗಳನ್ನು ಮುಂದಿಡಲು ಶುರು ಮಾಡಿದರು. 

    ಇದಕ್ಕೆ ಪರಿಹಾರ ಗುಟ್ಟಾಗಿ ಮದುವೆ ಆಗೋದು. ಒಂದೊಳ್ಳೆಯ ದಿನವನ್ನು ಕೇಳಿ ಬಂದಾಯ್ತು. ಊರ ಹೊರಗಿನ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಮದುವೆ ಆಗುವುದೆಂದು ನಿರ್ಧಾರ ಕೂಡಾ ಆಯ್ತು. ಆತ್ಮೀಯ ಮಿತ್ರರಿಗೆ ಹೇಳಿದಾಯ್ತು. ಬೆಳಿಗ್ಗೆ ಹತ್ತು ಗಂಟೆಗೆ ದೇವಸ್ಥಾನದಲ್ಲಿ ಮದುವೆ, ಅದಾದನಂತರ ರಿಜಿಸ್ಟರ್ ಆಫೀಸಿಗೆ ಬಂದು ನೋಂದಣಿ ಮಾಡಿಸುವದು. ಎಲ್ಲವೂ ಸರಳ ಆದರೆ ಕುಟುಂಬದವರಿಗೆ ಗೊತ್ತಾಗಬಾರದು, ಯುದ್ದವೆ ಆಗುತ್ತೆ. ಎಲ್ಲವೂ ಸಿದ್ಧತೆ ಮಾಡಿ ರೂಮಿಗೆ ಬಂದು ಮಲಗಿದೆ. 

    ರಾತ್ರಿ ಹನ್ನೊಂದು ಗಂಟೆಗೆ ಮನೆಯಿಂದ ಫೋನು ಒಂದೆ ಸಮನೆ ಬಡೆದುಕೊಳ್ಳುತ್ತಿತ್ತು. “ಹಲ್ಲೋ....!!!” “ಏನೋ ರಾಮನಾಥ ಏನಿದು ನೀನು ಮಾಡುತ್ತಿರುವದು. ಪ್ರಾಣಕ್ಕಿಂತ ಜಾಸ್ತಿ ನನ್ನನ್ನು ನೋಡ್ಕೊತೆನೆ ಅಂದವನು, ನಾಳೆ ನನಗೆ ಹೇಳದೆ ಮದುವೆ ಆಗಲು ಹೊರಟಿದಿಯಲ್ಲ ನ್ಯಾಯ ಏನೋ ಇದು. ಈ ಅಮ್ಮ ಇಷ್ಟು ಬೇಗಾ ಬೇಡವಾದಳಾ.” ಧ್ವನಿಯಲ್ಲಿ ಮನವಿ ಇತ್ತು, ನಿರ್ದಯತೆ ಇತ್ತು. “ಅಮ್ಮ... ತಪ್ಪಾಯ್ತು ಅಮ್ಮ, ಕ್ಷಮಿಸಿಬಿಡಿ ನಿಮಗೆ ಹೇಳೊದಕ್ಕೆ ಧೈರ್ಯ ಆಗಲಿಲ್ಲ. ಮೀನಾಕ್ಷಿಯನ್ನು ತುಂಬಾ ಪ್ರೀತಿಸ್ತಿದ್ದೆನೆ. ಆಕೆಯನ್ನು ಬಿಡೊಕೆ ಆಗಲ್ಲ, ಇದೊಂದು ವಿಷಯದಲ್ಲಿ ಕ್ಷಮೆ ಇರಲಿ ಅಮ್ಮ” ಒಂದೇ ಉಸಿರಿನಲ್ಲಿ ನನ್ನ ಮನವಿ ಮತ್ತು ಅಸಹನೆಯನ್ನು ತಾಯಿ ಮಡಿಲಿಗೆ ಹಾಕಿದೆ. “ರಾಮನಾಥ ನಿನ್ನಿಷ್ಟವೆ ನನ್ನಿಷ್ಟ ಕಣೋ. ನೀ ಹೇಳಿದರೆ ನಾನು ವಿರೋಧ ಮಾಡ್ತಿರಲಿಲ್ಲಾ ಕಣೋ. ಮಗನ ಆಸೆಗೆ, ಸಂತೋಷಕ್ಕೆ ಅಡ್ಡಿ ಆಗೊ ತಾಯಿ ಅಲ್ಲ ಕಣೋ ನಾನು. ನಾನು ನಾಳೆ ಬರುತ್ತೇನೆ. ನಿನ್ನ ಮದುವೆಗೆ ಸಾಕ್ಷಿಯಾಗುತ್ತೆನೆ, ನನ್ನ ಸೊಸೆಯನ್ನು ಕಣ್ಣು ತುಂಬಾ ನೋಡಿ ಹರಸಿ ಬರ್ತೆನೆ. ತೆಲೆ ಕೆಡಿಸಿಕೊಬೇಡಾ ನಿನ್ನ ಖುಷಿನೆ, ನನ್ನ ಖುಷಿ.” ಅಮ್ಮ ಪೊನಿಟ್ಟರು. ಇಷ್ಟು ಬೇಗ ಅಮ್ಮ ಒಪ್ಪಿಕೊಂಡರಾ ? ತಾಯಿಗೆ ತನ್ನ ಕರಳು ನೋವಾಗದಿರಲಿ, ತನ್ನ ಮಗನ ಸಂತೋಷಕ್ಕಾಗಿ ಯಾವ ತಾಯಿಯಾದರೂ ಎಲ್ಲಾ ತ್ಯಾಗಕ್ಕೂ ಸಿದ್ದಳು. ಅಮ್ಮ ಇಷ್ಟು ಸರಳವಾ ? ನಾನೆ ಅಮ್ಮನನ್ನ ತಪ್ಪಾಗಿ ಅರ್ಥೈಸಿದನಾ? ಛೇ..!!! ನನ್ನ ಮೇಲೆನೆ ಹುಸಿ ಬೇಜಾರಾಯ್ತು... 

