Breaking

10/recent/ticker-posts

ಸಾಹಿತಿಯಾದವನು ಸಮಾಜವನ್ನು ತಿದ್ದುವ ತಾಯಿ ಮತ್ತು ತಪ್ಪನ್ನು ತೊರಿಸುವ ನಾಯಿ ಆಗಿರಬೇಕು. - ಬೀಚಿ

ಪುಟ್ಟಕ್ಕನ ಹೆಣ ಹಳ್ಳದಲ್ಲಿ

          

      ಇಡೀ ಊರಿಗೆ ಊರೆ, ಊರ ಹೊರಗಿನ ಲಂಡೆನ ಹಳ್ಳದಲ್ಲಿ ಸೇರಿದೆ. ಒಂದ ಹೆಣ್ಣು ಹುಡುಗಿಯ ದೇಹ ಯಾವದೋ ಪ್ರಾಣಿ ಎಳೆದೊಯ್ಯದಿದೆ ಅಂತಾ ಸುದ್ದಿ. 

ಒಡೋಡಿ ಹೋಗಿ ನೊಡ್ತಿನಿ ನಮ್ಮ ಪುಟ್ಟಕ್ಕ  ಹೆಣವಾಗಿ ಬಿದ್ದಿದ್ದಾಳೆ. ಮೈ ತುಂಬಾ ಗಾಯ ಯಾವುದೊ ಪ್ರಾಣಿ ಪರಚಿದಂಗೈತಿ. ಪುಟ್ಟಕ್ಕನ ಅಪ್ಪ-ಅಮ್ಮ ಆಕ್ರೋಶದಿಂದ ಅಳುತ್ತಿದ್ದಾರೆ. ಅಷ್ಟರಲ್ಲಿ ಪೋಲಿಸರು ಬಂದು ಜನ ಜಂಗುಳಿಯನ್ನು ಹೆಣದಿಂದ ದೂರ ಸರಿಸಿದರು. ಹೆಣ ಪೊಸ್ಟ್ ಮಾರ್ಟಮ್ ಗೆ ಕಳಿಸಿದರು. ಊರಿನ ನಾಲ್ಕು ಹಿರಿಯರು ಮತ್ತು ಲಿಡರ್ ನಾಗಪ್ಪ, ಪುಟ್ಟಕ್ಕನ ಅಪ್ಪ ಪೊಲೀಸರ ಗಾಡಿಯಲ್ಲಿ ತಾಲೂಕಿನ ಆಸ್ಪತ್ರೆಗೆ ಹೋದರು. ಹೆಣ ಆಕಡೆ ಹೋಗುತ್ತಿದ್ದಂತೆ  ಈ ಕಡೆ ಹಳ್ಳ ಕೂಡಾ ಖಾಲಿ ಆಗಿ ಎಲ್ಲರೂ ಊರ ಕಡೆ ಹೊರಟರು.

"ಎಷ್ಟಿತ್ತೊ ರಾಮ್ಯಾ ಹುಡುಗಿ ವಯಸ್ಸಾ ?" ಚಾ ಕುಡಿಯುತ್ತಾ ಚಪ್ಪರದ ಬಸಣ್ಣ ಕೇಳಿದ. "ಈ ವರ್ಷ 7 ನೆತ್ತಿ ಮಾರಾಯ. 14 ವರ್ಷನಾಕಿ ಇರಬೇಕು, ಪಾಪ ಸಣ್ಣ ಹುಡುಗಿ....." ಅಷ್ಟರಲ್ಲಿ ಪೊಷ್ಟ ಮಾರ್ಟಮ್ ಮಾಡಿ ಹೆಣ ಬಂತು. ಎಲ್ಲರೂ ಪುಟ್ಟಕನ ಮನೆ ಕಡೆ ಹೊಂಟವಿ. ಮನೆ ಮುಂದೆ ಜನ ತುಂಬಿದ್ದರು. ಎಲ್ಲಾ ಕೊಯ್ದು ಹೊಲಿಗೆ ಹಾಕಿ ಇನ್ನಷ್ಟು ವಿಕಾರವಾಗಿ ಕಾಣ್ತಿತ್ತು ಪುಟ್ಟಕ್ಕನ ದೇಹ. ಇಡೀ ಊರಿಗೆ ಊರೆ  ಅಳ್ಳಲಿಕತ್ತಾದ. ಇಡೀ ಊರಾನ ಮಂದಿಗಿ ಮಾತಾಡ್ಸಾಕಿ. ಎಲ್ಲೊರಿಗೂ ಕಾಕಾ, ಬಾಬಾ, ಅತ್ತಿ, ಮಾವ, ಸಣ್ಣವ್ವ ಅಂತಾ ಎಲ್ಲರ ಹೇಳಿದ ಕೆಲಸ ಮಾಡಿ ಎಲ್ಲರಿಗೂ ಪ್ರೀತಿಯ ಗೊಂಬೆ ಆಗಿದ್ಳು. ನಾನೂ ಎಂದಾದರೂ ದಾರು ಕೂಡದು ಹೊಂಟಿದ್ನಂದ್ರೆ "ಕುಡದರ ಕಿಡ್ನಿ ಫೇಲ ಆತವ ಕುಡಿಬ್ಯಾಡ ಕಾಕಾ" ಅಂತಾ ಬಾಯ್ತುಂಬ ಅನ್ನಾಕಿ. "ಆಯ್ತು ತಗೊರವ್ವ ಹಂಗೆನಾರ ಕಿಡ್ನಿ ಫೇಲಾದರ ನೀ ಡಾಕ್ಟರ ಆಗಿ ಅದನ್ನ ಸುದ್ದಿ ಮಾಡಾಕತ್ತಿ ತಗೊ" ಅಂತಾ ನಾ ಕಾಡಸ್ತಿದ್ದೆ-ಹರಸ್ತಿದ್ದೆ. ಆದರ ಇವತ್ತ ಅದೆ ಡಾಕ್ಟರ ಕೈಯಲ್ಲಿ ಮೈ ಎಲ್ಲಾ ಹೊಲಿಗಿ ಹಾಕಸ್ಕೊಂಡ ಮಲಗಿದಾಳ. ಪುಟ್ಟ ಸೌಂದರ್ಯದ ಗಿಣಿಯಂತಿದ್ದ ಹುಡುಗಿ ಗುಡ್ಡ ಅಗೇದ ಗಣಿಯಂತಾಗಿ ಮಲಗಿದ್ದಾಳೆ. ಬಾಳಿ ಬದುಕಬೇಕಿದ್ದ ಸಣ್ಣ ಜೀವ ಒಯ್ಯುವಕ್ಕಿಂತ, ಉಪಯೋಗಿಲ್ಲದ ನನ್ನ ಜೀವಾರೆ ಒಯ್ಯಬಾಡ್ದಾ ಅಮರೇಶ್ವರಾ ಅಂತ ಅನಿಸ್ತು. 

