Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಕನಸು ಕಮರಿತು


      ಒಂದು ವಾರದಿಂದ ಕೂಸಿಗೆ ತುಂಬಾ ಜ್ವರ. ಜಿಲ್ಲೆಯಲ್ಲಿರುವ ಎಲ್ಲಾ ದವಾಖಾನೆಗೂ ತೊರಿಸಿದೆ ಆದರೆ ಯಾರ ಹತ್ರಾನೂ ಈ ಜ್ವರದ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಹಿರಿಯರು ಹೇಳಿದಂಗ ನಾ ನಂಬಲ್ಲ  ಆದರೂ ಕೂಸ ಉಳಿಲಿ‌ ಅಂತಾ ದರ್ಗಾ, ಮಠಗಳಿಗೆ ಹೋಗಿ ಅಲ್ಲಿನ ಸ್ವಾಮಿಗೊಳ ಕಡೆಯಿಂದ ತಾಯಿತಾ ಎಲ್ಲಾ ಕಟ್ಟಿಸಿದ್ದು ಆಯಿತು. ಎನೂ ಕಡಿಮೆ ಆಗಲಿಲ್ಲಾ. 

ಬರ್ತಾ ಬರ್ತಾ ಕೂಸು ಬಾಳ ಬಡವಾಗಕತ್ತು. ಮ್ಯಾಲಗಣ್ಣ ಮಾಡಿ ಮಲಗೊದು ನೋಡಿದರ ಕಳ್ಳ್ ಚೂರ್ ಅಂತಿತ್ತು. ನಗ ನಗತ ABCD ಅಆಈಈ ಹೇಳಕೊತ, ಅವರವ್ವ ಹೊಡದರ ಅದನ್ನ ನಾ ಬರುತನ ಕಾದು ನನ್ನ ಮುಂದ ತೊದಲಕೊತ "ಮಮ್ಮಿ ನನಗ ಹೊಡದಾಳ ಪಪ್ಪ, ಆಕಿ ನನಗ ಅದು ಕೊಡಸಿಲ್ಲ, ಇದು ಕೊಡಸಿಲ್ಲಾ" ಅಂತಾ ಚಾಡಿ ಹೇಳೊದ. ನಾ ಇಕಿನ ಪರವಹಿಸಿ "ಏ ಯಾಕಲೇ ನನ್ನ ಮಹಾರಾಣಿಗಿ ಹೊಡಿತಿ, ಇರಬೇಕಂದಿ ಏನ ಹೋಗಬೆಕಂದಿ ಗಂಟು ಮೂಟೆ ಕಟಕೊಂಡ ತವರಮನಿಗೆ" ಅನ್ನೊದು. ಆಕೆ "ಪಪ್ಪಾ ಆಕಿಗ ಕಳಿಸು ನಾವಿಬ್ಬರೆ ಇರೋಣ ಮನ್ಯಾಗ" ಅಂತಾ ಆಕಿ ಇನ್ನಷ್ಟು ಜೋರ ಮಾಡೊದು. ಚಲೊ ಅದಿರಿ "ತಂದಿ ಮಗಳು, ನಾ ಅದಿನಂತ ನಿಮಗ ತಾಳ್ಕೊಂಡಿನಿ ನನ್ನ ಬದಲ ಯಾರರೆ ಇದ್ದಿದ್ದರ, ನೀವು ಕಳಿಸೊಕಿಂತ ಮೊದಲ ಆಕಿ ತವರ ಮನಿ ಸೆರತಿದ್ದಳು" ಅಂತ ಅವರವ್ವ ಹೇಳೊದ. ಆಮೇಲೆ ಎಲ್ಲರೂ ಕುಂತು ಊಟಾ ಮಾಡಿ ಮಲಗ್ತಿದ್ವಿ.