         ಎಲ್ಲವೂ ಸುಸೂತ್ರವಾಗಿ ನೆರವೇರಿತು ನನ್ನ ಪುಟ್ಟ ಕೊಣೆಯಲ್ಲೆ ಮೀನಾಕ್ಷಿಯನ್ನು ಮನೆ ಸೇರಿಸಿಕೊಂಡೆ. ಎಲ್ಲಾ ಸಂಪ್ರದಾಯ ಕಾರ್ಯಗಳನ್ನು ಅಮ್ಮನೆ ಮುಂದೆ ನಿಂತು ನೆರವೇರಿಸಿದಳು. ಇನ್ನು ಉಳಿದಿರೊದು ಮೀನಾಕ್ಷಿ ಮನೆಯವರ ತಾಪತ್ರೇಯ. “ರಾಮನಾಥ ಆಗಿದ್ದಾಗಲಿ ಆ ಮಗುವಿನ ತಂದೆ ತಾಯಿಗೂ ವಿಷಯ ಮುಟ್ಟಿಸು ನಾಳೆ ಬರಲಿ” ಅಮ್ಮನ ಮಾತು. ನಾನು ಕೂಡಾ ಅದಕ್ಕೆ ಸಮ್ಮತಿಸಿದೆ. ಮೀನಾಕ್ಷಿಯ ಕಣ್ಣುಗಳಲ್ಲಿ ನಾಳೆ ನಡೆಯಲಿರುವ ಯುದ್ದದ ಭಯ. ಅವತ್ತು ಮೂವರಿಗೂ ನಿದ್ದೆಯಿಲ್ಲಾ. ರಾತ್ರಿಯೆಲ್ಲ ನಾಳೆ ಏನಾಗುತ್ತೊ ಎಂಬ ಆತಂಕ. ಮೀನಾಕ್ಷಿ ಏನ್ ಮಾತನಾಡಬೇಕು, ನಾನೇನು ಮಾತನಾಡಬೇಕು, ಎಷ್ಟು ಮಾತನಾಡಬೇಕು, ಎಲ್ಲವೂ ಸಿದ್ದತೆಯಲ್ಲಿ ರಾತ್ರಿ ಮುಗಿದು ಹೋಯಿತು. ಬೆಳಗ್ಗೆ 7 ಗಂಟೆಗೆ ಆಕೆಯ ಮನೆಯವರಿಗೆ ನನ್ನ ಸ್ನೇಹಿತನ ಕಡೆಯಿಂದ ಸುದ್ದಿ ಮುಟ್ಟಿಸಿದೆ. 3 ಗಂಟೆಯ ಪ್ರಯಾಣ 10.30 ಕ್ಕೆ ನಾವು ಹೇಳಿದ ಸ್ಥಳಕ್ಕೆ ಅವರ ಆಗಮನ. ನಾನು, ಮಿನಾಕ್ಷಿ, ಅಮ್ಮ, ನನ್ನ ಸ್ನೇಹಿತರು ಎಲ್ಲರೂ ಇದೆ ಪಾರ್ಕನಲ್ಲಿ ನಿಂತಿದ್ವಿ. ಹಡಗಿನಂತಾ ಕಾರು ಪಾರ್ಕ್ ಮಾಡಿ ಮೀನಾಕ್ಷಿಯನ್ನು ನೋಡಿದ್ದೆ ತಡ ಕಾರಿನಿಂದ ಇಳಿದ ಅವರಪ್ಪ ಸಿಂಹದಂತೆ ಘರ್ಜಿಸುತ್ತಾ ಆಕೆಯ ಕಡೆಗೆ ಬಂದ. ಅವನ ಹಿಂದೆ ಅವರಮ್ಮ, ಅವಳ ಅಣ್ಣ. ಬಂದವರೆ ಸೀದಾ ಮೀನಾಕ್ಷಿಯ ಕಪಾಳಕ್ಕೆ ಎರಡು ಬಾರಿಸಿದರು. ತಡೆಯಲು ಹೋದ ನನ್ನ ಆಕೆಯ ಅಣ್ಣ ಎಳೆದು ಹೊಟ್ಟೆಗೆ ಸರಿಯಾಗಿ ಬಿಟ್ಟ. ನನ್ನ ಸ್ನೇಹಿತರು ಅವನನ್ನು ತಡೆದರು. ನನ್ನಮ್ಮ ನನ್ನ ಸಂಕಟ ನೋಡದೆ ಅವರ ಕೈ ಕಾಲು ಹಿಡಿಯಲು ಹೋದಳು “ನನ್ನ ಮಗನ ಬಿಟ್ಟು ಬಿಡಿ. ಹುಡುಗರು ಅವರ ಪಾಡಿಗೆ ಅವರು ಬದುಕ್ತಾರೆ, ದಯವಿಟ್ಟು ಬಿಟ್ಟು ಬಿಡಿ ಎಂದು ಗೊಗೊರೆಯುತ್ತಿದ್ದಳು.” ಇದನ್ನು ನೋಡಿದ ಮೀನಾಕ್ಷಿ ತಂದೆ ಯಾಕೋ ಎತ್ತಿದ ಕೈ ನಿಲ್ಲಿಸಿದ. ಇಲ್ಲಿಯವರೆಗೂ ಇದ್ದ ಕೋಪ-ತಾಪ ಒಂದೇ ಕ್ಷಣದಲ್ಲೆ ಆಶ್ಚರ್ಯಚಕಿತನಾಗಿ ಅಮ್ಮನ ಕಡೆ ದಿಟ್ಟಿಸುತ್ತ ನಿಂತ. ನನ್ನಮ್ಮ ನೆಲದ ಕಡೆ ತೆಲೆ ಮಾಡಿ ಒಂದೆ ಸಮ ಅಳುತ್ತಿದ್ದಳು.

         “ಸುಮಿತ್ರಾ” ಎಂಬ ನಾರಾಯಣ ರಾವ್ ಅವರ ಬಾಯಿಂದ ಬಂದ ಒಂದೇ ಒಂದು ಶಬ್ದ ಅಲ್ಲಿಯ ಪ್ರಸಂಗವೆ ಬದಲಾಯಿಸಿತು. ಎಲ್ಲರೂ ನಿಶಬ್ದ ನನ್ನ ತಾಯಿ ಮತ್ತು ಮೀನಾಕ್ಷಿ ಅಪ್ಪ ನಾರಾಯಣ ರಾವ್ ಇಬ್ಬರು ತಮ್ಮ ಹಳೆಯ ಪರಿಚಯವನ್ನು ನೆನೆಪಿಸಿಕೊಳ್ಳತೊಡಗಿದರು. “ನೀನೆನಮ್ಮ ಇಲ್ಲಿ? ಇವನು ನಿನ್ನ ಮಗನೆ”? ನಾರಾಯಣರಾವ್ ನನ್ನ ತಾಯಿ ಸುಮಿತ್ರೆಯ ಕುರಿತು ಮಾತನಾಡಿದರು. ನನಗೆ ಆಶ್ಚರ್ಯ!!! ನನಗೆ ಮಾತ್ರವಲ್ಲ ಮೀನಾಕ್ಷಿಯ ಕುಟುಂಬ, ಮೀನಾಕ್ಷಿ, ನನ್ನ ಸ್ನೇಹಿತರು ಎಲ್ಲರೂ ಮೌನ. ಏನು ನಡೆಯಬೇಕಿತ್ತು ಅದನ್ನು ಹೊರೆತುಪಡಿಸಿ ಇಲ್ಲಿ ಬೇರೆಯದೆ ನಡಿತಾಯಿತ್ತು. 

(ಲೇಖಕನ ಮಾತು :- ಕ್ಷಮೆ ಇರಲಿ ಕೂತುಹಲ ಉಳಿಸುವ ಉದ್ದೇಶದಿಂದ ಮತ್ತು ನಿಮಗೆ ಬೇಸರವಾಗದಿರಲಿ ಎಂಬ ಉದ್ದೇಶದಿಂದ ಕಥೆಯನ್ನು ಇಲ್ಲಿಗೆ ನಿಲ್ಲಿಸಿ ಮುಂದಿನ ಹಂತದಲ್ಲಿ ಮುಂದುವರೆಸುವೆ. ಅನಿಸಿಕೆ ತಿಳಿಸಲು ಮರೆಯದಿರಿ.....) 

                    ಇಂತೀ ನಿಮಗೆ ನನ್ನ ಬರಹ ಕಳಿಸಿ ಓದಲು ಹಿಂಸಿಸುವ
                        ರಾಜು ಪಾಟೀಲ (ಸಿಂದಗಿ)
                    9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು