ರೈತರಿಗೆ ಸ್ವಾಭಿಮಾನ ಕಲಿಸಿದ ನಾಯಕ, ಅಧಿಕಾರಿಗಳ ಚಳಿಬಿಡಿಸಿದ ಹೋರಾಟಗಾರ.


ಆ ಹಸಿರು ಶಾಲಿಗೆ ಒಂದು ಗತ್ತಿತ್ತು. ಆ ಸಂಘಟನೆಯವರು ಬಂದರೆ ಅಧಿಕಾರಿಗಳು ಥರಗುಟ್ಟುತ್ತಿದ್ದರೂ. ಪೊಲೀಸರು ಅವರನ್ನ ಬಂಧಿಸಲು ಹಿಂದೆ ಮುಂದೆ ನೋಡ್ತಿದ್ದರು.

ಅಧಿಕಾರಿಗಳು ಯಾವುದೇ ಗ್ರಾಮಕ್ಕೆ ಹೊಗಬೇಕಾದರೂ ರೈತರ ಪರವಾನಿಗೆ ತೆಗೆದುಕೊಳ್ಳಬೇಕಿತ್ತು. ರೈತರ ಮನೆ ಜಪ್ತಿ ಮಾಡಲು ಬಂದ ಅಧಿಕಾರಿಗಳನ್ನ ಕಪಾಳಕ್ಕೆ ಬಾರಿಸುತ್ತಿದ್ದರು. ಅಷ್ಟೆಯಲ್ಲ ಭ್ರಷ್ಟ ಅಧಿಕಾರಿಗಳ ಮನೆಯನ್ನೇ ಜಪ್ತಿ ಮಾಡುತ್ತಿದ್ದರು ಆ ಸಂಘಟನೆಯವರು. ಅಷ್ಟಕ್ಕೂ ಆ ಸಂಘಟನೆಯ ಯಾವುದು ಅಂತಿರಾ...? 

ಈಗಿನ ಕಾಲದ ಯುವಕರಿಗೆ ಆ ಸಂಘಟನೆ ಬಗ್ಗೆ ಕಿಂಚಿತ್ತು ಗೊತ್ತಿಲ್ಲ. ಆ ಸಂಘಟನೆ ಬೇರೆ ಯಾವುದೂ ಅಲ್ಲ. ನಮ್ಮ ರಾಜ್ಯದಲ್ಲೆ ಹುಟ್ಟಿದ ರೈತ ಸಂಘಟನೆ. ರೈತರು ಊಟಕ್ಕಿಲ್ಲದೆ ಸಾಲ ಮಾಡಿ ಸಾಯುತ್ತಿದ್ದಾರೆ, ಬಡತನವೇ ಕೃಷಿಕರ ಮೂಲಭೂತ ಹಕ್ಕು ಆಗಿದೆ. ಆದರೆ ಅವರ ಕಾಲದಲ್ಲಿ ಹೀಗಿರಲಿಲ್ಲಾ. ರೈತನೆ ಈ ರಾಜ್ಯದ ಒಡೆಯನಾಗಿದ್ದ. ಅವನು ಮನಸ್ಸು ಮಾಡಿದರೆ ಈ ರಾಜ್ಯದ ಚುಕ್ಕಾಣಿ ಹಿಡಿದವನ ಎದೆಯ ಮೇಲೆ ಕೈ ಹಾಕಿ ಕೇಳುವಷ್ಟು ಶಕ್ತಿಯಿತ್ತು, ಅಧಿಕಾರವಿತ್ತು. ಹಾಗೆ ರೈತರಿಗೆ ಒಂದು ಸ್ವಾಭಿಮಾನ ಮತ್ತು ನ್ಯಾಯವನ್ನು ಒದಗಿಸಿದ್ದ ಒಬ್ಬ ಮಹಾನ ಕ್ರಾಂತಿಕಾರಿ, ಸಮಾಜವಾದಿ ಹಸಿರು ಸೇನಾನಿ ಶ್ರೀ ಪ್ರೋ. ನಂಜುಂಡಸ್ವಾಮಿ.

ನೋಡಲು ತೆಳ್ಳಗೆ ಕುಳ್ಳಗಿದ್ದ ಪ್ರೋ. ನಂಜುಡಸ್ವಾಮಿ ಯಾರಿಗೂ ತೆಲೆ ಬಾಗುತ್ತಿರಲಿಲ್ಲ. ಡಾ.ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ ನಾರಾಯಣರ ಚಿಂತನೆಗಳನ್ನು ಅಳವಡಿಸಿಕೊಂಡು ಸ್ವಾಭಿಮಾನಿಯಾಗಿ, ರೈತರಿಗೂ ಸ್ವಾಭಿಮಾನದ ಪಾಠ ಹೇಳಿ ಕೊಟ್ಟವರು ನಂಜುಂಡಸ್ವಾಮಿಯವರು. ಹಗಲು ರಾತ್ರಿಯನ್ನದೆ ದಲಿತರು, ರೈತರು, ಸಮಾಜದ ಪರವಾಗಿ‌ ಕೆಲಸ ಮಾಡುತ್ತಿದ್ದರು. ದಲಿತ ಚಳುವಳಿಗಳು ಪ್ರಾರಂಭದ ದಿನಗಳಲ್ಲಿ ನಂಜುಡಸ್ವಾಮಿಯವರೆ ಮುಖ್ಯ ಭಾಷಣಕಾರರಾಗಿ ಹೊಗುತ್ತಿದ್ದರು. ಜಯಪ್ರಕಾಶ್ ನಾರಾಯಣರ ಚಳುವಳಿಯನ್ನು ಕರ್ನಾಟಕದಲ್ಲಿ ಮೊದಲಿಗೆ ಪ್ರಾರಂಭಿಸಿದವರೆ ನಂಜುಂಡ ಸ್ವಾಮಿಯವರು. 

ಇವರ ಹೋರಾಟಗಳೇ ವಿಚಿತ್ರವಾದವುಗಳು. ಇಡೀ ವಿಶ್ವದಲ್ಲೇ ಒಂದು ಹೋರಾಟದಲ್ಲಿ ಅತಿ ಹೆಚ್ಚು ಕಾರ್ಯಕರ್ತರು ಬಂಧಿಯಾಗಿದ್ದು, ಜೈಲುಗಳಲ್ಲಿ ಜಾಗವಿರದಂತೆ ಆಗಿದ್ದು ನಂಜುಡಸ್ವಾಮಿಯವರ ಹೋರಾಟದ ಪರಿ. ಅದು 1984 ರ ಸೆಪ್ಟೆಂಬರ್ ರೈತ ಚಳುವಳಿಯ ರಸ್ತೆ ತಡೆ ಕಾರ್ಯಕ್ರಮದಲ್ಲಿ ಪೋಲಿಸ್ ಅಧಿಕಾರಿಗಳ ವರದಿಯ ಪ್ರಕಾರ, ಆ ದಿನದ 12 ಗಂಟೆಯ ಹೊತ್ತಿಗೆ, ರಸ್ತೆಯ ಮೇಲಿದ್ದ ರೈತರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚಿತ್ತು. ಆಗಿನ ಕೇಂದ್ರದ ಗೃಹ ಸಚಿವ ಬೂಟಾಸಿಂಗರು ಲೋಕಸಭೆಯಲ್ಲಿದ್ದ ಹೇಳಿಕೆಯ ಪ್ರಕಾರ 37,500 ರೈತರು ಅರೆಸ್ಟಾಗಿದ್ದರು. ಅಂದರೆ ಪ್ರಪಂಚದ ಇತಿಹಾಸದಲ್ಲೇ ಒಂದು ಮಹತ್ವದ ಚಳುವಳಿಯಲ್ಲಿ ಒಂದೇ ದಿನದಲ್ಲಿ ಅಷ್ಟು ಅಸಂಖ್ಯಾತ ಜನರು ಅರೆಸ್ಟಾದುದಿಲ್ಲ. ಗಾಂಧೀಯ ನೇತೃತ್ವದ ಇಡೀ ಭಾರತಾದ್ಯಂತದ ಸ್ವಾತಂತ್ರ್ಯದ ಅಸಹಕಾರಕ ಚಳುವಳಿಯಲ್ಲೂ ಅಷ್ಟು ಜನರು ಅರೆಸ್ಟಾಗಿರಲಿಲ್ಲ. ಇದೊಂದು ಗಿನ್ನಿಸ್ ಬುಕ್ಕಿನ ದಾಖಲೆ.

ನಂಜುಂಡಸ್ವಾಮಿಯವರು ಮೈಸೂರಿನಲ್ಲಿ 1936 ಫೆಬ್ರವರಿ 13 ರಂದು ಜನಿಸಿದರು. ಇವರ ತಂದೆ ಮಹಾದೇವ ಅವರು ಆಗಿನ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ತಾಯಿ ರಾಜಮ್ಮಣಿ. ಇವರು ಐದನೇ ಮಗನಾಗಿದ್ದರು. ಇವರು ಪ್ರಥಮ ದರ್ಜೆಯಲ್ಲಿ ಎಲ್.ಎಲ್.ಎಮ ಪದವಿ ಮುಗಿಸಿ, ನೆದರಲ್ಯಾಂಡಿನ 'ಹೆಗ್ ಆಕಾಡೆಮಿ ಆಫ್ ಇಂಟರ್ನ್ಯಾಷನಲ್ ಲಾ' ಸಂಸ್ಥೆಯಲ್ಲಿ 'ಇಂಟರನ್ಯಾಷನಲ್ ಲಾ' ವಿಷಯದಲ್ಲಿ ಪಿಎಚಡಿ ಅಧ್ಯಯನ ಆರಂಭಿಸಿದರು. ಆದರೆ ಮಾರ್ಗದರ್ಶಕರ ಜೊತೆ ಉಂಟಾದ ಭಿನ್ನಾಭಿಪ್ರಾಯದಿಂದ ಅದನ್ನು ಅಲ್ಲಿಗೆ ಕೈಬಿಟ್ಟು ತಮ್ಮೂರಿಗೆ ಮರಳಿದರು. 

ಇಷ್ಟಕ್ಕೂ ನಂಜುಂಡಸ್ವಾಮಿ ಜಮಿನ್ದಾರ ವಂಶಸ್ಥರು ಆಗಿದ್ದರು. ಸಾವಿರಾರು ಎಕರೆ ಜಮೀನು ಹೊಂದಿದ್ದರು, ಅದೆ ಜಮೀನುಗಳಲ್ಲಿ ಇವರು ಕೃಷಿಯಲ್ಲಿ ತೊಡಗಿದ್ದರು. ಇವರ ಸ್ನೇಹಿತರು ಆದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಅವರ ಸಂಬಂಧಿ ಎನ್.ಡಿ ಸುಂದರೇಶ ಅದಾಗಲೇ ಕೃಷಿ ಆರಂಭಿಸಿದ್ದರು. ಮೊಟ್ಟ ಮೊದಲ ಬಾರಿಗೆ ಲೇವಿ ಪದ್ದತಿ ವಿರುದ್ಧ ಹೋರಾಡುವ ಮೂಲಕ ನಂಜುಂಡಸ್ವಾಮಿಯವರು 'ಏಕ ವ್ಯಕ್ತಿ ರೈತ ಚಳುವಳಿ' ಶುರುವಾಯಿತು. ಇವರ ಜೊತೆ ಶಿವಮೊಗ್ಗದಲ್ಲಿ ಸುಂದರೇಶ ಹಾಗೂ ಚಿಕ್ಕಮಗಳೂರಿನಲ್ಲಿ ತೇಜಸ್ವಿ ಹೊರಾಟ ಪ್ರಾರಂಭಿಸಿದರು‌. ಅಲ್ಲಿಂದ ಪ್ರಾರಂಭವಾಯಿತು ಇವರ ಹೋರಾಟದ ಜೀವನ. 

ಮೈಸೂರಿನ ಶಾರದಾವಿಕಾಸ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು ನಂಜುಂಡಸ್ವಾಮಿಯವರು. ಅಲ್ಲಿಂದ ಅವರ ಹೋರಾಟಗಳಲ್ಲಿ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವಾಗ ಅವರ ಶಿಷ್ಯಂದಿರಾದ ಲಕ್ಷ್ಮೀಪತಿ ಬಾಬು ಹಾಗೂ ರಾ.ನ.ವೆಂಕಟಸ್ವಾಮಿ, 'ಪ್ರೋ.ನಂಜುಂಡಸ್ವಾಮಿ' ಎಂದು ಮುದ್ರಿಸಿದರು. ಅಲ್ಲಿಂದ ಅವರ ಹೆಸರಿನ ಜೊತೆಗೆ ಪ್ರೋ ಎಂಬುದು ಸೇರಿಬಿಟ್ಟಿತ್ತು.

ಶಿವಮೊಗ್ಗದಲ್ಲಿ ನಾಣಯ್ಯ ಎಂಬ ಇನಸ್ಪೆಕ್ಟರ್ ಇದ್ದ. ಆತ ಕುದುರೆ ಮೆಲೆ ಸವಾರಿ ಮಾಡುತ್ತಾ ನಿಯಮ ಮೀರಿದವರಿಗೆ ಚಾವಟಿಯಿಂದ ಬಾರಿಸಿ ಹೊಗುತ್ತಿದ್ದ. ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದ ನಂಜುಂಡಸ್ವಾಮಿಯವರನ್ನು ಇದರ ಬಗ್ಗೆ ತಿಳಿಸಲಾಯಿತು. ಅಲ್ಲೆ ಇದ್ದ ಇನ್ಸ್ಪೆಕ್ಟರ್ ಕರೆದು 'ನೀನೇನು ಬ್ರಿಟಿಷರಿಗೆ ಹುಟ್ಟಿದಿಯಾ ಮಗನೆ, ಇನ್ನೊಂದು ಸಲ ನಿನ್ನ ಕೈಯಲ್ಲಿ ಚಾವಟಿ ಕಂಡರೆ ನಮ್ಮ ರೈತರು ಅದನ್ನು ಕಿತ್ತುಕೊಂಡು ನಿನಗೇ ಬಾರಿಸ್ತಾರೆ. ಈ ಆಜ್ಞೆಯನ್ನ ನಾನು ರೈತರಿಗೆ ಈಗಲೇ ಜಾರಿ ಮಾಡಿದ್ದೀನಿ' ಎಂದರು.

ಯಾವುದೇ ಸರಕಾರಿ ಅಧಿಕಾರಿಗಳು ತಮಗೆ ನೀಡಿದ್ದ ಸರಕಾರಿ ವಾಹನಗಳನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿದಾಗ ಅವರ ಮೇಲೆ ಕೇಸ್ ಹಾಕಿಸುತ್ತಿದ್ದರು. ಅಲ್ಲಿಂದ ಇಡೀ ಕರ್ನಾಟಕದ ತುಂಬಾ ಅಧಿಕಾರಿಗಳು ಹಾಗೂ ಅವರ ಚಾಲಕರು ಹಸಿರು ಶಾಲನ್ನ ಕಂಡಾಗ ಹೆದರುತ್ತಿದ್ದರು. ಇಂದು ಲೋಕಾಯುಕ್ತರು ಮಾಡುತ್ತಿರುವ ಕೆಲಸವನ್ನು ಪ್ರೋಫೆಸರ್ ತಮ್ಮ ಕಾಲದಲ್ಲಿ ಮಾಡುತ್ತಿದ್ದರು. ಒಮ್ಮೆ ಶಿವಮೊಗ್ಗದ ಸಬರಿಜಿಸ್ಟರ್ ಕಛೇರಿ ಅಧಿಕಾರಿ ನಾಲ್ಕು ಸಾವಿರ ಲಂಚ ತೆಗೆದುಕೊಂಡಿದ್ದ. ಆದರೆ ಅವನೇ ಲಂಚ ಕೊಟ್ಟವನಂತೆ ಚಿಂತೆ ಮಾಡ್ತಿದ್ದ. ಆಗ ಪ್ರೊಫೆಸರ್ ಬಂದರು ಸೀದಾ ನಾಲ್ಕು ಸಾವಿರ ಅವರ ಮುಂದೆ ಇಟ್ಟು 'ತಗಳಪ್ಪ ಅತ್ಲಾಗೆ, ತಗೋ..... ತಗೊ... ನಿನ್ ದುಡ್ಡ ಯಾರಿಗೆ ಬೇಕು' ಎಂದು ನಿಟ್ಟುಸಿರು ಬಿಟ್ಟರು.

1989 ರಲ್ಲಿ ಧಾರವಾಡ ಗ್ರಾಮೀಣದ ಉಪಚುನಾವಣೆಯಲ್ಲಿ ಪ್ರೋ. ಅವರು ಬಹುಮತದಿಂದ ವಿಧಾನಸಭೆಗೆ ಆಯ್ಕೆಯಾದರು. ವಿಧಾನಸಭೆಯ ಇತಿಹಾಸದಲ್ಲೇ ಶಾಂತವೇರಿ ಗೋಪಾಲಗೌಡರ ನಂತರ, ಬುದ್ಧಿಜೀವಿ ನಾಯಕನೊಬ್ಬ ಅತ್ಯಂತ ಆಳವಾದ ಹಾಗೂ ಸಮಾಜವಾದಿ ದೃಷ್ಟಿಕೋನದಿಂದ ಸಮಸ್ಯೆಗಳ ಕುರಿತು ಧ್ವನಿ ಎತ್ತಿದವರು ಇವರು. ಇವರು ರೈತರ ಕುರಿತು, ಸಮಾಜದ ಕುರಿತು ಸಮಸ್ಯೆಗಳನ್ನು ಮಂಡಿಸುತ್ತಿದ್ದಾಗ ಇಡೀ ವಿಧಾನಸಭೆ ಪಕ್ಷಾತೀತವಾಗಿ ಇವರ ಭಾಷಣವನ್ನು ಆಲಿಸುತ್ತಿದ್ದರು.

ತಮಗಿಂತ ಇಪ್ಪತ್ತು ವರ್ಷ ಚಿಕ್ಕವರಿದ್ದ ಪ್ರತಿಮಾ ಅವರನ್ನ ಮದುವೆಯಾದರು. ಪ್ರತಿಮಾ ಅವರು ಅಪಾರ ದೈವಭಕ್ತರು ಆದರೆ ಪ್ರೋ. ಅವರು ನಾಸ್ತಿಕರು ಆದರೆ ಎಂದಿಗೂ ಅವರ ಪೂಜೆಗೆ ಅಡ್ಡಿಯಾಗಲಿಲ್ಲ. ಹೀಗೆ ರೈತರಿಗೆ ಸ್ವಾಭಿಮಾನ ಪಾಠ, ಮೂಢನಂಬಿಕೆ ವಿರುದ್ಧ ಹೊರಾಟ, ದಲಿತ ಪರವಾದ ಹೋರಾಟ, ಅಧಿಕಾರಿಗಳ ದರ್ಪ ಎಲ್ಲವನ್ನು ಅಡಗಿಸಿದ್ದರು‌. ನಂಜುಂಡಸ್ವಾಮಿಯವರು ಕೇವಲ ಈ ರಾಜ್ಯ ನಾಯಕರಾಗಿರಲಿಲ್ಲ ವಿಶ್ವದ ನಾಯಕರಾಗಿದ್ದರು. ಕೇವಲ ಎತ್ತಿನ ಬಂಡೆಯಲ್ಲಿ ಸವಾರಿ ಮಾಡುತ್ತಿದ್ದ ರೈತರನ್ನು ವಿಮಾನ ಹತ್ತಿಸಿದ ಕೀರ್ತಿ ಪ್ರೋ. ಅವರದು. ಇಡೀ ರಾಜ್ಯ ಸುತ್ತಿದರು, ತಾವೇ ಡ್ರೈವ್ ಮಾಡಿ ನಿದ್ದೆಯಿಲ್ಲದೆ ತಿರುಗಿದರು. ತಮ್ಮ ಆರೋಗ್ಯದ ಕಡೆ ಗಮನ ಹರಿಸದೆ ಹಗಲು, ರಾತ್ರಿ ಹೋರಾಟ ಸಂಘಟನೆ ಎಂದು ತಿರುಗಿದರು. ಕೊನೆಗೆ ಕ್ಯಾನ್ಸರ್ ಕಾಯಿಲೆಯಿಂದ 2004 ರಲ್ಲಿ ನಮ್ಮನ್ನಗಲಿದರು.

ಈಗ ರೈತರ ಪರಸ್ಥಿತಿ‌, ರೈತ ಸಂಘಟನೆಯಲ್ಲಿರುವ ಬಣಗಳು, ನೈಜತೆ ಕಳೆದುಕೊಂಡಿರುವ ರೈತ ನಾಯಕರು. ಕಣ್ಣೀರು ಹಾಕುತ್ತಿರುವ ರೈತ, ದರ್ಪದಿಂದ ತಿರುಗುತ್ತಿರುವ ಅಧಿಕಾರಿಗಳನ್ನ ನೊಡಿದರೆ ಒಮ್ಮೆ ಆ ತೆಳು ದೇಹದ, ಬಿಳಿ ಗಡ್ಡದ, ಕನ್ನಡಕ ಹಾಕಿಕೊಂಡ, ಹೆಗಲ ಮೆಲೆ ಹಸಿರು ಶಾಲುನೊಂದಿಗೆ ರೈತರನ್ನ ಮುನ್ನಡೆಸಿದ, ರೈತರ ಕಣ್ಣಿರು ಒರೆಸಿದ ಕುಳ್ಳಗಿನ ಮನುಷ್ಯ, ವಿಶ್ವ ರೈತ ನಾಯಕ, ಹಸಿರು ಸೇನಾನಿ ಪ್ರೋ. ನಂಜುಂಡಸ್ವಾಮಿ ನೆನಪಾಗುತ್ತಾರೆ. ಅಂತಹ ಇನ್ನೋರ್ವ ನಾಯಕ ಹುಟ್ಟಲೇ ಇಲ್ಲ, ಹುಟ್ಟೋದು ಇಲ್ಲ.

ರೈತರು ಇವರ ಕುರಿತು ಅರಿಯಬೇಕು. ಇನ್ನಷ್ಟು ಮಾಹಿತಿಗಾಗಿ ನಾಡಿನ ಖ್ಯಾತ ಲೇಖಕರು ನಟರಾಜ ಹುಳಿಯಾರ ಬರೆದಿರುವ ಹಸಿರು ಸೇನಾನಿ ಕೃತಿಯನ್ನು ಓದಬಹುದು.

                        ‌‍                        🖋ರಾಜು ಪಾಟೀಲ