ಲೀಡರ್ ನಾಗಪ್ಪ ಬಂದ ಹೇಳಿದಾಗಲೆ ಗೊತ್ತಾಗಿದ್ದು, ಇದು ಪ್ರಾಣಿ ತಿಂದ ದೇಹ ಅಲ್ಲ ಯಾರೋ ಹುಡುಗಿನ ಕೆಡಸಿ-ಸಾಯಿಸಿ ಒಗದಿದ್ದಾರಂತ. ಒಂದೆ‌ ಸಲಕ್ಕ ನನ್ನೇದೆ ಝಲ್ಲಂತು. "ಯಾವ ಸೂಳೆಮಗ ಇಂತಹ ಕೆಲಸ ಮಾಡಿದಾನೊ. ಅವಾ ಸಿಕ್ಕರ ಸಿಗದ ತೋರಣ ಕಟ್ಟಿ ಊರತುಂಬಾ ಮೇರವಣಿಗೆ ಮಾಡಬೇಕು". ಅಂತಾ ಚಪ್ಪರದ ಬಸಣ್ಣ ಅಂದಾ. ಲಿಡರ್ ನಾಗಪ್ಪ ಹೇಳಿದ "ಹುಡುಗಿ ರಾತ್ರಿ ಹೊತ್ತನಾಗ ಹೋರಾಕ ಹೊರಕಡಿಗಿ ಹೋಗ್ಯಾಳ ಅಷ್ಟರಾಗೆ ಯಾವನೊ ಕಾಮಿ ಆಕಿನ ಹೊತ್ತಗೊಂಡ ಹೋಗಿ ಈ ಕೆಲಸ ಮಾಡ್ಯಾನ ನೋಡ". 

      ಪುಟ್ಟಕ್ಕನ ಅಪ್ಪ ಜಗ್ಗಲೆ ಹೆಣದ ಮುಂದೆ ಎದಿ ಎದಿ ಬಡಕೊತ್ತಿದ್ದ ಆತನಿಗೆ ವಿಷಯಗೊತ್ತಾಗಿತ್ತು "ಎ ರಾಮಣ್ಣ ಅವನಿಗ ಈ ಕಡೆ ಕರಕೊಂಡ ಬಾರೊ‌ ಸಮಾಧಾನ ಮಾಡೋಣು" ಅಂದ ಲೀಡರ್ ನಾಗಪ್ಪಾ. "ಆತ್ರಿ" ಅಂದು ಹೋಗಿ ಅವಂಗ ಕರಕೊಂಡ ಬಂದೆ "ಲೆ ರಾಮ್ಯಾ ಹೊಯ್ತೊ ನನ್ನ ಬಂಗಾರದಂತ ಕೂಸು ಹೊಯ್ತೊ, ಎಷ್ಟ ಬಡಕೊಂಡಳೊ ನನಗ "ಅಪ್ಪ ಒಂದ ಪಾಯಿಖಾನಿ ಕಟ್ಟಸು ಅಂತಾ" "ಹೋಗವ್ವ ಹೋಗು ಮನ್ಯಾಗ ಪಾಯಖಾನಿ ಕಟ್ಟಸದರ ವಾಸನಿ ಬರ್ತದ. ಅದೆಲ್ಲಾ ಪ್ಯಾಟ್ಯಾಗ ಚಂದ ಹಳ್ಯಾಗ ಅದೆಲ್ಲಾ ನಡ್ಯಾಲ್ಲ." ಅಂದ್ನಲ್ಲೆ ರಾಮ್ಯಾ ಈಗ ಈ ಕೈಯಾಗ ಆಡಿದ ಬಂಗಾರ ಕಳಕೊಂಡೆ ಮಾರಾಯ, ಬಂಗಾರ ಕಳಕೊಂಡೆ. ಒಂದ ಪಾಯಖಾನಿ‌ ಕಟ್ಟಿಸಿದ್ದರ ಮಗಳ ಉಳಿತಿದ್ಳೊ ರಾಮ್ಯಾ." ಅಂತಾ ಜೋರ ಜೋರಾಗಿ ಪುಟ್ಟಕ್ಕನ ಅಪ್ಪಾ ಅಳಲಿಕತ್ತಿದ್ದ. ನನಗ ಸಮಾಧಾನ ಮಾಡೊದ ಗೊತ್ತ ಆಗಲಿಲ್ಲಾ. ನನ್ನ ಕಣ್ಣಲ್ಲು ನೀರಾಡಿದವು.

ಆ ಸುದ್ದಿ ಆದ ಒಂದಿಷ್ಟು ದಿನಗಳ ಕಳೆಯೊದರಾಗ ಇಡೀ ಊರ ತುಂಬಾ ಮನೆಗೊಂದು ಪಾಯಖಾನಿ ಆಗಿದಾವೆ. ಪುಟ್ಟಕ್ಕನ ಮನ್ಯಾಗೂ ಪಾಯಖಾನಿ ಆಗಿದೆ. ಆದರೆ ಸತ್ತ ಹೋದ ಪುಟ್ಟಕ್ಕನ  ಮರೆಯೋಕೆ ಆಗ್ತಿಲ್ಲಾ, ಆಗೋದು ಇಲ್ಲ.



      ಒಂದ ವರ್ಷದ ತರುವಾಯ ನಮ್ಮ ಪಕ್ಕದ ಊರಿನಲ್ಲೂ ಇಂತಹದೆ ಒಂದು ಅವಘಡ ಆಗಿರುವ ಸುದ್ದಿ ಬಂತು. ಸುದ್ದಿ ಬಂದ ಮೂರ ವಾರ ಆಗಿರಬಹುದು. ಯಾಕೊ ಅವತ್ತು ಲಿಡರ್ ನಾಗಪ್ಪನ ಕೈಗೆ ಪೊಲೀಸರು ಬೇಡಿ ಹಾಕೊಂಡ ಲಂಡೆನ ಹಳ್ಳಕ್ಕ‌ ಕರಕೊಂಡ ಬಂದರು. ಪಕ್ಕದ ಗ್ರಾಮದ ಊರಾಗಿನ ಹುಡುಗಿನೂ ಇದೆ ಲಂಡೇನ ಹಳ್ಳದಲ್ಲಿ ಕೆಡಸಿ-ಸಾಯಿಸಿ ಒಗದಿದ್ರೂ. ಅಲ್ಲಿ ಹೋಗಿ ನೋಡ್ತೆನೆ ಪುಟ್ಟಕ್ಕನ ಅಪ್ಪ ಲಿಡರ್ ನಾಗಪ್ಪನನ್ನು ಬೈಯಲಿಕತ್ತಾನ. ಅದೆನೋ ಪಂಚನಾಮೆ ಅಂತಾ ಕರಕೊಂಡ ಬಂದಿದ್ದರೂ ನಾಗಪ್ಪನ್ನ. ನನಗಂತೂ ನಂಬಕ್ಕೆ ಆಗಲಿಲ್ಲಾ ಪುಟ್ಟಕ್ಕನ ಕೊಂದವ ನಮ್ಮೂರ ಲಿಡರ್ ನಾಗಪ್ಪನೆ ಅಂತಾ....

ರಾಜು ಪಾಟೀಲ(ಸಿಂದಗಿ)
9611042409

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಅದ್ಬುತ ಬರಹ ಅಣ್ಣ ಹಳ್ಳಿಯಲ್ಲಿ ಅದೆಷ್ಟೋ ಇಂತ ವಿಷ್ಯ ಆಗಿವೆ...

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದು ನಮ್ಮ ಹಳ್ಳಿಗಳಲ್ಲಿ ಇಂತಹ ಘಟನೆಗಳು ಬಹಳಷ್ಟು ಮರಕಳಿಸುತ್ತಲಿವೆ.

      ಅಳಿಸಿ
  2. ಹಳ್ಳಿಯ ಭಾಷಾ ಸೋಗಡಿನೊಂದಿಗೆ ಮನಃ ಕಲಕುವ ಪುಟ್ಟಕ್ಕನ ಕಥೆ ಬರವಣಿಗೆವಲ್ಲಿ ಚನ್ನಾಗಿ ಕಟ್ಟಿಕೊಟ್ಟಿದಿರಾ..

    ಪ್ರತ್ಯುತ್ತರಅಳಿಸಿ