ನನ್ನ ಮಗಳ ಹೆಸರ ಅರ್ಚನಾ. ಅದೆನಾಯ್ತೊ ಏನೊ ಕೆಲಸ ಮುಗಸ್ಕೊಂಡ ಮನಿಗ ಬರೊದರಾಗ ಮಲಗಿದ್ದಳು. ಯಾಕೆ ಸಾವಿತ್ರಿ ಕೂಸ ಯಾಕ ಇವತ್ತ ಇಷ್ಟ ಜಲ್ದಿ ಮಲಗ್ಯಾದ ಅಂದೆ. "ಸ್ವಲ್ಪ ಮೈ ಬಿಸಿ ಆಗೈತ್ರಿ ಜ್ವರದ ಗುಳಗಿ ಕುಡಿಸಿ, ತೆಲಿಗ ತಣ್ಣಿರ ಪಟ್ಟಿ ಹಾಕಿ ಅನ್ನ ಹಾಲ ಉಣಿಸಿ ಮಲಗಿಸಿನ್ರಿ ನಾಳೆ ದವಾಖಾನಿಗ ಕರಕೊಂಡ ಹೊಗ್ರಿ. ಈಗ ಸ್ವಲ್ಪ ಇಳದಾದ ಜ್ವರ" ಅಂದಳು ಸಾವಿತ್ರಿ. ಇಷ್ಟ ಅಂದಿದ್ದೆ ತಡ ಕೂಸಿನ ಮಾರಿ‌ ನೋಡುತನ ನನಗ ಸಮಾಧಾನ ಆಗಲಿಲ್ಲಾ, ಹೋಗಿ ಹೊದಸಿದ ಹಾಸಿಗಿ ತಗದ  ಮಾರಿಮ್ಯಾಲೆ ಕೈ ಆಡಿಸಿದೆ. ಮೈ ಪೂರಾ ಬೆಂಕಿಯಂಗ ಸುಡಾಕತ್ತಿತ್ತು. "ಸಾವಿತ್ರಿ ಅಡಿಗೆ ಮಾಡಿ ಯಾರಿಗಿ ಇಡತಿ‌ ಕೂಸಿಗಿ ನೋಡೊದ ಬಿಟ್ಟ ಎನದ ನಿನ್ನ ಕೆಲಸ, ನೋಡ ಬಾ ಇಲ್ಲಿ ಮೈ ಹೆಂಗ ಸುಡಾಕತ್ತಾದ". "ಇಲ್ಲಾರಿ ಇನೆ ಈಗೆ ಮೈ ತಣ್ಣಗ ಆಗಾನ ಹಿಟ್ಟ ಸೊಸಿ‌ ನಿಮಗ ಎರಡ ಚಪಾತಿ ಮಾಡಬೇಕಂತ ಬಂದಿನಿ" ಅಂದಳು. "ಕೂಸಿನ ಹತ್ರ ಇರು ನಾ ಆಟೋ ತರತಿನಿ ಮೊದಲ ದವಾಖಾನಿಗಿ ಹೋಗೂಣ ಇಗೆ ಹಿಂಗ ಆದ ರಾತ್ರಿ ಹೆಚ್ಚಾಕಡಿಮೆ ಆದರ ಹೆಂಗ" ಅಂತ ನಾನು ಆಟೋ ತಂದೆ. ಸಾವಿತ್ರಿ ಕೂಸಿಗೆ ಹೊತಕೊಂಡ ಬಂದಳು. 

ನಾವು ಯಾವಾಗಲೂ ತೊರಿಸೊ ಪಾಟೀಲರ ದವಾಖಾನೆಗೆ ಹೊದ್ವಿ. ನಮ್ಮ ಡಾ.ಸಂಗನಗೌಡರ ಕೈಗುಣದಿಂದ ನಮ್ಮ ಮನ್ಯಾಗ ಯಾರೆ ಇರಲಿ ಅವರ ಕೈಮ್ಯಾಲ ಒಂದ ಇಂಜಕ್ಷನ ಮೂರು ಥರದ ಬಣ್ಣ ಬಣ್ಣದ ಗುಳಗಿ ಕೊಟ್ಟರ ಒಂದಿನದಾಗ ಎಲ್ಲಾ ಕಡಿಮ ಆಗ್ತದ. ಕೂಸಿಗೆ ಒಯ್ದ ಖಾಟಾದ ಮ್ಯಾಲೆ ಮಲಗಿಸಿ ಡಾ.ಸಂಗನಗೌಡರ ಕೂಸಿನ ಹೊಟ್ಟಿ ಮ್ಯಾಲೆಲ್ಲಾ ಕೈಯಾಡಿಸಿ ಹಾಳ್ಯಾಗ ಎನೆನೊ ಬರದ ಒಂದ ಇಂಜಕ್ಷನ ಕೂಸಿಗಿ ಚುಚ್ಚಿದರು. "ಹಾಳ್ಯಾಗ ಬರದಿದ್ದ ಎಲ್ಲಾ ಗುಳಗಿ ಔಷಧ ತಂದ ಡಾ. ತೊರಿಸಿದೆ. ಅವರು ಅದನ್ನ ಎಷ್ಟ ತಗೊಬೇಕ, ಯಾವಾಗ ಯಾವಾಗ ತಗೊಬೇಕಂತ ಹೇಳಿದರು" ಕಡಿಮಿ ಆಗಲಿಲ್ಲಾ ಅಂದರ ನಾಳೆ ಮುಂಜಾನೆ ಒಮ್ಮೆ ಕರಕೊಂಡ ಬಾ ಅಂದರು. "ಆಯ್ತ ರಿ ಸರ್" ಅಂದು ಅವರ ಚಾರ್ಜ ಕೊಟ್ಟು ವಾಪಸ ಆಟೋ ಹತ್ತಿ ಮನಿಗ ಬಂದ್ವಿ.


ನನಗ ಯಾಕೊ ಹಸಿವಿಲ್ಲ ನೀ ಉಣ್ಣ ಅಂತ ಸಾವಿತ್ರಿಗೆ ಹೇಳಿ. ಕೂಸಿನ ಮಲಗಿಸಿ ನಾನು ಅಲ್ಲೆ ಅದರ ಮಾರಿ ನೋಡಕೊಂತ ಕುಂತೆ. 

ನನ್ನ ಮನೆಯ ಮಹಾಲಕ್ಷ್ಮಿ ಈ ಕೂಸು. ಇದು ಹುಟ್ಟದಾಗಿನಿಂದ ಯಾವ ದರಿದ್ರಗಳು ಬಂದಿಲ್ಲಾ. ಕೈಯಾಗ ಒಂದಿಷ್ಟು ರೊಕ್ಕಾ ಗೊಳ್ಯಾ ಆಗಿದ್ವು. ಬಾಳ ಚಾಲಾಕಿ ಇದ್ಳು. ನನ್ನ ಅಂದರ ಬಾಳ ಹಚಕೊಂಡಿದ್ಳು. ಕೆಲಸಕ್ಕ ಹೋಗಾಗ ಮಾರಿ ಸಪ್ಪ ಮಾಡ್ತಿದ್ಳು, ಕೆಲಸದಿಂದ ಬಂದರ ಕುಣದಾಡ್ತಿದ್ಳು "ಪಪ್ಪಾ ಬಂದರು, ಪಪ್ಪಾ ಬಂದರು" ಅಂತಾ. 

ಕುರ್ಚಿ ಮ್ಯಾಲೆ ಕುಂತಾಗೆ ನಿದ್ದಿ ಹತ್ತಬಿಟ್ಟಿತ್ತ ನನಗ. ರಾತ್ರಿ ಎರಡ ಆಗಿತ್ತ ಅನಸ್ತದ ಯಾಕೊ ನನ್ನ ಪಾಪು ಒದ್ದಡಕತ್ತಿದ್ಳು. "ಮಗಳ, ಏ ಬಂಗಾರ ! ಎನಾತ ಕಣ್ಣ ತಗಿಯ. ಮಾತಾಡ ಎನಾಗಕತ್ತಾದ" ಅಂದೆ. "ಅದಕ್ಕೆನ ತ್ರಾಸ ಆಗಾಕತ್ತಿತ್ತೊ ಎನೊ, ಒದ್ದಾಡೊದ ಮಾಡಾಕತ್ತಿತ್ತ. ದೊಡ್ಡವರಾದರ ಎನಾರ ಹೇಳಬಹುದು. ಕೂಸದು ಎನ ಹೇಳ್ತದ. ಅಲ್ಲೆ ನೆಲದ‌ ಮ್ಯಾಲ ಮಲಗಿದ್ದ ಸಾವಿತ್ರಿ. ಎದ್ದ ದೇವರ ಮುಂದಿದ ಪ್ರಸಾದ ತಂದ ಕೂಸಿನ ಹಣಿಗ ಹಚ್ಚಿ ದೇವರಿಗೆ ಬೇಡಕೊಂಡಳು. ನಾ ದವಾಖಾನಿಗ ಫೋನ ಮಾಡಿದ್ದೆ ಯಾರೂ ಫೋನ ಎತ್ತಲಿಲ್ಲಾ...  

ಆಕಿ ಒದ್ದಾಡೊದ ನೋಡಿ ನನಗ ತಡಕೊಳೊದ ಆಗಲಿಲ್ಲಾ. "ಸಣ್ಣ ಕೂಸಿನಂಗ ಧರಧರ ಕಣ್ಣಗ ನೀರು ಹರಿಲಾಕ ಚಾಲೂ ಆತ. ಖರೆ ಅಂದರೆ ಒಂಬತ್ತ ತಿಂಗಳ ಹೆತ್ತು ಹೊತ್ತು ನೋವು ತಿಂದ ಸಾವಿತ್ರಿ ಅಳಬೇಕು. ಆದರ ಹೆಣ್ಣಗರಳಿನ ನಾನು ಎಷ್ಟ ತಡಕೊಂಡರು ಕಣ್ಣಾಗಿನ ನೀರ ತಡಕೊಳೊದ ಆಗಲಿಲ್ಲಾ. ಸಾವಿತ್ರಿನೆ ನನಗ ಸಮಾಧಾನ ಮಾಡಿದಳು. ಕೂಸಿಗೆ ಎಬ್ಬಿಸಿ‌ ಸ್ವಲ್ಪ ಬಿಸಿ ನೀರ ಕುಡಿಸಿದಳು. ಸ್ವಲ್ಪ ಸಮಾಧಾನವಾಗಿ "ಪಪ್ಪಾ" ಅಂದಳು ಕಣ್ಣುಮುಚ್ಚಿ. ಆ ಧ್ವನಿ ಕೇಳಿ ನನಗ ಗಂಟಲ ಉಬ್ಬಿ ಬಂತ ಆಕಿಗ ಮರು ಉತ್ತರ ನೀಡೊದಕ್ಕ ಆಗವಲ್ದು, ಕಣ್ಣಿರ ತಡಿವಲ್ದು. "ಪಪ್ಪಾ ಇಲ್ಲೆ ಅದಾರ ಚಿನ್ನಿ ನೀ ಮಲಗು ಮುಂಜಾನೆ ಪಪ್ಪಾ ನಿನಗ ಕೆಕ್ ತರತಾರ ಇಗಾ ಆರಮಸೆ ಮಲಗವ್ವ" ಅಂದಳು ಸಾವಿತ್ರಿ. 

"ಕೂಸೆ, ಏ ಬಂಗಾರ. ಇಲ್ಲೆ ಅದಾನವ್ವ ನಿನ್ನ ಪಪ್ಪಾ. ಕಣ್ಣ ತಗಿಯೆ, ಸ್ವಲ್ಪ ನೋಡ ಇಕಡೆ. ಇಲ್ಲಿ ನೋಡು" ಅಂತಾ ಆಕೆಯ ಗಲ್ಲ ಹಿಡಿದು ಕೇಳಿದೆ. ಆಕಿಗ ತ್ರಾಸ ಇರೊದಕ್ಕ ಕಣ್ಣ ತಗಿಲಿಲ್ಲ ಹಂಗೆ ಮಲಗಿದಳು.

ಬೆಳಗ್ಗಿ ಎಳಾನ "ಇವತ್ತ ನಾ ಕೆಲಸಕ್ಕ ಬರಲ್ಲಾ ಮನ್ಯಾಗ ಮಗಳಿಗೆ ಆರಾಮಿಲ್ಲಾ" ಅಂತಾ ಆಫೀಸಕ ಫೋನ್ ಮಾಡಿ ಹೇಳಿದೆ. ನಾನು ಜಳಕಾ ಮಾಡಿದೆ, ಅಷ್ಟೊತಿಗೆ ಸಾವಿತ್ರಿ ಎದ್ದು ದೇವರ ಪೂಜೆ ಮಾಡಿ ತಯಾರಾದಳು. ನಿನ್ನೆ ಡಾ.ಕೊಟ್ಟ ಔಷಧ ಕುಡಿಸಿ ಸ್ವಲ್ಪ ಹಾಲ‌ ಕುಡಿಸಿ ಕೂಸಿಗೆ ಬಗಲಿಗ ಹಾಕೊಂಡ ದವಾಖಾನಿಗ ನಡದೆ. ಕೂಸಿನ ಕಣ್ಣ ಸಣ್ಣ ಆಗಿದ್ವು ತುಟಿ ಒಣಗಿತ್ತು. ಬರೆ ಸುಸ್ತಾಗಿ ಮಲಗಾಕತ್ತಿದ್ಳು.. 

ಡಾ.ಸಂಗನಗೌಡರು ಬಂದು ತಪಾಸಣಿ ಮಾಡಿ ಮಾರಿ ಗಂಟ ಹಾಕಿದರು, ಮತ್ತೊಮ್ಮೆ ತಪಾಸಣೆ ಮಾಡಿದರು. ಎಕ್ಸರೆ ಮಾಡಸಬೇಕು ಅಂದರು ಆಯ್ತು ಮಾಡರಿ ಅಂದೆ. ಕೊನೆಗ ಡಾ. ಬಂದು "ನಿನ್ನ ಮಗಳಿಗೆ ಇಲ್ಲಿ ತೊರಸಿದ್ರ ನಡೆಯಲ್ಲ. ಮಿರಜ ಕರಕೊಂಡ ಹೊಗಬೇಕ ಅಲ್ಲೆ ಆಕಿಗ ಆರಾಮ ಆಗ್ತದ ಅಂದರು". ಯಾಕೊ ಎದಿ ಒಡದಂಗ ಆತ. ಆಕಿನ ಮತ್ತ ಹೆಗಲಿಗ ಎರಸ್ಕೊಂಡ ಮಕ್ಕಳ ತಜ್ಞ ಅಂತಾ ಊರಿಗೆ ದೊಡ್ಡ ಹೆಸರ ಮಾಡಿದ್ದ ಡಾ.ಬೊರಟಗಿ ಹತ್ತಿರ ಹೋದೆ. ಅವರು ಎಡಮಿಟ ಮಾಡಬೇಕ ಅಂದರು. ಅದಕ್ಕೂ ಹುಂ ಅಂದು ಎಡಮಿಟ ಮಾಡಿದೆ. ದಿನಾ ಕಳಿತಾ ಹೊದ್ವು, ರೊಕ್ಕ ನೀರಿನಂಗ ಹರಿತಾಹೊಯ್ತು. ಆದರ ಕೂಸಿನ ಮಾರಿಮ್ಯಾಲ ಮೊದಲಿನ ಕಳಿ ಬರಲೆ ಇಲ್ಲ. ಮತ್ತಷ್ಟು ಸೊರಗಿದ್ಳು. ಮೊದಲ ಸ್ವಲ್ಪ‌ ಸ್ವಲ್ಪ ಹಾಲ ಕುಡಿತಿದ್ಳು ಈಗ ಅದನ್ನು ಕಡಿಮೆ ಮಾಡಿದ್ಳು. ಯಾರೊ ಬಂದು ಅಂದರು " ಇಲ್ಲಿ ಬರಿ ರೊಕ್ಕಾ ಹಿರಿತಾರ, ಸುಮ್ಮ ದೊಡ್ಡ ದವಾಖಾನಿಗ ಹೊಗರಿ ಕೂಸಿನ ಉಳಸ್ಕೊರಿ" ಅಂದರು. ಯಾಕೊ ನನಗ ದಿಗಲ ಹಿಡಿತು, ಇಲ್ಲೆ ತೊರಸ್ಲೆನ ಅಥವಾ ಬೇರೆ ಕಡೆ ವಯ್ಲೊ ಅಂತ. ಬಾಗಲಕೋಟದಾಗ ಮಿಣಗಿ ಅವರ ದವಾಖಾನೆ ಚಲೊ ಅಂದರು "ಅಲ್ಲಿ ಹೋಗಿ ಎಡಮಿಟ ಮಾಡಿದೆ. ಅಲ್ಲಿ ಕೂಡಾ ಇಲ್ಲಿಯಂಗೆ ಮಾಡಿದರು. ಮೂರು ದಿನಾ ಕಳದರು ಕೂಸ ಏನು ಫರಕ ಆಗಲಿಲ್ಲ. ತೀರಾ ಆಕಿನ ದೇಹ ಸಣ್ಣದಾಗತಾ ಹೊಯ್ತು. ಇದ್ದ ಬಿದ್ದ ದೇವರಿಗೆ ಸಾವಿತ್ರಿ ಹರಿಕೆ ಬೆಡ್ಕೊತಿದ್ಳು. ಎಷ್ಟ್ಯಾಕ ಖರ್ಚ ಆಗಲ್ಯಾಕ ನನ್ನ ಮಗಳ‌ ಉಳಸ್ರಿ ಅಂತಾ ಕಣ್ಣಿಗೆ ಕಂಡ ಡಾ.ಗಳನ್ನ ನಾ ಬೆಡ್ತಿದ್ದೆ. ಅವರ ಪ್ರಯತ್ನ ಅವರ ಮಾಡ್ತಿದ್ದರು. ಆದರ ಕೂಸ ಯಾಕೊ ಸರಿ ಆಗಾಲಾಗಿತ್ತು. 

ಡಾ.ಸಂಗನಗೌಡರ ಹೇಳಿದ ಮಾತ ನೆನಪಾತು. ಮಿರಜಕ ಹೋದರ ಮಗಳ ಆರಾಮ ಆಗ್ತಾಳೆನು ಅನಕೊಂಡ  ಡಿಸ್ಚಾರ್ಜ ಮಾಡಿ ಕಾರ ಬಾಡಿಗೆ ಮುಗಸ್ಕೊಂಡ ಹೊಂಟವಿ. ವಿಜಯಪೂರ ದಿಂದ ಹೊಂಟಾಗ ಸುಮ್ಮ ಮಲಗಿದ್ದ ಕೂಸ ಅಥಣಿ ಸಮೀಪ ಬರುದಕ್ಕ ಉಸಿರ ತಗೊಳಾಕ ತ್ರಾಸ ಆಗಿ ವದ್ದಾಡಕತ್ತಳು. ಅಥಣಿಯಲ್ಲೆ ಒಂದು ದವಾಖಾನಿಗೆ ಹೊದ್ವಿ. ಅಲ್ಲಿ ಡಾ. ಗಾಬರಿಯಿಂದ "ಮಗುವಿನ ಕಂಡಿಶನ್ ಸಿರಿಯಸ್ ಆದ. ಜಲ್ದಿ‌ ನೀವು ಹೋಗಬೇಕ ಇಲ್ಲಂದರ ಕೈ ಬಿಡ್ತದ" ಅಂದರು. ಉಸಿರ ಸಲುವಾಗಿ ಮೂಗಿಗೆ ಒಂದು ಮಿಶೆನ ಕುರಿಸಿ "ಇದನ್ನ ಹಿಡಕೊಂಡ ಜಲ್ದಿ ಹೋಗ್ರಿ ಎಷ್ಟ ತಡಾ ಮಾಡ್ತಿರಿ ಅಷ್ಟ ಮಗುವಿನ ಜೀವಕ್ಕ ಅಪಾಯ ಇದೆ" ಅಂದರು. 

"ನನ್ನ ಪ್ರಾಣ ಅರ್ಧ ಅಲ್ಲೆ ಕುಸಿದ ಬಿತ್ತ. ಇನ್ನ ತಡಮಾಡಿದರ ನಡೆಯಲ್ಲ ಕಾರು ತಿರಗಿಸಿ ಆ ಮಿಶೆನ ಸಾವಿತ್ರಿ ಕೈಯಾಗ ಕೊಟ್ಟ ಕೂಸಿನ ತೊಡಿಮ್ಯಾಲ‌ ಹೊತಕೊಂಡ ದಾರಿ ಜಲ್ದಿ ಜಲ್ದಿ ಹೋಗಲಿ ಅಂತಾ ಕಾಣದ ದೇವರಿಗೆ ಬೇಡ್ಕೊತಿದ್ದೆ. ಡ್ರೈವರ್ ಚಲೊ ಇದ್ದ ಆದಷ್ಟ ಸ್ಪಿಡ ಹೊಡ್ಯಾಕತ್ತಿದ್ದ. "ಅಂಜಬ್ಯಾಡರಿ ಜಲ್ದಿ ಮುಟ್ಟತಿವಿ ಅಂತಾ ಧೈರ್ಯ ಹೇಳತಿದ್ದ. 

ಕರ್ನಾಟಕ‌ ಮುಗದ ಮಹಾರಾಷ್ಟ್ರ ಬೌಂಡರಿಗ ಬರೋದರಾಗ ಒಂದ ಗುಂಪ ನಮಗ ಅಡ್ಡ ಹಾಕ್ತು. ಮರಾಠಿಯಲ್ಲೆ ಎನೇನೊ ಘೊಷಣೆ ಕೂಗತಿದ್ರು, ಅದೆನೊ ಭಾಷೆಯ ಜಗಳ ಅಂತ. ಬೆಳಗಾವಿ ಬೇಕಂತ ಅವರು ಕನ್ನಡಕ, ಕರ್ನಾಟಕಕ್ಕ ಬೈಯಾಕತ್ತಿದ್ದರು. ನಮ್ಮ ಕಾರ್ ತಡದ ಪೋಲಿಸರು "ಇಲ್ಲಿ ಹೋರಾಟ ನಡಿತಿದೆ ಈ ಹೋರಾಟ ಕ್ಲಿಯರ್ ಆಗಬೇಕು ಅಂದರೆ ಅರ್ಧ ಗಂಟೆ ಕಾಯಬೇಕು" ಅಂದರು. ಡ್ರೈವರ ಎಲ್ಲಾ ವಿಷಯ ತಿಳಿಸಿದ. "ನಾ ಆದಷ್ಟು ಕ್ಲಿಯರ ಮಾಡಾಕ ಪ್ರಯತ್ನ ಪಡ್ತಿನಿ" ಅಂದ ಪೋಲಿಸಪ್ಪ ಆಕಡೆ ಹೋದ ಆದರೆ ಆ ಹೋರಾಟಗಾರರು ಆ ಪೋಲಿಸಪ್ಪನ ಮಾತು ಕೇಳೊದ ಬಿಟ್ಟು ಇನ್ನಷ್ಟು ಜೋರಾಗಿ ಕೂಗಾಕತ್ತರು.

ನಮ್ಮ ಡ್ರೈವರಗ ಇನ್ನೊಂದ ದಾರಿ ಗೊತ್ತಿತ್ತು. ಸೀದಾ ಕಾರ ಟರ್ನ ಮಾಡಿದವನೆ ಒಂದ ಸಣ್ಣದಾರಿಗುಂಟಾ ಹೊಂಟ. ಹೆಂಗೊ ಮಹಾರಾಷ್ಟ್ರ ಎಂಟ್ರಿ ಆದವಿ ಇನ್ನ ಯಾರೂ ತಡಿಯಲ್ಲ ಅನಕೊಂಡ ಹೊಂಟವಿ. "ಇನಾ 30 KM ಮೀರಜ್. ಇಪ್ಪತ್ತ ನಿಮಿಷದಾಗ ಅಲ್ಲೆ‌ ಇರ್ತಿವರಿ" ಅಂದ ಡ್ರೈವರ. "ಜಲ್ದಿ ರಿ ಮಗಳ ಬಾಳ ತ್ರಾಸ ಮಾಡ್ಕೊಕತ್ತಾದ" ಅಂತ ಭಾರವಾದ, ಸತ್ತ ಧ್ವನಿಯೊಳಗ ಅವನಿಗೆ ವಿನಂತಿ‌ ಮಾಡಿದೆ.

ಅಷ್ಟರಾಗ ಎನಾತೊ ಏನೊ ಟಪ್ಪ ಟಪ್ಪ ಅಂತಾ ನಾಲ್ಕೈದ ಸಲ ಸದ್ದ ಬಂತ. ಕಣ್ಣ ಬಿಟ್ಟ ನೋಡುದರಾಗ ಗಾಡಿ ಹೋಗಿ ಒಂದು ಕುಣಚಾಗ ಹೋಗಿ ಒಂದು ಬ್ರಿಜ್ ಗ ಬಡದ ನಿಂತಿತ್ತು. ಕಾರಿಗೆ ಯಾರೊ ಕಲ್ಲ ಹೊಡದಿದ್ದರು. ಬ್ರಿಜ್ ಬಡದ ರಭಸಕ್ಕ ಡ್ರೈವರ ಪೂರಾ ಗಿಜಗುಣಕಿ ಆಗಿದ್ದ. ಸಾವಿತ್ರಿ ತಲಿ ಎಲ್ಲಾ ರಕ್ತರಾಡಿ ಆಗಿತ್ತ ನನಗ ಏನು ಆಗಿರಲಿಲ್ಲ. ಕೂಸಿನ ಮೂಗಿನ ಮೇಲಿನ ಉಸಿರ ತಗೊಳೊ ಮಿಶನ ಕಡ್ಯಾಕ ಆಗಿತ್ತ. ಆದರ ಯಾವುದೆ ಪೆಟ್ಟ-ಗಾಯ ಆಗಿರಲಿಲ್ಲ ಕೂಸಿಗ. 

ಜೋರಾಗಿ ಒದ್ದ ಬಾಗಿಲು ತಗದ ಹೋರಗ ಬಂದೆ. ಸಾವಿತ್ರಿನು ನನ್ನ ಹಿಂದೆ ಒದ್ದಾಡಕೊತ ಬಂದಳು. ದೂರದಾಗ ನಿಂತು ನಮ್ಮ‌ಕಡೆ ನೋಡಿ ಒಂದಿಷ್ಟು ಜನ ಬೈಯಾಕತ್ತಿದ್ದರು, ಘೋಷಣೆ ಕೂಗಾಕತ್ತಿದ್ದರು. ಎನಂತ ನನಗ ತಿಳಿಯಾಲಾಗಿತ್ತು ಮರಾಠಿ ಒಳಗ ಇತ್ತು ಅದು. ಅಷ್ಟರಾಗ ಪೋಲಿಸ ಗಾಡಿ ಬರುದಕ್ಕ, ಅವರೆಲ್ಲ ಓಡಿ ಹೋದರು. 

ಪೋಲಿಸರು ನಮ್ಮ ಗಾಡಿ ಹತ್ತೀರ ಬಂದರು. ಡ್ರೈವರ ಸತ್ತಿದ್ದನ್ನ ನೋಡಿ‌, ಅವರ  ಮೊಬೈಲನಾಗ ಒಂದಿಷ್ಟ ಪೋಟೊ ಹೊಡಕೊಂಡರು. ನಮ್ಮೂರು, ಎಲ್ಲಿಗ ಹೊಂಟಿದ್ರಿ ಎಲ್ಲಾ ಕೇಳಿ ಗಾಡಿ ನಂಬರ ಬರಕೊಂಡ ಆಂಬುಲೆನ್ಸಗ ಪೋನ ಮಾಡಿದರು. ನಮಗ ಕುಡಿಲಾಕ ನೀರ‌ ಕೊಟ್ಟರು. ಕುಂಟಕೊತ ನರಳಕೊತ ಒಂದ ಕಡೆ ಕುಂತ ಕೂಸಿಗೆ ಎನು ಆಗಿಲ್ಲಲ ಅಷ್ಟೆ ಸಾಕು ಅಂದೆ. 

"ಹೌದರಿ" ಅಂದು ಸಾವಿತ್ರಿ ಕೈಯಾಗಿದ್ದ ನೀರಿನ ಬಾಟಲಿಯ ಬುಚನಾಗ ಒಂದಿಷ್ಟ ನೀರ ಹಾಕೊಂಡ. ನನ್ನ ತೊಡಿಮ್ಯಾಲಿದ್ದ ಕೂಸಿನ ಬಾಯಿ ತಗದ ನೀರ ಹಾಕಿದಳು. ಯಾಕೋ ನೀರ ಗಂಟಲಕ ಇಳಿಲೆ ಇಲ್ಲಾ, ಎಷ್ಟ ನೀರ ಹಾಕಿದ್ಳೊ ಎಲ್ಲಾ ನನ್ನ ತೊಡಿಮ್ಯಾಲೆ ಬಿತ್ತು. ಇನ್ನೊಮ್ಮೆ ನಾನೆ ಬಾಯಿ ತಗದ "ಈಗ ಕುಡಿಸ" ಅಂದೆ. ಮತ್ತ ಹಂಗೆ ಆತ. ಗಾಬರಿಯಿಂದ "ಕೂಸ ಏ ಬಂಗಾರ ಏ ಕೂಸ" ಅಂದೆ ಎನು ಶಬ್ದಿಲ್ಲ, ಉಸಿರನ ಸಾಕ್ಷಿ ಇಲ್ಲಾ. ಸಾವಿತ್ರಿ ಅಳಾಕ ಚಾಲೂ ಮಾಡಿದ್ಳು, "ಏ ಗಪ್ಪಾಗು, ಅಳಬ್ಯಾಡ ಏನು ಆಗಿಲ್ಲ ಗಪ್ಪಾಗು" ಅಂದೆ. ಆಕಿ ಜೋರ ಜೋರಾಗಿ "ಚಿನ್ನಿ ಚಿನ್ನಿ" ಅಂತಾ ಅಳ್ಳಾಕತ್ತಳು. ನನಗ ಸಿಕ್ಕಾಪಟ್ಟೆ ಸಿಟ್ಟಬಂತ "ಸುಮ್ಮ ಇರ್ತಿಯೆನ ಬಾಯಾಗ ಬೂಟ ಇಟ್ಟ ಹೊಡಿಲ್ಯಾ. ಏನೂ ಆಗಿಲ್ಲ ಸುಮ್ಮಿರು" ಅಂದೆ. ಅಷ್ಟರಾಗ ಅಂಬ್ಯುಲೆನ್ಸ ಬಂತ. ನಾ ಓಡೊಡಿ ಹೋಗಿ ನನ್ನ ಕೂಸಿಗ ಅವರಿಗೆ ತೊರಿಸಿದೆ. ಕೂಸಿನ ಕೈ ಹಿಡಿದು, ಕಣ್ಣ ತಗದ, ಎದಿಗ ಕಿವಿ ಹಚ್ಚಿ ನೋಡಿದರು "ಕೂಸ ಹೊಗ್ಯಾದ್ರಿ" ಅಂದರು.............



                                ರಾಜು ಪಾಟೀಲ(ಸಿಂದಗಿ)

                                9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು